ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಚ್ಚ ಇಳಿಕೆಗೆ ನ್ಯಾನೊ ಡಿಎಪಿ

Published 26 ಏಪ್ರಿಲ್ 2023, 21:14 IST
Last Updated 26 ಏಪ್ರಿಲ್ 2023, 21:14 IST
ಅಕ್ಷರ ಗಾತ್ರ

ನವದೆಹಲಿ: ದೇಶದ ರೈತರು ದ್ರವೀಕೃತ ನ್ಯಾನೊ ಡಿಎಪಿ ಮತ್ತು ನ್ಯಾನೊ ಯೂರಿಯಾ ಬಳಕೆಯನ್ನು ಗರಿಷ್ಠ ಪ್ರಮಾಣದಲ್ಲಿ ಮಾಡಬೇಕು ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಕರೆ ನೀಡಿದ್ದಾರೆ. ಇವುಗಳನ್ನು ವ್ಯಾಪಕವಾಗಿ ಬಳಕೆ ಮಾಡುವುದರಿಂದ ದೇಶವು ರಸಗೊಬ್ಬರ ಉತ್ಪಾದನೆಯಲ್ಲಿ ‘ಆತ್ಮನಿರ್ಭರ’ ಆಗುತ್ತದೆ ಮತ್ತು ಆಮದು ಮೇಲಿನ ಅವಲಂಬನೆ ಕಡಿಮೆ ಆಗುತ್ತದೆ ಎಂದು ಅವರು ಹೇಳಿದ್ದಾರೆ.

ಇಫ್ಕೊ ಕಂಪನಿಯ ನ್ಯಾನೊ (ದ್ರವರೂಪ) ಡಿಎಪಿ ರಸಗೊಬ್ಬರವನ್ನು ವಾಣಿಜ್ಯ ಬಳಕೆಗೆ ಶಾ ಅವರು ಮುಕ್ತವಾಗಿಸಿದ್ದಾರೆ. ಇದರ ಬೆಲೆಯನ್ನು 500 ಮಿಲಿ ಲೀಟರ್‌ನ ಬಾಟಲಿಗೆ ₹ 600 ನಿಗದಿ ಮಾಡಲಾಗಿದೆ. ಇದು ಸಾಂಪ್ರದಾಯಿಕ ಡಿಎಪಿ ರಸಗೊಬ್ಬರದ ಈಗಿನ ಬೆಲೆಯ ಅರ್ಧಕ್ಕಿಂತ ಕಡಿಮೆ. ದ್ರವರೂಪದ ಗೊಬ್ಬರಗಳು ಕೃಷಿ ಉತ್ಪಾದನೆಯ ಪ್ರಮಾಣವನ್ನು ಮತ್ತು ಗುಣಮಟ್ಟವನ್ನು ಹೆಚ್ಚು ಮಾಡುತ್ತವೆ ಎಂದು ಶಾ ಅವರು ಹೇಳಿದ್ದಾರೆ.

50 ಕೆ.ಜಿ. ತೂಕದ ಒಂದು ಚೀಲ ಸಾಂಪ್ರದಾಯಿಕ ಡಿಎಪಿ ಬೆಲೆ ಈಗ ₹ 1,350. 2023–23ರಲ್ಲಿ ಕೇಂದ್ರ ಸರ್ಕಾರವು ರಸಗೊಬ್ಬರ ಸಬ್ಸಿಡಿಗಾಗಿ ₹ 2.25 ಲಕ್ಷ ಕೋಟಿ ವೆಚ್ಚ ಮಾಡಿದೆ.

ಕೃಷಿ ಉತ್ಪಾದನೆಯಲ್ಲಿನ ವೆಚ್ಚವನ್ನು ನ್ಯಾನೊ ಡಿಎಪಿ ಬಳಸಿ ರೈತರು ಶೇ 6ರಿಂದ ಶೇ 20ರವರೆಗೆ ಕಡಿಮೆ ಮಾಡಬಹುದು. ನ್ಯಾನೊ ಯೂರಿಯಾ ಮತ್ತು ನ್ಯಾನೊ ಡಿಎಪಿಗೆ ಇಫ್ಕೊ ಕಂಪನಿಯು 20 ವರ್ಷಗಳ ಅವಧಿಗೆ ಪೇಟೆಂಟ್ ಪಡೆದಿದೆ ಎಂದು ಶಾ ಹೇಳಿದ್ದಾರೆ.

ಇಫ್ಕೊ ಕಂಪನಿಯು ನ್ಯಾನೊ ಡಿಎಪಿ ರಸಗೊಬ್ಬರವನ್ನು ಗುಜರಾತ್‌ನ ಕಲೋಲ್, ಕಾಂಡ್ಲಾ, ಒಡಿಶಾದ ಪಾರಾದೀಪ್‌ನಲ್ಲಿ ಇರುವ ಘಟಕದಲ್ಲಿ ತಯಾರಿಸಲಿದೆ. ಕಲೋಲ್‌ ಘಟಕದಲ್ಲಿ ಉತ್ಪಾದನೆಯು ಈಗಾಗಲೇ ಶುರುವಾಗಿದೆ. ಈ ವರ್ಷ 5 ಕೋಟಿ ಬಾಟಲಿ ನ್ಯಾನೊ (ದ್ರವರೂಪ) ಡಿಎಪಿ ಉತ್ಪಾದನೆ ಆಗಲಿದೆ. ಇದು 25 ಲಕ್ಷ ಟನ್‌ ಸಾಂಪ್ರದಾಯಿಕ ಡಿಎಪಿಗೆ ಸಮ.

ಇಫ್ಕೊ ಕಂಪನಿಯು 2025–26ರವರೆಗೆ ಉತ್ಪಾದಿಸಲಿರುವ 18 ಕೋಟಿ ಬಾಟಲ್ ನ್ಯಾನೊ ಡಿಎಪಿಯು 90 ಲಕ್ಷ ಟನ್ ಸಾಂಪ್ರದಾಯಿಕ ಡಿಎಪಿಗೆ ಪರ್ಯಾಯವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ನ್ಯಾನೊ ಡಿಎಪಿಯಲ್ಲಿ ಶೇ 8ರಷ್ಟು ನೈಟ್ರೊಜನ್, ಶೇ 16ರಷ್ಟು ಫಾಸ್ಪರಸ್ ಇರುತ್ತದೆ. 2021ರ ಆಗಸ್ಟ್‌ ನಂತರ ಒಟ್ಟು 5.44 ಕೋಟಿ ಬಾಟಲಿ ನ್ಯಾನೊ ಯೂರಿಯಾ ಮಾರಾಟ ಮಾಡಿರುವುದಾಗಿ ಇಫ್ಕೊ ಹೇಳಿದೆ.

2021–22ರಲ್ಲಿ ದೇಶವು ಒಟ್ಟು 91.36 ಲಕ್ಷ ಟನ್ ಯೂರಿಯಾ, 54.62 ಲಕ್ಷ ಟನ್ ಡಿಎಪಿ ಆಮದು ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT