ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಂಬೆ ದರ ಏರಿಳಿತ: ರೈತರಲ್ಲಿ ಆತಂಕ

ಗುಜರಾತ್ ಮತ್ತು ಮಹಾರಾಷ್ಟ್ರದಿಂದ ಆವಕದಲ್ಲಿ ಹೆಚ್ಚಳ
Last Updated 17 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ವಿಜಯಪುರ: ನಿಂಬೆ ದರದಲ್ಲಿ ಏರಿಳಿತ ಹಾಗೂ ಮಾರುಕಟ್ಟೆಗೆ ಹೊರ ರಾಜ್ಯಗಳಿಂದ ನಿಂಬೆ ಆವಕವಾಗುತ್ತಿರುವುದರಿಂದ ಜಿಲ್ಲೆಯ ರೈತರು ಸೂಕ್ತ ದರ ಸಿಗದೆ ಕೈ ಸುಟ್ಟುಕೊಳ್ಳುವಂತಾಗಿದೆ.

ಪ್ರತಿ ಬುಧವಾರ ಹಾಗೂ ಭಾನುವಾರ ಮಾರುಕಟ್ಟೆಗೆನಿಂಬೆ ಆವಕವಾಗುತ್ತದೆ. 1,100 ಹಣ್ಣುಗಳಿರುವ ಒಂದು ಚೀಲಕ್ಕೆ ಅ.9ರಂದು ₹2,500 ರಿಂದ ₹2,800 ಧಾರಣೆ ಇತ್ತು. ಆದರೆ, ಈ ಬುಧವಾರ (ಅ.16) ಗುಜರಾತ್ ಮತ್ತು ಮಹಾರಾಷ್ಟ್ರದಿಂದ ನಿಂಬೆ ಹೆಚ್ಚಿನ ಪ್ರಮಾಣದಲ್ಲಿ ಆವಕವಾದ ಕಾರಣ ಒಂದು ಚೀಲಕ್ಕೆ ₹1,500 ರಿಂದ ₹1,800ಕ್ಕೆ ಮಾರಾಟವಾಗಿದೆ.

‘ಪ್ರತಿ ವರ್ಷ ಈ ವೇಳೆಗೆ ಸ್ಥಳೀಯವಾಗಿ ಬೆಳೆದ ನಿಂಬೆ ಮಾರುಕಟ್ಟೆಗೆ ಆವಕವಾಗುತ್ತಿತ್ತು. ಈ ಬಾರಿ ಮಳೆ ಇಲ್ಲದೆ ಕಡಿಮೆ ಇಳುವರಿ ಬಂದಿದ್ದರೂ, ಉತ್ತಮ ಧಾರಣೆ ಇದ್ದ ಕಾರಣ ರೈತರು ಖುಷಿಯಾಗಿದ್ದರು. ಆದರೆ, ಈಗ ಹೊರ ರಾಜ್ಯಗಳಿಂದ ನಿಂಬೆ ಆವಕವಾದ್ದರಿಂದ ದರ ಕುಸಿದಿದೆ’ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮೂಲಗಳು ತಿಳಿಸಿವೆ.

‘ಮಳೆಗಾಲ ಮತ್ತು ಬೇಸಿಗೆ ಮುಂಚಿನ ಅವಧಿಯಲ್ಲಿ ಸಾಮಾನ್ಯವಾಗಿ ಒಂದು ಚೀಲಕ್ಕೆ ₹600 ರಿಂದ ₹700 ದರ ಇರುತ್ತಿತ್ತು. ಈ ಬಾರಿ ಕನಿಷ್ಠ ₹1,500 ರಿಂದ ₹2,800ರ ವರೆಗೆ ಮಾರಾಟವಾಗಿದೆ’ ಎಂದೂ ಹೇಳಿವೆ.

‘ಮೂರು ವರ್ಷಗಳಿಂದ ಬರಗಾಲ ಇದ್ದ ಕಾರಣ ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿ ಗಿಡಗಳನ್ನು ಉಳಿಸಿಕೊಂಡಿದ್ದೇವೆ. ಒಂದು ಟ್ಯಾಂಕರ್‌ಗೆ ₹1,200 ರಿಂದ ₹1,500 ಪಾವತಿಸಿದ್ದೇವೆ. ನಿಂಬೆ ಗಿಡಗಳು ಐದು ವರ್ಷದ ಬಳಿಕ ಇಳುವರಿ ಕೊಡಲು ಆರಂಭಿಸುತ್ತವೆ. ಈ ವರ್ಷ ಇಳುವರಿ ಆರಂಭವಾಗಿದೆ. ಆದರೆ, ದರ ಕುಸಿದಿದೆ. ಇದರಿಂದಾಗಿ ಕೈಗೆ ಬಂದ ತುತ್ತು, ಬಾಯಿಗೆ ಬರದಂತಾಗಿದೆ’ ಎಂದು ತಾಂಬಾದ ರೈತ ಅಡವೆಪ್ಪ ರೊಟ್ಟಿ ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಿಂಬೆ ಬೆಳೆಯಲಾಗಿದ್ದು, ಈ ಪೈಕಿ ಸುಮಾರು ಮೂರು ಸಾವಿರ ಪ್ರದೇಶದಲ್ಲಿ ಬೆಳೆದ ನಿಂಬೆ ಗಿಡಗಳು ಒಣಗಿವೆ. ಒಂದು ಹೆಕ್ಟೇರ್‌ಗೆ ಸರಾಸರಿ 10 ಟನ್ ಇಳುವರಿ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT