ನವದೆಹಲಿ: ಹಿಂದೂಜಾ ಸಮೂಹದ ಅಶೋಕ್ ಲೇಲ್ಯಾಂಡ್‌ನ ಬ್ಯಾಟರಿಚಾಲಿತ ವಾಹನ ವಿಭಾಗ ಸ್ವಿಚ್ ಮೊಬಿಲಿಟಿಯು ಹೊರಗಿನ ಹೂಡಿಕೆಯನ್ನು ತೆಗೆದುಕೊಳ್ಳಲು ಸಿದ್ಧ. ಆದರೆ, ಸರಿಯಾದ ಪಾಲುದಾರರು ಸಿಗಬೇಕು. ಅಲ್ಲಿವರೆಗೆ ಸ್ವತಃ ಹೂಡಿಕೆ ಮಾಡುವುದಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇನು ಅಗರ್‌ವಾಲ್ ಹೇಳಿದ್ದಾರೆ.
ಸ್ವಿಚ್ ಇಂಡಿಯಾ ಘಟಕಕ್ಕೆ ಹಣಕಾಸಿನ ಕೊರತೆ ಇಲ್ಲ. ಆದರೆ, ಸ್ವಿಚ್ ಯುಕೆ ಘಟಕಕ್ಕೆ 2025ನೇ ಆರ್ಥಿಕ ವರ್ಷದಲ್ಲಿ ಹೂಡಿಕೆಯ ಅಗತ್ಯ ಉಂಟಾಗಬಹುದು. ಸ್ವಿಚ್ ಮೊಬಿಲಿಟಿಯ ಯುರೋಪ್ ಮತ್ತು ಬ್ರಿಟನ್ ಮಾರುಕಟ್ಟೆ ಅಷ್ಟೊಂದು ಬಲವಾಗಿಲ್ಲ ಎಂದು ಅಗರ್‌ವಾಲ್ ತಿಳಿಸಿದ್ದಾರೆ.
‘ಹೊರಗಿನ ಹೂಡಿಕೆಗೆ ನಾವು ಮುಕ್ತವಾಗಿದ್ದೇವೆ. ಆದರೆ, ಹೂಡಿಕೆ ಮಾಡುವ ಸಂಸ್ಥೆಯ ಸರಿಯಾದ ಮೌಲ್ಯಮಾಪನವನ್ನು ನಾವು ಮಾಡುತ್ತೇವೆ. ವಿವಿಧ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಮೂಲಕ ಸ್ವಿಚ್ ಮೊಬಿಲಿಟಿಯನ್ನು ಬಲಪಡಿಸುವುದು ನಮ್ಮ ಉದ್ದೇಶ. ಬಸ್ ಮತ್ತು ಲಘು ವಾಹನ ವಿಭಾಗದಲ್ಲಿ ತಂತ್ರಜ್ಞಾನವನ್ನು ಪರಿಪೂರ್ಣಗೊಳಿಸುವ ಕಡೆಗೂ ಗಮನ ಹರಿಸಬೇಕಿದೆ’ ಎಂದು ಅವರು ಹೇಳಿದ್ದಾರೆ.
ಸ್ವಿಚ್‌ನ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಇದೆ. 1,100 ಬಸ್‌ಗಳಿಗೆ ಬೇಡಿಕೆ ಬಂದಿದೆ. 10 ಸಾವಿರಕ್ಕೂ ಹೆಚ್ಚು ಲಘು ವಾಣಿಜ್ಯ ವಾಹನ ಪೂರೈಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.