ಕನಿಷ್ಠ ದಾಖಲೆ ಪತ್ರ ಪಡೆದು ಗ್ಯಾಸ್ ವಿತರಣೆ: ಸಚಿವಾಲಯ ಕ್ರಮ

ನವದೆಹಲಿ: ದೇಶದಲ್ಲಿ ಹೊಸ ಗ್ಯಾಸ್ ಸಂಪರ್ಕ ಪಡೆದುಕೊಳ್ಳಲು ಇರುವ ಪ್ರಕ್ರಿಯೆಯಲ್ಲಿ ಕೆಲವೊಂದು ಬದಲಾವಣೆ ಮಾಡಲಾಗುವುದು ಮತ್ತು ಕನಿಷ್ಠ ದಾಖಲೆ ಪತ್ರಗಳನ್ನು ಪಡೆದುಕೊಂಡು ಹೊಸ ಅಡುಗೆ ಅನಿಲ ಸಂಪರ್ಕ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತೈಲ ಸಚಿವಾಲಯ ಕಾರ್ಯದರ್ಶಿ ತರುಣ್ ಕಪೂರ್ ಹೇಳಿದ್ದಾರೆ.
ಮುಂದಿನ ಎರಡು ವರ್ಷಗಳಲ್ಲಿ ಒಂದು ಕೋಟಿ ಉಚಿತ ಅಡುಗೆ ಅನಿಲ ಸಂಪರ್ಕ ಒದಗಿಸಲು ಸರ್ಕಾರ ಮುಂದಾಗುತ್ತಿದೆ. ಈ ಮೂಲಕ ದೇಶದಲ್ಲಿ ಶೇ 100 ಶುದ‌್ಧ ಇಂಧನ ಬಳಕೆ ಮತ್ತು ಅಡುಗೆ ಅನಿಲ ಸಂಪರ್ಕ ಜಾಲ ಹೊಂದಲು ನಿರ್ಧರಿಸಿದೆ ಎಂದು ಸಚಿವಾಲಯ ಹೇಳಿದೆ.
ಹೆಚ್ಚಿನ ಮಂದಿ ಅಡುಗೆ ಅನಿಲ ಸಂಪರ್ಕ ಸುಲಭದಲ್ಲಿ ಪಡೆಯಲು ಅನುಕೂಲವಾಗುವಂತೆ, ವಿಳಾಸದ ದೃಢೀಕರಣ, ದಾಖಲೆ ಪತ್ರಗಳ ವಿಚಾರದಲ್ಲಿ ಸುಧಾರಣಾ ಕ್ರಮ ಕೈಗೊಳ್ಳಲಾಗುತ್ತದೆ. ಜತೆಗೆ ಮನೆ ಸಮೀಪದ ಯಾವುದೇ ಮೂರು ಡೀಲರ್‌ಗಳಿಂದ ಗ್ಯಾಸ್ ರಿಫಿಲ್ ಬುಕ್ ಮಾಡಲು ಅವಕಾಶವನ್ನು ಶೀಘ್ರದಲ್ಲೇ ಪರಿಚಯಿಸಲಾಗುತ್ತದೆ ಎಂದು ಕಪೂರ್ ತಿಳಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ 8 ಕೋಟಿ ಉಚಿತ ಎಲ್‌ಪಿಜಿ ಸಂಪರ್ಕವನ್ನು ಬಡ ಮಹಿಳೆಯರಿಗೆ ನೀಡಲಾಗಿದೆ. ಇದರಿಂದಾಗಿ ದೇಶದಲ್ಲಿ ಒಟ್ಟಾರೆ ಎಲ್‌ಪಿಜಿ ಬಳಕೆದಾರರ ಸಂಖ್ಯೆ 29 ಕೋಟಿ ತಲುಪಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.