ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಉತ್ಪಾದನೆ ಶೇ 35ರಷ್ಟು ಇಳಿಕೆ

2019–20ಕ್ಕೆ ಕರ್ನಾಟಕ ಪ್ಲಾಂಟರ್ಸ್‌ ಅಸೋಸಿಯೇಷನ್‌ ಅಂದಾಜು
Last Updated 11 ನವೆಂಬರ್ 2019, 19:41 IST
ಅಕ್ಷರ ಗಾತ್ರ

ಬೆಂಗಳೂರು: ‘ಅತಿಯಾದ ಮಳೆ, ಪ್ರವಾಹ, ಭೂ ಕುಸಿತ ಮತ್ತು ಬಿಳಿ ಕಾಂಡ ಕೊರಕ ಕೀಟದ ಹಾವಳಿಯಿಂದಾಗಿ ಈ ಬಾರಿ ಕಾಫಿ ಉತ್ಪಾದನೆ ಶೇ 30 ರಿಂದ ಶೇ 35ರಷ್ಟು ಕಡಿಮೆಯಾಗುವ ಅಂದಾಜು ಮಾಡಲಾಗಿದೆ’ ಎಂದು ಕರ್ನಾಟಕ ಪ್ಲಾಂಟರ್ಸ್‌ ಅಸೋಸಿಯೇಷನ್‌(ಕೆಪಿಎ) ಅಧ್ಯಕ್ಷ ಎಂ.ಬಿ. ಗಣಪತಿ ಅವರು ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ತೋಟಗಾರಿಕಾ ಉತ್ಪನ್ನಗಳು ಎದುರಿಸುತ್ತಿರುವ ಸಮಸ್ಯೆಗಳು, ಉದ್ಯಮದ ಬೆಳವಣಿಗೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬೇಕಾಗಿರುವ ನೆರವಿನ ಕುರಿತು ಮಾಹಿತಿ ಹಂಚಿಕೊಂಡರು.

‘2018ರ ಆಗಸ್ಟ್‌ನಲ್ಲಿ ಸುರಿದ ಅತಿಯಾದ ಮಳೆ, ಪ್ರವಾಹ ಮತ್ತು ಭೂಕುಸಿತದಿಂದಾಗಿ2018-19ರಲ್ಲಿ ಕಾಫಿ ಉತ್ಪಾದನೆ ಒಟ್ಟಾರೆ ಶೇ 30ರಷ್ಟು ಮತ್ತು ಕೂರ್ಗ್‌ನಲ್ಲಿಯೇ ಶೇ 45ರಷ್ಟು ಕಡಿಮೆ ಆಗಲಿದೆ. ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ತೋಟಗಳು ಮತ್ತು ಮೂಲಸೌಕರ್ಯ ವ್ಯವಸ್ಥೆಗೆ ಹಾನಿಯಾಗಿದೆ. ಕಾಫಿ ಮಂಡಳಿ ಅಂದಾಜು ಮಾಡಿರುವಂತೆ 95 ಸಾವಿರ ಲಕ್ಷ ಟನ್‌ ಉತ್ಪಾದನೆ ಕಷ್ಟವಾಗಲಿದೆ’ ಎಂದು ಅವರು ತಿಳಿಸಿದರು.

ಬಿಳಿ ಕಾಂಡ ಕೊರಕ: ಬಿಳಿ ಕಾಂಡ ಕೊರಕ ಕೀಟದಿಂದ ಕಾಫಿ ಇಳುವರಿ ಕಡಿಮೆಯಾಗುತ್ತಿದೆ. ಒಟ್ಟಾರೆ ಕಾಫಿ ಬೆಳೆಯುವ ಪ್ರದೇಶದಲ್ಲಿ
ಶೇ 10ರಷ್ಟು ಈ ಕೀಟಗಳಿಂದ ಹಾನಿಗೆ ಒಳಗಾಗುತ್ತಿದೆ.

ಮುಖ್ಯವಾಗಿ ಅರೇಬಿಕಾ ಕಾಫಿ ಈ ಕೀಟದ ಬಾಧೆಗೆ ಹೆಚ್ಚಾಗಿ ಒಳಗಾಗುತ್ತಿದೆ. ಹೀಗಾಗಿ ಬೆಳೆಗಾರರು ಅರೇಬಿಕಾ ಬಿಟ್ಟು ರೋಬಸ್ಟಾ ಬೆಳೆಯಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಅರೇಬಿಕಾ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದ್ದು, ಉತ್ಪಾದನೆಯಲ್ಲಿಯೂ ಇಳಿಕೆ ಕಂಡುಬರುತ್ತಿದೆ. 2017–18ರಲ್ಲಿ ಶೇ 82ರಷ್ಟಿದ್ದ ಉತ್ಪಾದನೆಯು 2018–19ರಲ್ಲಿ ಶೇ 30ಕ್ಕೆ ಕುಸಿದಿದೆ.

‘ಈ ಕೀಟ ಬಾಧೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗಂಭೀರವಾದ ಪ್ರಯತ್ನಗಳೇ ನಡೆಯುತ್ತಿಲ್ಲ. ‘ಉಪಾಸಿ’ಯ ಸಂಶೋಧನಾ ಕೇಂದ್ರದಲ್ಲಿ ಪರಿಹಾರ ಕಂಡುಕೊಳ್ಳಲು ಕೇಂದ್ರದ ನಿಧಿಯನ್ನು ಕೋರಲಾಗಿದೆಯಾದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸಮಸ್ಯೆ ಬಗೆಹರಿಸುವಂತೆ ಕಾಫಿ ಮಂಡಳಿ ಮತ್ತು ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ’ ಎಂದು ಉಪಾಸಿ ಅಧ್ಯಕ್ಷ ನಾಗಪ್ಪನ್ ಅವರು ಅಸಮಾಧಾನ ಹೊರಹಾಕಿದರು.

ಸಮಸ್ಯೆಗಳು

*ಹವಾಮಾನದಲ್ಲಿ ಬದಲಾವಣೆ

*ಅತಿಯಾದ ಮಳೆ, ಪ್ರವಾಹ ಮತ್ತು ಭೂಕುಸಿತ

*ಕನಿಷ್ಠ ಬೆಲೆ, ಉತ್ಪಾದನಾ ವೆಚ್ಚದಲ್ಲಿ ಗಣನೀಯ ಏರಿಕೆ

*ಕುಸಿಯುತ್ತಿರುವ ಉತ್ಪಾದನೆ

*ಮೂಲಸೌಕರ್ಯದ ಸಮಸ್ಯೆಗಳು

*ಅರೇಬಿಕಾ ಕಾಫಿ ಇಳುವರಿ ಇಳಿಕೆ

*ಸಾಲದ ಮೇಲಿನ ಗರಿಷ್ಠ ಬಡ್ಡಿದರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT