ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ಗಳ ಮಹಾ ವಿಲೀನ

Last Updated 31 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಬ್ಯಾಂಕ್‌ಗಳ ಹಣಕಾಸು ದೃಢತೆಯ ಬಗ್ಗೆ ಗ್ರಾಹಕರಲ್ಲಿ ಅನುಮಾನಗಳು ಮೂಡಿರುವ.ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ 6 ಬ್ಯಾಂಕ್‌ಗಳು 4 ಬ್ಯಾಂಕ್‌ಗಳಲ್ಲಿ ವಿಲೀನವಾಗುವುದು ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ. ವಿಲೀನ ಪ್ರಕ್ರಿಯೆಯ ಮಾಹಿತಿ ಇಲ್ಲಿದೆ.

ಬ್ಯಾಂ ಕ್‌ಗಳ ಬಗ್ಗೆ ಇತ್ತೀಚೆಗೆ ವಾಟ್ಸ್‌ಆ್ಯಪ್ ಗುಂಪುಗಳಲ್ಲಿ ‘ಇನ್ನು ಕೆವೈಸಿಗಿಂತ ಕೆವೈಬಿ ಪರಿಶೀಲನೆ ಹೆಚ್ಚು ಅಗತ್ಯ‘ ಎನ್ನುವ ಸಂದೇಶವೊಂದು ಹರಿದಾಡುತ್ತಿತ್ತು. ಅಂದರೆ ನಿಮ್ಮದೊಂದು ಖಾತೆ ತೆರೆಯಬೇಕಾದರೆ ‘ನಿಮ್ಮ ಗ್ರಾಹಕರನ್ನು ಅರಿತುಕೊಳ್ಳಿ (ಕೆವೈಸಿ)’ ನಿಯಮದ ಅನ್ವಯ ಗ್ರಾಹಕರ ಗುರುತು, ವಿಳಾಸ ಪುರಾವೆ ಎಂದು ಆಧಾರ್, ಪ್ಯಾನ್ ಕಾರ್ಡ್, ಭಾವಚಿತ್ರ ಇತ್ಯಾದಿಗಳನ್ನೆಲ್ಲ ಬ್ಯಾಂಕಿನವರು ಕೇಳುವುದು ಸಹಜ. ಹಾಗೆಯೇ ಗ್ರಾಹಕರು ಸಹಾ ಯಾವುದೇ ಬ್ಯಾಂಕಿನಲ್ಲಿ ಠೇವಣಿ ಇಡುವ ಮೊದಲು ‘ನಿಮ್ಮ ಬ್ಯಾಂಕನ್ನು ಅರಿತುಕೊಳ್ಳಿ (ಕೆವೈಬಿ)’ ಎಂಬ ತತ್ವವನ್ನು ಪಾಲಿಸಿ. ಗೊತ್ತುಗುರಿ ಇಲ್ಲದ ಯಾವುದೋ ಬ್ಯಾಂಕ್‌ನಲ್ಲಿ ದುಡ್ಡಿಟ್ಟು ದಿವಾಳಿಯಾಗಬೇಡಿ ಎಂಬುದು ಈ ಸಂದೇಶದ ಉದ್ದೇಶ. ದೇಶದ ಪ್ರಸಕ್ತ ಬ್ಯಾಂಕಿಂಗ್ ವಿದ್ಯಮಾನಗಳ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಸಂದೇಶವಿದು ಎನ್ನಬಹುದು.

ಕೊರೊನಾ ವೈರಾಣು ಹಾವಳಿಯಿಂದ ಇಡೀ ದೇಶವೇ ಬಂದ್ ಆಗಿ ಹಣಕಾಸು ವಹಿವಾಟುಗಳೆಲ್ಲ ಏರುಪೇರಾಗಿವೆ. ತನ್ನದೇ ಎಡವಟ್ಟುಗಳಿಂದ ಲಕ್ಷಾಂತರ ಠೇವಣಿದಾರರಲ್ಲಿ ಆತಂಕ ಮೂಡಿಸಿದ್ದ ಯೆಸ್ ಬ್ಯಾಂಕ್‌, ಕೇಂದ್ರ ಸರ್ಕಾರ, ಆರ್‌ಬಿಐ ಮತ್ತು ಎಸ್‌ಬಿಐನ ಸಕಾಲಿಕ ಮಧ್ಯಸ್ಥಿಕೆಯಿಂದಾಗಿ ತನ್ನ ವಹಿವಾಟನ್ನು ಪುನಃ ಆರಂಭಿಸಿದೆ. ಬ್ಯಾಂಕ್‌ಗಳ ಹಣಕಾಸು ದೃಢತೆಯ ಬಗ್ಗೆ ಹರಿದಾಡುತ್ತಿರುವ ತರಹೆವಾರಿ ಸುದ್ದಿಗಳು ಗ್ರಾಹಕರಲ್ಲಿ ಆತಂಕ ಮೂಡಿಸಿವೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ 6 ಬ್ಯಾಂಕ್‌ಗಳು 4 ಬ್ಯಾಂಕ್‌ಗಳಲ್ಲಿ ವಿಲೀನವಾಗುವುದು ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ. 10 ಬ್ಯಾಂಕ್‌ಗಳ ಮಹಾವಿಲೀನ ನಂತರದ ಬ್ಯಾಂಕಿಂಗ್‌ ಕಾರ್ಯವಿಧಾನಗಳ ಬಗ್ಗೆ ತಿಳಿದುಕೊಳ್ಳುವುದು ಗ್ರಾಹಕರಿಗೆ ಈಗ ಅನಿವಾರ್ಯವಾಗಿದೆ.

ಖಾಸಗಿ ಕ್ಷೇತ್ರದ ಹಲವು ಬ್ಯಾಂಕ್‌ಗಳು ತಮ್ಮದೇ ಆದ ಹದಗೆಟ್ಟ ಅಥವಾ ದುರುದ್ದೇಶಪೂರಿತ ಆಡಳಿತದಿಂದ ಸಾರ್ವಜನಿಕರಿಗೆ ಆತಂಕ ಮೂಡಿಸಿರುವ ಬೆನ್ನಲ್ಲೇ, ಸರ್ಕಾರಿ ವಲಯದ ಬ್ಯಾಂಕ್‌ಗಳ ಬೃಹತ್ ವಿಲೀನಕಾರ್ಯ ನಡೆಯಲಿದೆ. ಸರ್ಕಾರಿ ಸ್ವಾಮ್ಯದ ಆರು ಬ್ಯಾಂಕ್‌ಗಳು ನಾಲ್ಕು ಬ್ಯಾಂಕ್‌ಗಳಲ್ಲಿ ವಿಲೀನವಾಗಲಿವೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಾದ ಭಾರತೀಯ ಸ್ಟೇಟ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಯುಕೊ ಬ್ಯಾಂಕ್, ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರಗಳು ಈಗಿನ ಸ್ಥಿತಿಯಲ್ಲಿಯೇ ಮುಂದುವರಿಯಲಿವೆ.

ಬ್ಯಾಂಕ್ ರಾಷ್ಟ್ರೀಕರಣದ ಐವತ್ತನೇ ವರ್ಷದಲ್ಲಿ ದೇಶದ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳ ಸಂಖ್ಯೆ 12ಕ್ಕೆ ಸೀಮಿತವಾಗಲಿದೆ. ಈಗಾಗಲೇ ಹಲವು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ಅವುಗಳ ಪ್ರಾದೇಶಿಕ ವ್ಯಾಪ್ತಿಯನ್ನು ರಾಜ್ಯಮಟ್ಟಕ್ಕೆ ವಿಸ್ತರಿಸಿರುವ ಕಾರಣ ದೇಶದಾದ್ಯಂತ ಸುಮಾರು 30 ಗ್ರಾಮೀಣ ಬ್ಯಾಂಕ್‌ಗಳು ಮಾತ್ರ ಕಾರ್ಯನಿರ್ವಹಿಸಲಿವೆ.

ಈ ವಿಲೀನದಿಂದಾಗಿ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯ ಚಿತ್ರಣವೇ ಸಂಪೂರ್ಣ ಬದಲಾಗಲಿದೆ. ಈ ಮಹಾನ್ ವಿಲೀನ ಪ್ರಕ್ರಿಯೆಯು ಕೆಲಕಾಲ ಗ್ರಾಹಕ ಸೇವೆಯ ಮೇಲೆ ಪರಿಣಾಮ ಬೀರುವುದಂತೂ ನಿಜ. ವಿಲೀನೋತ್ತರ ದಿನಗಳಲ್ಲಿ ಆಡಳಿತ ದೃಷ್ಟಿಯಿಂದ ಹಲವು ಶಾಖೆಗಳು ಮತ್ತು ಎಟಿಎಂಗಳನ್ನು ಮುಚ್ಚುವುದು ಅನಿವಾರ್ಯವಾಗಲಿದೆ. ತಂತ್ರಜ್ಞಾನದ ಬದಲಾವಣೆಯಿಂದಾಗಿ ಖಾತಾ ಸಂಖ್ಯೆ, ಚೆಕ್ ಪುಸ್ತಕ ವಿತರಣೆ, ಅಂತರ್ಜಾಲ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮುಂತಾದುವುಗಳನ್ನು ಹೊಸ ತಂತ್ರಜ್ಞಾನಕ್ಕೆ ಪರಿವರ್ತಿಸುವುದು ವಿಳಂಬವಾಗಿ ಗ್ರಾಹಕರಿಗೆ ಕಿರಿಕಿರಿಯಾಗಲಿದೆ.

ವಯೋಸಹಜ ನಿವೃತ್ತಿ ಮತ್ತು ಸ್ವಯಂ ನಿವೃತ್ತಿ ಕಾರಣ ಎಲ್ಲ ಬ್ಯಾಂಕ್‌ಗಳೂ ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ಈವರೆಗೂ ಸಣ್ಣ ಬ್ಯಾಂಕಿನ ಗ್ರಾಹಕರಾಗಿದ್ದವರೆಲ್ಲ ಇನ್ನು ಮುಂದೆ ದೊಡ್ಡ ಬ್ಯಾಂಕಿನ ಗ್ರಾಹಕರಾಗುವುದರಿಂದ ವಿಲೀನೋತ್ತರ ಬ್ಯಾಂಕಿನ ಸಿಬ್ಬಂದಿಯಿಂದ ಪರಿಚಯದ ಮುಗುಳ್ನಗೆ ಸ್ವೀಕರಿಸುವುದೂ ಕಷ್ಟವಾಗುತ್ತದೆ. ಈಗಾಗಲೇ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಸಹವರ್ತಿ ಬ್ಯಾಂಕ್‌ಗಳು ವಿಲೀನವಾದ ನಂತರದ ಪರಿಸ್ಥಿತಿಯನ್ನು ಅವಲೋಕಿಸಿದರೆ ವಿಲೀನೋತ್ತರದ ದಿನಗಳಲ್ಲಿನ ಗ್ರಾಹಕರ ಪರದಾಟ ಅರಿವಿಗೆ ಬರುತ್ತದೆ.

ಇತ್ತೀಚೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ದೇಶದ ಅತಿ ದೊಡ್ಡ ಬ್ಯಾಂಕಿನ ಮುಖ್ಯಸ್ಥರಿಗೆ ಅಸ್ಸಾಂ ರಾಜ್ಯದ ಗ್ರಾಹಕ ಸೇವೆಗೆ ಸಂಬಂಧಿಸಿದಂತೆ ‘ನಿಮ್ಮದು ನಿರ್ದಯಿ ಬ್ಯಾಂಕ್‌’ ಎಂದು ಜರೆದಿದ್ದರು. ಇದಕ್ಕೆ ಕಾರಣ ಖಾತೆ ತೆರೆದು ಮೂರು ವರ್ಷಗಳಾದರೂ, ಕೆವೈಸಿ ನೆಪವೊಡ್ಡಿ ಗ್ರಾಹಕರಿಗೆ ಸರ್ಕಾರದಿಂದ ಜಮೆಯಾದ ಪ್ರೋತ್ಸಾಹ ಧನ ಹಿಂದೆಪಡೆಯಲು ಅವಕಾಶ ನಿರಾಕರಿಸಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.

ಸರ್ಕಾರಿ ಬ್ಯಾಂಕ್‌ಗಳಿಗಿಂತ ಖಾಸಗಿ ಬ್ಯಾಂಕ್‌ಗಳೇ ಶ್ರೇಷ್ಠ ಎಂದು ಅನೇಕ ಕಡೆ ಬಿಂಬಿಸಲಾಗಿತ್ತು. ಈಗ ಖಾಸಗಿ ಬ್ಯಾಂಕ್‌ಗಳ ಉದಾರ ಹಣಕಾಸು ಅವ್ಯವಹಾರಗಳು ಒಂದೊಂದೇ ಹೊರಬರತೊಡಗಿವೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ತಮ್ಮ ಹಿರಿದಾದ ಗಾತ್ರ ನಿಭಾಯಿಸಲು ಅಗತ್ಯ ಸಂಖ್ಯೆಯ ಸಿಬ್ಬಂದಿಗಳಿಲ್ಲದೆ ಗ್ರಾಹಕರಿಂದ ದೂರವಾಗಿ ನಿರ್ದಯಿ ಹಣೆಪಟ್ಟಿ ಹಚ್ಚಿಕೊಳ್ಳುತ್ತಿವೆ. ಅಲ್ಲದೆ ಪ್ರತಿಯೊಂದು ಬ್ಯಾಂಕಿನಲ್ಲೂ ಹೆಚ್ಚುತ್ತಿರುವ ನಿಷ್ಕ್ರಿಯ ಆಸ್ತಿಗಳು, ಬಾಕಿ ಸಾಲದ ವಜಾ, ಒಮ್ಮೆಗೇ ರಿಯಾಯಿತಿಸಹಿತ ಸಾಲ ಇತ್ಯರ್ಥ, ಸಾಲ ಮನ್ನಾ, ಏರುತ್ತಿರುವ ಬ್ಯಾಂಕ್ ವಂಚನೆ, ಬ್ಯಾಂಕ್‌ಗಳ ನಷ್ಟ ಸಂಭಾವ್ಯತೆ, ಬಂಡವಾಳ ಪರ್ಯಾಪ್ತತೆ ಅನುಪಾತಗಳಲ್ಲಿ ಏರುಪೇರು, ವಿಮೆಯಂತಹ ಬ್ಯಾಂಕೇತರ ವ್ಯವಹಾರಗಳಿಗೆ ಆದ್ಯತೆ, ಸ್ಥಳೀಯ ಭಾಷೆ ಬಾರದ ಸಿಬ್ಬಂದಿಗಳ ಕಾರುಬಾರು ಇವೇ ಮುಂತಾದುವುಗಳ ಹಿನ್ನೆಲೆಯಲ್ಲಿ ಸಾರ್ವಜನಿಕರು ‘ನಾವು ವ್ಯವಹರಿಸುವ ಬ್ಯಾಂಕ್‌ ಹೇಗಿದೆ, ಹೇಗಿರಬೇಕು, ನಮ್ಮ ಹಣ ಎಲ್ಲಿ ಸುರಕ್ಷಿತ’ ಎಂದು ಮೊದಲೇ ತಿಳಿದಿರಬೇಕಾದುದು ಅನಿವಾರ್ಯವಾಗಲಿದೆ.

ಬರಿದಾದ ಬ್ಯಾಂಕ್‌ಗಳ ತೊಟ್ಟಿಲು

ಕರ್ನಾಟಕವನ್ನು ‘ಬ್ಯಾಂಕ್‌ಗಳ ತವರೂರು’, ‘ಬ್ಯಾಂಕ್‌ಗಳ ತೊಟ್ಟಿಲು’ ಎಂದೆಲ್ಲಾ ಹೇಳಲಾಗುತ್ತಿತ್ತು. ದೇಶದ ಏಳು ಪ್ರಮುಖ ವಾಣಿಜ್ಯ ಬ್ಯಾಂಕ್‌ಗಳು ಜನಿಸಿದ್ದು ಕರ್ನಾಟಕದಲ್ಲಿಯೇ. 1903ರಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರ ಅಪೇಕ್ಷೆಯಂತೆ ಮೈಸೂರು ಮಹಾರಾಜರ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಸ್ಥಾಪಿತವಾದ ‘ದಿ ಬ್ಯಾಂಕ್ ಆಫ್ ಮೈಸೂರು ಲಿಮಿಟೆಡ್’ ನಂತರ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಆಗಿ ಪರಿವರ್ತನೆಹೊಂದಿ 2016ರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ವಿಲೀನವಾಯಿತು. 1931ರಲ್ಲಿ ಮಂಗಳೂರಿನಲ್ಲಿ ಆರಂಭಗೊಂಡಿದ್ದ ವಿಜಯಾ ಬ್ಯಾಂಕ್‌ ಕಳೆದ ವರ್ಷ ಬ್ಯಾಂಕ್ ಆಫ್ ಬರೋಡದಲ್ಲಿ ವಿಲೀನಗೊಂಡಿತು. 1925ರಲ್ಲಿ ಮಣಿಪಾಲದಲ್ಲಿ ಜನ್ಮತಳೆದಿದ್ದ ಸಿಂಡಿಕೇಟ್ ಬ್ಯಾಂಕ್‌ ಮತ್ತು 1906ರಲ್ಲಿ ಉಡುಪಿಯಲ್ಲಿ ಆರಂಭವಾದ ಕಾರ್ಪೋರೇಷನ್ ಬ್ಯಾಂಕ್‌ ಈಗ ಕ್ರಮವಾಗಿ ಕೆನರಾ ಬ್ಯಾಂಕ್‌ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನಗೊಳ್ಳಲಿವೆ. 1930ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭವಾಗಿ ಖಾಸಗಿ ಬ್ಯಾಂಕ್‌ ಆಗಿಯೇ ಉಳಿದಿದ್ದ ವೈಶ್ಯ ಬ್ಯಾಂಕ್ ಲಿಮಿಟೆಡ್ 2002ರಲ್ಲಿ ಐಎನ್‌ಜಿ ವೈಶ್ಯ ಬ್ಯಾಂಕ್ ಆಗಿ ಪರಿವರ್ತನೆ ಹೊಂದಿತ್ತು. ವಿದೇಶಿ ಮೂಲದ ಬ್ಯಾಂಕ್‌ ಜತೆ ವಿಲೀನವಾದ ಪ್ರಥಮ ಭಾರತೀಯ ಬ್ಯಾಂಕ್ ಎಂಬ ಹೆಗ್ಗಳಿಕೆ ಪಡೆದುಕೊಂಡಿತ್ತು. ಈ ಬ್ಯಾಂಕ್‌ ಸಹಾ 2015ರಲ್ಲಿ ಕೋಟಕ್ ಮಹೀಂದ್ರ ಬ್ಯಾಂಕಿನಲ್ಲಿ ವಿಲೀನವಾಯಿತು.

ಇನ್ನು ದೇಶದ ಬ್ಯಾಂಕಿಂಗ್ ಭೂಪಟದಲ್ಲಿ ಕರ್ನಾಟಕ ಮೂಲದ ಸರ್ಕಾರಿ ವಲಯದ ಕೆನರಾ ಬ್ಯಾಂಕ್‌ (ಬೆಂಗಳೂರು) ಮತ್ತು ಖಾಸಗಿ ವಲಯದ ಕರ್ಣಾಟಕ ಬ್ಯಾಂಕ್‌ (ಮಂಗಳೂರು) ಮಾತ್ರ ಅಸ್ತಿತ್ವದಲ್ಲಿ ಉಳಿಯಲಿವೆ.

ವಿಲೀನಗೊಳ್ಳಲಿರುವ ಬ್ಯಾಂಕ್‌ಗಳು

*ಕೆನರಾ ಬ್ಯಾಂಕ್‌ನಲ್ಲಿ ಸಿಂಡಿಕೇಟ್ ಬ್ಯಾಂಕ್‌

*ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಾರ್ಪೋರೇಷನ್ ಬ್ಯಾಂಕ್‌ ಮತ್ತು ಆಂಧ್ರ ಬ್ಯಾಂಕ್‌

*ಇಂಡಿಯನ್ ಬ್ಯಾಂಕ್‌ನಲ್ಲಿ ಅಲಹಾಬಾದ್ ಬ್ಯಾಂಕ್‌

ವಿಲೀನದ ಉದ್ದೇಶ

*ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸ್ಥಾನಮಾನ ವಿಶ್ವದರ್ಜೆಗೆ ಏರಿಸುವುದು

*ದುರ್ಬಲ ಬ್ಯಾಂಕ್‌ಗಳ ಪುನಶ್ಚೇತನ

*ಬ್ಯಾಂಕಿಂಗ್ ವ್ಯವಸ್ಥೆಗೆ ಕಾಯಕಲ್ಪ ನೀಡುವುದು

*ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ

* 1969ರ ಜುಲೈ 19; 14 ಬ್ಯಾಂಕ್‌ಗಳ ರಾಷ್ಟ್ರೀಕರಣ

* 1980ರ ಏಪ್ರಿಲ್ 15; 6 ಬ್ಯಾಂಕ್‌ಗಳ ರಾಷ್ಟ್ರೀಕರಣ

* ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಏಳು ಸಹವರ್ತಿ ಬ್ಯಾಂಕ್‌ಗಳ ವಿಲೀನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT