ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಖರ್ಚಿಗೂ ಮಿತಿ ಇರಲಿ

Last Updated 27 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಮದುವೆ ಎಂಬುದು ಭಾರತೀಯರಿಗೆ ಸಡಗರ– ಸಂಭ್ರಮದ ಸಮಾರಂಭ. ಅದರಲ್ಲಿ ಯಾವುದೇ ಕೊರತೆ ಉಂಟಾಗಬಾರದು ಎಂದೇ ಪ್ರತಿಯೊಬ್ಬರೂ ಭಾವಿಸುತ್ತಾರೆ. ಅನೇಕ ಸಂದರ್ಭಗಳಲ್ಲಿ ‌‌‌ಮದುವೆಯ ಸಂಭ್ರಮ ಹೆಚ್ಚಿಸುವ ಭರದಲ್ಲಿ ನಾವು ನಮ್ಮ ಉಳಿತಾಯದ ಹಣವನ್ನೆಲ್ಲ ಖಾಲಿ ಮಾಡಿ ಬಿಡುತ್ತೇವೆ. ಊಟದಿಂದ ಹಿಡಿದು ಅಲಂಕಾರದವರೆಗೆ, ಬಟ್ಟೆ–ಬರೆಯಿಂದ ಆಭರಣಗಳವರೆಗೆ ಯಾವುದರಲ್ಲೂ ಕೊರತೆ ಆಗಬಾರದು, ಎಲ್ಲವೂ ಅತ್ಯುತ್ತಮವಾಗಿರಬೇಕು ಎಂಬುದೇ ಎಲ್ಲರ ಬಯಕೆಯಾಗಿರುತ್ತದೆ.

ಈಗ ಮತ್ತೆ ಮದುವೆ ಸಮಾರಂಭಗಳ ಕಾಲ ಸಮೀಪಿಸುತ್ತಿದೆ. ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವವರಲ್ಲಿ ಅನೇಕರಿಗೆ, ಆ ಸಮಾರಂಭವನ್ನು ಸ್ಮರಣೀಯವಾಗಿಸಬೇಕು ಎಂಬ ಆಸೆಯ ಜೊತೆಗೆ, ಉಳಿತಾಯದ ಹಣ ಸಂಪೂರ್ಣ ಖಾಲಿಯಾಗಬಾರದೆಂಬ ಕಾಳಜಿಯೂ ಇರಬಹುದು. ಇವೆರಡನ್ನೂ ಸಾಧಿಸಲು ಸಾಧ್ಯವೇ? ಸಾಧ್ಯವಾಗಿದ್ದರೆ ಹೇಗೆ…? ಇಲ್ಲಿವೆ ಕೆಲವು ಸಲಹೆಗಳು…

ಮದುವೆಗಾಗಿ ಸಾಲ ಬೇಡ

ನಿಮ್ಮ ಸಂಪತ್ತು ವೃದ್ಧಿಸಿಕೊಳ್ಳುವ ಉದ್ದೇಶಕ್ಕಾದರೆ ಸಾಲ ಮಾಡುವುದರಲ್ಲಿ ತಪ್ಪಿಲ್ಲ. ಅಥವಾ ನಿಮಗೆ ತುರ್ತಾಗಿ ಹಣದ ಅವಶ್ಯಕತೆ ಬಂದು, ಬೇರೆ ದಾರಿಯೇ ಕಾಣದಿದ್ದಾಗ ಸಾಲ ಮಾಡುವುದು ಅನಿವಾರ್ಯವಾಗಬಹುದು. ಆದರೆ, ಮದುವೆಯು ಸಂಪತ್ತು ವೃದ್ಧಿಸುವ ಸಮಾರಂಭವೂ ಅಲ್ಲ, ಸಾಲ ಮಾಡಿಯಾದರೂ ಖರ್ಚು ಮಾಡಬೇಕಾದ ಅನಿವಾರ್ಯತೆಯೂ ಅಲ್ಲ. ಈ ಸಮಾರಂಭಕ್ಕಾಗಿ ಸಾಲ ಮಾಡುವುದರಿಂದ ನಷ್ಟವೇ ಹೆಚ್ಚು.

ಮದುವೆಗಾಗಿ ಸಾಲ ಮಾಡಿ, ಅದಕ್ಕೆ ಪಾವತಿಸುವ ಬಡ್ಡಿಯನ್ನೂ ಲೆಕ್ಕ ಹಿಡಿದರೆ ಈ ಸಮಾರಂಭವು ಅತಿ ದುಬಾರಿ ಎನಿಸುತ್ತದೆ. ಆದ್ದರಿಂದ ಸಾಕಷ್ಟು ಮುಂಚಿತವಾಗಿಯೇ ಮದುವೆಗೆಂದು ಪ್ರತ್ಯೇಕವಾಗಿ ಒಂದಿಷ್ಟು ಉಳಿತಾಯ ಮಾಡುತ್ತಾ ಹೋಗಿ, ಎಸ್‌ಐಪಿ ಮೂಲಕ ಹೂಡಿಕೆ ಮಾಡಿ ಒಂದು ನಿಧಿಯನ್ನು ರೂಪಿಸಬಹುದು. ಆ ಹಣದಲ್ಲಿಯೇ ಸಮಾರಂಭ ಏರ್ಪಡಿಸುವುದು ಸೂಕ್ತ.

ಮುಂದಾಲೋಚನೆ ಇರಲಿ

ಮದುವೆಗೆ ಛತ್ರ ಅಥವಾ ಹೋಟೆಲ್‌ ಕಾಯ್ದಿರಿಸುವುದು, ಅಡುಗೆಯವರನ್ನು ಗೊತ್ತುಪಡಿಸುವುದು, ಆಮಂತ್ರಣ ಹಂಚುವುದು… ಮದುವೆ ಎಂದರೆ ಇಂಥ ಹತ್ತು ಹಲವು ಕೆಲಸಗಳಿರುತ್ತವೆ. ಇವೆಲ್ಲವಕ್ಕೂ ಹಣದ ಜೊತೆಗೆ ಸಾಕಷ್ಟು ದಿನಗಳ ಶ್ರಮದ ಅಗತ್ಯವೂ ಇರುತ್ತದೆ. ಮುಂದಾಲೋಚನೆ ಇಟ್ಟುಕೊಂಡು ಕೆಲಸ ಮಾಡಿದರೆ ಎಲ್ಲ ಬಾಬ್ತುಗಳಲ್ಲೂ ಹಣದ ಉಳಿತಾಯಕ್ಕೆ ಅವಕಾಶ ಇರುತ್ತದೆ. ಮದುವೆ ಸೀಸನ್‌ ಸಮೀಪಿಸಿದ ಬಳಿಕ ಸಿದ್ಧತೆ ಆರಂಭಿಸಿದರೆ ಎಲ್ಲವೂ ದುಬಾರಿಯಾಗಿರುತ್ತದೆ. ಚೌಕಾಸಿಗೂ ಅವಕಾಶ ಇರುವುದಿಲ್ಲ. ಕೆಲವು ತಿಂಗಳುಗಳ ಹಿಂದಿನಿಂದಲೇ ಕೆಲಸ ಆರಂಭಿಸಿದರೆ ಎಲ್ಲ ವಿಚಾರಗಳನ್ನೂ ಅಳೆದು ತೂಗಿ, ಒಂದಷ್ಟು ಉಳಿತಾಯ ಮಾಡಿಕೊಳ್ಳಲು ಅವಕಾಶ ಲಭಿಸುತ್ತದೆ. ಹಣ ಹೊಂದಿಸಿಕೊಳ್ಳಲು ಸಹ ಸಮಯಾವಕಾಶ ದೊರೆಯುತ್ತದೆ.

ಹಗಲು ಹೊತ್ತನ್ನೇ ಆಯ್ದುಕೊಳ್ಳಿ

ಸಂಜೆ ವೇಳೆಯಲ್ಲಿ ಮದುವೆ ಸಮಾರಂಭ ಹಮ್ಮಿಕೊಂಡರೆ ವೆಚ್ಚ ಹೆಚ್ಚುತ್ತದೆ ಎಂಬುದು ಖಚಿತ. ದೀಪಾಲಂಕಾರ, ಊಟ– ತಿಂಡಿ, ಅಲಂಕಾರ… ಹೀಗೆ ಸಂಜೆ ನಡೆಯುವ ಮದುವೆಗಳಿಗೆ ಎಲ್ಲವೂ ದುಬಾರಿಯಾಗುತ್ತವೆ. ಅದರ ಬದಲು, ಹಗಲು ಹೊತ್ತನ್ನೇ ಈ ಸಮಾರಂಭಕ್ಕಾಗಿ ಆಯ್ಕೆ ಮಾಡಿಕೊಳ್ಳಬಹುದಲ್ಲವೇ. ಇದರಿಂದ ದೀಪಾಲಂಕಾರ ಹಾಗೂ ಇತರ ಬಾಬ್ತುಗಳಿಗೆ ಆಗುವ ವೆಚ್ಚಗಳನ್ನು ತಗ್ಗಿಸಬಹುದು.

ಮದುವೆಯನ್ನು ವಾರಾಂತ್ಯ ಅಥವಾ ಸಾರ್ವಜನಿಕ ರಜಾದಿನಗಳಂದು ಇಟ್ಟುಕೊಂಡರೆ ಬರುವ ಅತಿಥಿಗಳಿಗೂ ಅನುಕೂಲವಾಗುತ್ತದೆ. ಮದುವೆ, ಆರತಕ್ಷತೆ… ಮುಂತಾಗಿ ವಿವಿಧ ಕಾರ್ಯಕ್ರಮಗಳನ್ನು ಬೇರೆಬೇರೆ ದಿನಗಳಂದು ಆಯೋಜಿಸುವ ಬದಲು ಒಂದೇ ದಿನ ಎಲ್ಲವನ್ನೂ ಏರ್ಪಡಿಸುವುದರಿಂದಲೂ ಉಳಿತಾಯ ಮಾಡಬಹುದು.

ಯೋಚಿಸಿ ಖರ್ಚು ಮಾಡಿ

ಮದುವೆಯ ದುಬಾರಿ ವೆಚ್ಚಗಳಲ್ಲಿ ಚಿನ್ನಾಭರಣ ಹಾಗೂ ವಧು– ವರರ ಉಡುಪುಗಳೂ ಸೇರುತ್ತವೆ.

ಮದುವೆ ಸೀಸನ್‌ ಬಂತೆಂದರೆ ಭಾರತದಲ್ಲಿ ಚಿನ್ನದ ದರವು ಹೆಚ್ಚಾಗುವುದು ಸಾಮಾನ್ಯ ಸಂಗತಿ. ಆದ್ದರಿಂದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಗಳ ಬ್ರ್ಯಾಂಡೆಡ್‌ ಆಭರಣ ಖರೀದಿಸುವುದಕ್ಕಿಂತ, ಸಾಮಾನ್ಯ ಮಳಿಗೆಗಳಿಂದ ಹಾಲ್‌ಮಾರ್ಕ್‌ ಹೊಂದಿದ ಆಭರಣಗಳನ್ನು ಖರೀದಿಸುವುದರಿಂದ ಹಣದ ಉಳಿತಾಯ ಮಾಡಬಹುದು. ಬ್ರ್ಯಾಂಡೆಡ್‌ ಆಭರಣಗಳಿಗೆ ಮಳಿಗೆಯವರು ಹೆಚ್ಚುವರಿ ಹಣವನ್ನು ಪಡೆಯುತ್ತಾರೆ.

ಉಡುಪುಗಳ ವಿಚಾರದಲ್ಲೂ ಹೀಗೆಯೇ. ಮದುವೆ ಸಮಾರಂಭಕ್ಕೆಂದು ಖರೀದಿಸುವ ದುಬಾರಿ ಬೆಲೆಯ ಉಡುಪನ್ನು ನಂತರದ ದಿನಗಳಲ್ಲಿ ಧರಿಸುವುದು ಅಪರೂಪವೇ. ಒಂದೆರಡು ದಿನಗಳ ಕಾರ್ಯಕ್ರಮಕ್ಕಾಗಿ ಸಾವಿರಾರು ರೂಪಾಯಿ ವ್ಯಯ ಮಾಡುವ ಬದಲು ಉಡುಪನ್ನು ಬಾಡಿಗೆಗೆ ತರಬಹುದು. ಅನೇಕ ಮಳಿಗೆಗಳಲ್ಲಿ ಉಡುಪಿನ ಬೆಲೆಯ ಶೇ 50ರಷ್ಟನ್ನು ಪಾವತಿಸಿದರೆ ಬಾಡಿಗೆಗೆ ಮದುವೆ ಉಡುಪುಗಳನ್ನು ನೀಡಲಾಗುತ್ತದೆ.

ವೆಚ್ಚ ಕಡಿಮೆ ಮಾಡುವ ಇನ್ನೊಂದು ವಿಧಾನವೆಂದರೆ ಉಪನೋಂದಣಿ ಕಚೇರಿಯಲ್ಲಿ ಮದುವೆಯಾಗುವುದು. ಇದಾದ ಬಳಿಕ ಛತ್ರವೊಂದರಲ್ಲಿ ಆರತಕ್ಷತೆ ಹಮ್ಮಿಕೊಂಡು ಗೆಳೆಯರು– ಸಂಬಂಧಿಕರನ್ನು ಆಹ್ವಾನಿಸಬಹುದು.

ಸಾಂಪ್ರದಾಯಿಕ ರೀತಿಯಲ್ಲೇ ಸಮಾರಂಭ ಹಮ್ಮಿಕೊಳ್ಳಬೇಕೆಂಬ ಆಸೆ ಇದ್ದರೆ, ಹೋಟೆಲ್‌ಗಳ ದುಬಾರಿ ಹಾಲ್‌ ಬದಲು, ಯಾವುದಾದರೂ ಸಮುದಾಯ ಭವನ ಅಥವಾ ಛತ್ರದಲ್ಲಿ ಸಮಾರಂಭ ಹಮ್ಮಿಕೊಳ್ಳಬಹುದು.

ಇಂಥ ಸಣ್ಣಪುಟ್ಟ ಬದಲಾವಣೆಗಳು ಮದುವೆಗೆ ಆಗುವ ವೆಚ್ಚದಲ್ಲಿ ಗಮನಾರ್ಹವಾದ ಕಡಿತವನ್ನು ಮಾಡಬಲ್ಲವು. ನೀವು ಶ್ರಮಪಟ್ಟು ಗಳಿಸಿದ ಹಣ ವ್ಯರ್ಥವಾಗಿ ವ್ಯಯವಾಗುವುದು ತಪ್ಪುತ್ತದೆ. ಆ ಹಣವನ್ನು ಬೇರೆ ಅಗತ್ಯಗಳಿಗೆ ಬಳಸಲು ಸಾಧ್ಯವಾಗುತ್ತದೆ.

ಡಿಜಿಟಲ್‌ ಆಮಂತ್ರಣ ಸಾಲದೇ?

ಮದುವೆಯ ಆಮಂತ್ರಣ ಪತ್ರಿಕೆ ಮುದ್ರಿಸಿ ಹಂಚುತ್ತಾ ಹೋಗುವುದು ಹಳೆಯ ಕಾಲದ ವ್ಯವಸ್ಥೆ. ಈಗ ಡಿಜಿಟಲ್‌ ಯುಗ. ಆಮಂತ್ರಣವನ್ನೂ ಡಿಜಿಟಲ್‌ ಮಾಧ್ಯಮದಲ್ಲಿ ಕಳುಹಿಸುವುದು ಬುದ್ಧಿವಂತಿಕೆಯಷ್ಟೇ ಅಲ್ಲ ಉಳಿತಾಯದ ವಿಚಾರವೂ ಹೌದು.

ಸಾಮಾನ್ಯ ಗುಣಮಟ್ಟದ 500 ಕಾರ್ಡ್‌ಗಳನ್ನು ಮುದ್ರಿಸಬೇಕು ಎಂದುಕೊಂಡರೂ ಹಲವು ಸಾವಿರ ರೂಪಾಯಿ ವೆಚ್ಚ ಮಾಡಲೇಬೇಕು. ಅದರ ಬದಲು ಡಿಜಿಟಲ್‌ ಆಮಂತ್ರಣ ತಯಾರಿಸಿ, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಮುಂತಾದ ಜಾಲ ತಾಣಗಳ ಮೂಲಕ ಕಳುಹಿಸಿದರೆ ಇನ್ನಷ್ಟು ಆತ್ಮೀಯತೆಯಿಂದ ಆಹ್ವಾನಿಸಿದಂತಾಗುತ್ತದೆ. ಹಣವೂ ಉಳಿಯುತ್ತದೆ.

(ಲೇಖಕ: ಬ್ಯಾಂಕ್‌ಬಜಾರ್‌ನ ಸಿಇಒ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT