ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಪಾಲರಿಗೂ ಬ್ಯಾಡಗಿಗೂ ನಂಟು

ಬ್ಯಾಡಗಿ ಮೆಣಸಿನಕಾಯಿಗೆ ಸ್ಪರ್ಧಾತ್ಮಕ ಬೆಲೆ ದೊರಕಿಸಿದ ಮಹಾಶಯ್
Last Updated 4 ಡಿಸೆಂಬರ್ 2020, 19:23 IST
ಅಕ್ಷರ ಗಾತ್ರ

ಬ್ಯಾಡಗಿ (ಹಾವೇರಿ): ಇಲ್ಲಿಯ ಮೆಣಸಿನಕಾಯಿ ಕಂಪನ್ನು ಜಗತ್ತಿನಾದ್ಯಂತ ಪಸರಿಸಿದ, ಮಸಾಲಾ ಪದಾರ್ಥಗಳ ಮೂಲಕ ಮನೆ ಮಾತಾಗಿದ್ದ ದೆಹಲಿಯ ಎಂಡಿಎಚ್‌ ಮಸಾಲಾ ಕಂಪನಿಯ ಮಾಲೀಕ ಮಹಾಶಯ್‌ ಧರ್ಮಪಾಲ್‌ ಗುಲಾಟಿ ಅವರಿಗೂ ಬ್ಯಾಡಗಿಗೂ ಹಳೆಯ ನಂಟು.

ಪ್ರತಿವರ್ಷ ಇಲ್ಲಿ ಕೆಲಸ ಮಾಡುವ ಹಮಾಲರು, ಮಹಿಳಾ ಕೂಲಿ ಕಾರ್ಮಿಕರಿಗೆ ನಗದು ಹಾಗೂ ಅಕ್ಕಿ ಪೂರೈಸುತ್ತಿದ್ದ ಅವರು ಪಟ್ಟಣದಲ್ಲಿ ವಿದ್ಯಾಮಂದಿರ ಸ್ಥಾಪಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿದ್ದರು. ಅವರ ನಿಧನ ಮೆಣಸಿನಕಾಯಿ ಬೆಳೆಗಾರರಿಗೆ ಹಾಗೂ ವರ್ತಕರಿಗೆ ನೋವು ತಂದಿದೆ.

98ರ ಇಳಿಯವಸ್ಸಿನಲ್ಲಿಯೂ ಸದಾ ಲವಲವಿಕೆಯಿಂದಿದ್ದ ಅವರು ಬ್ಯಾಡಗಿ ಮಾರುಕಟ್ಟೆಗೆ ಹಲವಾರು ಬಾರಿ ಭೇಟಿ ನೀಡಿದ್ದರು. ಕಳೆದ ವರ್ಷವೂ ಮಾರುಕಟ್ಟೆಗೆ ಭೇಟಿ ನೀಡಿದ್ದರು. ಮೆಣಸಿನಕಾಯಿ ಉದ್ಯಮಿ ಹಾಗೂ ಮಾಜಿ ಶಾಸಕ ಸುರೇಶಗೌಡ್ರ ಪಾಟೀಲರಿಗೆ ಆತ್ಮೀಯರಾಗಿದ್ದ ಧರ್ಮಪಾಲ್‌, ಅವರ ಪುತ್ರನ ಮದುವೆಗೂ ಬಂದಿದ್ದರು.

ತಮ್ಮ ಮಸಾಲೆ ಉತ್ಪನ್ನಗಳಿಗೆ ಬ್ಯಾಡಗಿ ಮೆಣಸಿನಕಾಯಿಯನ್ನು ಹೆಚ್ಚು ನೆಚ್ಚಿಕೊಂಡಿದ್ದರು. ಹೀಗಾಗಿ ಅವರು ಮೆಣಸಿನಕಾಯಿ ಕೊಳ್ಳಲು ಆರಂಭಿಸಿದ ಬಳಿಕ ಮೆಣಸಿನಕಾಯಿಗೆ ಸ್ಪರ್ಧಾತ್ಮಕ ಬೆಲೆ ದೊರೆತು ಮೌಲ್ಯ ಹೆಚ್ಚತೊಡಗಿತು ಎನ್ನಲಾಗಿದೆ.

‘25 ವರ್ಷಗಳಿಗೂ ಹೆಚ್ಚು ಕಾಲದಿಂದ ನಮ್ಮೊಂದಿಗೆ ಒಡನಾಟ ಹೊಂದಿದ್ದ ಅವರು ನಮ್ಮ ಕುಟುಂಬದ ಸದಸ್ಯರಿಗೆಲ್ಲ ಆತ್ಮೀಯರಾಗಿದ್ದರು. ಅವರ ವಿನಯ ಆದರ್ಶಗಳು ನಮಗೆ ಮಾದರಿ. ಅವರ ಅಗಲಿಕೆಯಿಂದ ಮಸಾಲೆ ಕ್ಷೇತ್ರ ಹಾಗೂ ಮಾರುಕಟ್ಟೆಗೆ ತುಂಬಲಾರದ ನಷ್ಟ’ ಎಂದು ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ್ರ ಪಾಟೀಲ ಹೇಳಿದರು.

ಪಾಕಿಸ್ತಾನದಲ್ಲಿ ಹುಟ್ಟಿದ್ದ ಧರ್ಮಪಾಲ್‌ ಅವರು ಸ್ವಾತಂತ್ರ್ಯಾ ನಂತರ ದಿಲ್ಲಿಗೆ ವಲಸೆ ಬಂದು ಟಾಂಗಾ ಓಡಿಸುವ ಕಾಯಕದಲ್ಲಿ ನಿರತರಾಗಿದ್ದರು. ಕೊನೆಗೆ ಮಸಾಲೆ ವ್ಯಾಪಾರಕ್ಕೆ ಕಾಲಿಟ್ಟ ಅವರು ಗ್ರಾಹಕ ಬಳಕೆ ವಸ್ತುಗಳ ತಯಾರಿಕಾ ಕ್ಷೇತ್ರದ ಸಿಇಒಗಳ ಪೈಕಿ ಹೆಚ್ಚು ವೇತನ ಪಡೆಯುತ್ತಿದ್ದರು.

‘ಅವರ ಸಂಪಾದನೆಯ ಶೇ 90ರಷ್ಟು ಭಾಗವನ್ನು ಬಡ ಕಾರ್ಮಿಕರಿಗೆ ದಾನ ಮಾಡುತ್ತಿದ್ದರು. ಪ್ರತಿ ವರ್ಷ ₹ 50 ಕೋಟಿ ವಹಿವಾಟು ನಡೆಸುವ ಅವರು ಮೆಣಸಿನಕಾಯಿಗೆ ಸ್ಪರ್ಧಾತ್ಮಕ ಬೆಲೆ ಸಿಗಲು ಕಾರಣರಾಗಿದ್ದರು’ ಎಂದು ಉದ್ಯಮಿ ವಿನಯಗೌಡ್ರ ಪಾಟೀಲ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT