ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಟ್‌ ಬಿಕ್ಕಟ್ಟು: ಕಾಣದ ಪರಿಹಾರ

ಇಂದು ನಿರ್ದೇಶಕ ಮಂಡಳಿ ಸಭೆ; ಪ್ರಧಾನಿಗೆ ಪೈಲಟ್‌ ಸಂಘದ ಮೊರೆ
Last Updated 15 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಮುಂಬೈ: ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ಗೆ ತುರ್ತಾಗಿ ಹಣಕಾಸು ನೆರವು ಒದಗಿಸುವ ಸಂಬಂಧ ಸೋಮವಾರ ಇಲ್ಲಿ ನಡೆದ ಎಸ್‌ಬಿಐ ನೇತೃತ್ವದಲ್ಲಿನ ಬ್ಯಾಂಕ್ ಒಕ್ಕೂಟದ ಸಭೆಯು ಖಚಿತ ತೀರ್ಮಾನಕ್ಕೆ ಬರಲು ವಿಫಲಗೊಂಡಿತು.

ದೀರ್ಘ ಸಮಯದವರೆಗೆ ನಡೆದ ಸಭೆಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಸಭೆಯನ್ನು ಮುಂದೂಡಲಾಗಿದೆ.

‘ತುರ್ತು ಹಣಕಾಸು ನೆರವು ನೀಡುವುದಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ನಿರ್ಧಾರಕ್ಕೆ ಬಂದಿಲ್ಲ. ಹೀಗಾಗಿ ಮುಂದೆ ಕೈಗೊಳ್ಳಬೇಕಾದ ನಿಲುವಿನ ಬಗ್ಗೆ ಚರ್ಚಿಸಲು ನಿರ್ದೇಶಕ ಮಂಡಳಿಯು ಮಂಗಳವಾರ ಸಭೆ ಸೇರಲಿದೆ’ ಎಂದು ಸಂಸ್ಥೆಯ ಸಿಇಒ ವಿನಯ್‌ ದುಬೆ ಹೇಳಿದ್ದಾರೆ.

ಸಕಾಲದಲ್ಲಿ ಹಣಕಾಸು ನೆರವು ಬರದಿರುವುದರಿಂದ ಅಂತರರಾಷ್ಟ್ರೀಯ ವಿಮಾನ ಸೇವೆ ರದ್ದುಪಡಿಸಿರುವುದನ್ನು ಇದೇ 18ರವರೆಗೆ ಮುಂದುವರೆಸಲು ಸಂಸ್ಥೆ ನಿರ್ಧರಿಸಿದೆ.

ಸಂಸ್ಥೆಯಲ್ಲಿನ ಪಾಲು ಬಂಡವಾಳ ಸ್ವಾಧೀನಕ್ಕೆ ಪ್ರತಿಯಾಗಿ ₹ 1,500 ಕೋಟಿಗಳ ತುರ್ತು ಸಾಲ ನೀಡಲು ಬ್ಯಾಂಕ್‌ಗಳ ಒಕ್ಕೂಟವು ಮಾರ್ಚ್‌ 25ರಂದು ನಿರ್ಧರಿಸಿತ್ತು. ಆದರೆ, ಇದುವರೆಗೆ ಬ್ಯಾಂಕ್‌ಗಳು ಕೇವಲ ₹ 300 ಕೋಟಿ ವಿತರಿಸಿವೆ. ಇದರಿಂದ ವಿಮಾನಗಳ ಬಾಡಿಗೆ ಪಾವತಿಸಲು ಸಾಧ್ಯವಾಗದ ಕಾರಣಕ್ಕೆ ಸಂಸ್ಥೆಯು ತನ್ನ ಬಹುತೇಕ ವಿಮಾನಗಳ ಸೇವೆ ರದ್ದುಪಡಿಸಿದೆ.

ಡಿಸೆಂಬರ್‌ನಲ್ಲಿ 123 ವಿಮಾನಗಳ ಸೇವೆ ಒದಗಿಸುತ್ತಿದ್ದ ಸಂಸ್ಥೆಯು ಈಗ ಕೇವಲ ಆರೇಳು ವಿಮಾನಗಳ ಸೇವೆ ಒದಗಿಸುತ್ತಿದೆ.

ಇಂದಿನ ಸಭೆಯಲ್ಲಿ ಸಂಸ್ಥೆಗೆ ಹಣಕಾಸು ನೆರವು ಒದಗಿಸುವ ಬಗ್ಗೆ ಖಚಿತ ತೀರ್ಮಾನಕ್ಕೆ ಬರುವ ನಿರೀಕ್ಷೆ ಇತ್ತು. ಆದರೆ, ಯಾವುದೇ ನೆರವು ಒದಗಿಸಲು ಬ್ಯಾಂಕ್‌ಗಳು ಮುಂದೆ ಬರದಿರುವುದರಿಂದ ತೀವ್ರ ನಿರಾಶೆಯಾಗಿದೆ ಎಂದು ಪೈಲಟ್‌ಗಳ ಸಂಘದ ಮೂಲಗಳು ತಿಳಿಸಿವೆ.

ನಾಳೆಯೂ ಬ್ಯಾಂಕ್‌ಗಳಿಂದ ಹಣಕಾಸು ನೆರವು ಒದಗದಿದ್ದರೆ ಸಂಸ್ಥೆಯು ತನ್ನ ವಿಮಾನ ಯಾನ ಸೇವೆ ಮುಂದುವರೆಸುವುದು ಸಾಧ್ಯವಾಗಲಿಕ್ಕಿಲ್ಲ ಎನ್ನುವ ಆತಂಕ ಎದುರಾಗಿದೆ. ಮಂಗಳವಾರದ ನಿರ್ದೇಶಕ ಮಂಡಳಿಯ ಫಲಶ್ರುತಿಯನ್ನು ಸಂಸ್ಥೆಯ ಸಿಬ್ಬಂದಿ ಎದುರು ನೋಡುತ್ತಿದ್ದಾರೆ.

ಪ್ರಧಾನಿಗೆ ಮನವಿ: ಸಂಸ್ಥೆಯಲ್ಲಿನ 20 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ಹಿತರಕ್ಷಣೆಗೆ ಮುಂದಾಗಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ನ್ಯಾಷನಲ್‌ ಏವಿಯೇಟರ್ಸ್‌ ಗಿಲ್ಡ್‌ (ಎನ್‌ಎಜಿ) ಉಪಾಧ್ಯಕ್ಷ ಅಸಿಂ ವಲೈನಿ ತಿಳಿಸಿದ್ದಾರೆ.

ಸಂಸ್ಥೆಯು ತನ್ನ ಕಾರ್ಯಾಚರಣೆ ಮುಂದುವರೆಸಲು ಎಸ್‌ಬಿಐ ನೇತೃತ್ವದ ಬ್ಯಾಂಕ್‌ ಒಕ್ಕೂಟವು ₹ 1,500 ಕೋಟಿ ನೆರವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದೂ ‘ಎನ್ಎಜಿ’ ಮನವಿ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT