ನವದೆಹಲಿ: ಬೈಜುಸ್ ಕಂಪನಿ ವಿರುದ್ಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಸಲ್ಲಿಸಿದ್ದ ಕಾರ್ಪೊರೇಟ್ ದಿವಾಳಿ ಪ್ರಕ್ರಿಯೆಯನ್ನು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು (ಎನ್‌ಸಿಎಲ್‌ಎಟಿ), ಶುಕ್ರವಾರ ವಜಾಗೊಳಿಸಿದೆ.
ಭಾರತೀಯ ಕ್ರಿಕೆಟ್ ತಂಡದ ಪ್ರಾಯೋಜಕತ್ವಕ್ಕೆ ಸಂಬಂಧಿಸಿದಂತೆ ಬೈಜುಸ್ ₹158 ಕೋಟಿ ಬಾಕಿ ಉಳಿಸಿಕೊಂಡಿತ್ತು. ಇದನ್ನು ಪ್ರಶ್ನಿಸಿ ಬಿಸಿಸಿಐ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಬೆಂಗಳೂರು ಶಾಖೆಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ಸ್ವೀಕರಿಸಿದ್ದ ನ್ಯಾಯಮಂಡಳಿಯು ಕಂಪನಿಯ ಆಸ್ತಿಯನ್ನು ವಶಕ್ಕೆ ಪಡೆದಿತ್ತು.
ಅಲ್ಲದೆ, ಆಡಳಿತ ಮಂಡಳಿಯ ನಿರ್ದೇಶಕರನ್ನು ಅಮಾನತುಗೊಳಿಸಿದ್ದರಿಂದ ಬೈಜುಸ್ ಸಂಕಷ್ಟಕ್ಕೆ ಸಿಲುಕಿತ್ತು.
‘ಹಣಕಾಸಿನ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಬೈಜುಸ್ ಮತ್ತು ಬಿಸಿಸಿಐ ಸಲ್ಲಿಸಿರುವ ಪ್ರಮಾಣ ಪತ್ರಕ್ಕೆ ಒಪ್ಪಿಗೆ ನೀಡಲಾಗಿದೆ. ಹಾಗಾಗಿ, ಎನ್‌ಸಿಎಲ್‌ಟಿ ನೀಡಿದ್ದ ಆದೇಶವನ್ನು ರದ್ದುಪಡಿಸಲಾಗಿದೆ’ ಎಂದು ಚೆನ್ನೈನಲ್ಲಿರುವ ಮೇಲ್ಮನವಿ ನ್ಯಾಯಮಂಡಳಿಯ ವಿಭಾಗೀಯ ಪೀಠ ಹೇಳಿದೆ.
ಇದರಿಂದ ಕಂಪನಿಯ ಆಡಳಿತವು ಮತ್ತೆ ಸಂಸ್ಥಾಪಕ ಬೈಜು ರವೀಂದ್ರನ್ ಅವರ ಹಿಡಿತಕ್ಕೆ ಸಿಕ್ಕಿದೆ.
‘ಇದು ಕೇವಲ ಕಾನೂನಿನ ಮೂಲಕ ಸಂದಿರುವ ಜಯವಲ್ಲ. ಕಳೆದ ಎರಡು ವರ್ಷಗಳಿಂದ ಬೈಜುಸ್ ಕುಟುಂಬದ ವಿರೋಚಿತ ಪ್ರಯತ್ನಕ್ಕೆ ಸಿಕ್ಕಿರುವ ಜಯವಾಗಿದೆ’ ಎಂದು ರವೀಂದ್ರನ್ ಪ್ರತಿಕ್ರಿಯಿಸಿದ್ದಾರೆ.