ಪದಚ್ಯುತಿ: ಸೈರಸ್‌ ಮಿಸ್ತ್ರಿ ಮನವಿ ವಜಾ

7

ಪದಚ್ಯುತಿ: ಸೈರಸ್‌ ಮಿಸ್ತ್ರಿ ಮನವಿ ವಜಾ

Published:
Updated:

ಮುಂಬೈ: ಟಾಟಾ ಸನ್ಸ್‌ ಅಧ್ಯಕ್ಷ ಹುದ್ದೆಯಿಂದ ಪದಚ್ಯುತಿಗೊಳಿಸಿದ್ದನ್ನು ಪ್ರಶ್ನಿಸಿದ್ದ ಸೈರಸ್‌ ಮಿಸ್ತ್ರಿ ಅವರ ಅಹವಾಲನ್ನು ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಯು (ಎನ್‌ಸಿಎಲ್‌ಟಿ) ತಳ್ಳಿ ಹಾಕಿದೆ.

ತಮ್ಮ ಪದಚ್ಯುತಿ ವಿಷಯದಲ್ಲಿ ಟಾಟಾ ಸನ್ಸ್‌ನ ನಿರ್ದೇಶಕ ಮಂಡಳಿ ಮತ್ತು ರತನ್‌ ಟಾಟಾ ಅವರಿಂದ ದುರ್ನಡತೆ ನಡೆದಿದೆ ಎನ್ನುವ ಮಿಸ್ತ್ರಿ ಅವರ ಆರೋಪಗಳನ್ನೂ ನ್ಯಾಯಮಂಡಳಿಯು ಅಲ್ಲಗಳೆದಿದೆ.

ಕಂಪನಿಯ ಕಾರ್ಯನಿರ್ವಾಹಕ ಅಧ್ಯಕ್ಷನನ್ನು ಪದಚ್ಯುತಗೊಳಿಸುವ ಅಧಿಕಾರವನ್ನು ಟಾಟಾ ಸನ್ಸ್‌ನ ನಿರ್ದೇಶಕ ಮಂಡಳಿಯು ಹೊಂದಿದೆ ಎಂದೂ ನ್ಯಾಯಮಂಡಳಿಯ  ವಿಶೇಷ ಪೀಠ ತಿಳಿಸಿದೆ.

ಸೈರಸ್‌ ಮಿಸ್ತ್ರಿ ಅವರಲ್ಲಿ ಸಂಸ್ಥೆಯ ನಿರ್ದೇಶಕ ಮಂಡಳಿ ಮತ್ತು ಬಹುಸಂಖ್ಯಾತ ಷೇರುದಾರರು ವಿಶ್ವಾಸ ಕಳೆದುಕೊಂಡಿದ್ದರಿಂದ ಅವರನ್ನು ಹೊರಹಾಕಲಾಗಿದೆ. ಮಿಸ್ತ್ರಿ ಅವರು ಟಾಟಾ ಸಂಸ್ಥೆಗಳಿಗೆ ಸೇರಿದ್ದ ಮಹತ್ವದ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ನೀಡಿದ್ದರು. ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಮಾಡಿದ್ದರು. ಸಂಸ್ಥೆಯ ನಿರ್ದೇಶಕ ಮಂಡಳಿ ವಿರುದ್ಧ ಬಹಿರಂಗವಾಗಿ ಟೀಕೆ ಮಾಡಿದ್ದರು ಎಂದು ಪೀಠ ಹೇಳಿದೆ.

ಅಧ್ಯಕ್ಷನನ್ನು ಪದಚ್ಯುತಿಗೊಳಿಸಲು ಕಾಯ್ದೆಯಲ್ಲಿ ಅವಕಾಶ ಇದೆ. ನಿರ್ದೇಶಕ ಮಂಡಳಿಯ 9 ಸದಸ್ಯರ ಪೈಕಿ 7 ಮಂದಿ ಮಿಸ್ತ್ರಿ ಅವರ ಪದಚ್ಯುತಿ ನಿರ್ಧಾರದ ಪರ ಮತ ಚಲಾಯಿಸಿದ್ದರು ಎಂದು ಟಾಟಾ ಸಮೂಹವು ತನ್ನ ನಿಲುವನ್ನು ಸಮರ್ಥಿಸಿಕೊಂಡಿತ್ತು. ಈ ವಾದಕ್ಕೆ ನ್ಯಾಯಮಂಡಳಿಯು ತನ್ನ ಸಮ್ಮತಿ ಸೂಚಿಸಿದೆ.

ರತನ್‌ ಟಾಟಾ ಮತ್ತು ಸೂನಾವಾಲಾ ಅವರ ವರ್ತನೆಯು ಕಂಪನಿಯ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡಿತ್ತು ಎನ್ನುವ ವಾದದಲ್ಲಿ ಹುರುಳಿಲ್ಲ. ಈ ಎಲ್ಲ  ಕಾರಣಕ್ಕೆ ಮಿಸ್ತ್ರಿ ಅವರ ಪದಚ್ಯುತಿಯು ಕಂಪನಿ ಕಾಯ್ದೆಯ 241ನೆ ಸೆಕ್ಷನ್‌ ಅಡಿ ಕ್ರಮ ಕೈಗೊಳ್ಳಲು ಬರುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ. ಕಂಪನಿಯ ವ್ಯವಹಾರಗಳು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡಿದ್ದರೆ ಮತ್ತು ಕಂಪನಿಯ ಯಾವುದೇ ಒಬ್ಬ ಸದಸ್ಯರ ಅಭಿಪ್ರಾಯ ದಮನ ಮಾಡಿದ್ದರೆ ಈ ನಿಯಮದಡಿ ದೂರು ಸಲ್ಲಿಸಲು ಅವಕಾಶ ಇದೆ.

ಏರ್‌ ಏಷ್ಯಾ, ನ್ಯಾನೊ ಮತ್ತು ಏರ್‌ಸೆಲ್‌ ವಿಷಯದಲ್ಲಿ ಸಂಸ್ಥೆಯಿಂದ ಆಡಳಿತಾತ್ಮಕ ಲೋಪಗಳಾಗಿವೆ ಎನ್ನುವ ಆರೋಪಗಳನ್ನೂ ತಿರಸ್ಕರಿಸಲಾಗಿದೆ. ಮಿಸ್ತ್ರಿ ಅವರ ಎಲ್ಲ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎನ್ನುವ ತೀರ್ಮಾನಕ್ಕೆ ಬರಲಾಗಿದೆ. ನಿರ್ದೇಶಕ ಮಂಡಳಿಯು 2013ರ ಕಂಪನಿ ಕಾಯ್ದೆಯನ್ನು ಪಾಲನೆ ಮಾಡಿದೆ ಎಂದು ಹೇಳಿದೆ.

ಟಾಟಾ ಸನ್ಸ್‌ನ 6ನೇ ಅಧ್ಯಕ್ಷರಾಗಿದ್ದ ಮಿಸ್ತ್ರಿ ಅವರನ್ನು 2016ರ ಅಕ್ಟೋಬರ್‌ನಲ್ಲಿ ಪದಚ್ಯುತಿಗೊಳಿಸಲಾಗಿತ್ತು.

ನಿರಾಶಾದಾಯಕ ತೀರ್ಪು

ನ್ಯಾಯಮಂಡಳಿಯ ಈ ನಿರ್ಧಾರ ನಿರಾಶೆ ಮೂಡಿಸಿದ್ದು, ಅದರಲ್ಲಿ ಆಶ್ಚರ್ಯಪಡುವಂತಹದ್ದು ಏನೂ ಇಲ್ಲ ಎಂದು ಸೈರಸ್‌ ಮಿಸ್ತ್ರಿ ಅವರ ಕಚೇರಿ ಪ್ರತಿಕ್ರಿಯಿಸಿದೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದೂ ಹೇಳಿದೆ.

‘ಎನ್‌ಸಿಎಲ್‌ಟಿ’ ಆದೇಶವನ್ನು ರಾಷ್ಟ್ರೀಯ ಕಂಪನಿ ಕಾಯ್ದೆ ಮೇಲ್ಮನವಿ ನ್ಯಾಯಮಂಡಳಿಯಲ್ಲಿ (ಎನ್‌ಸಿಎಲ್‌ಎಟಿ) ಪ್ರಶ್ನಿಸಲಾಗುವುದು ಎಂದು ತಿಳಿಸಿದೆ.

ಸ್ವಾಗತಾರ್ಹ

‘ಟಾಟಾ ಸನ್ಸ್‌ ಮತ್ತು ಅದರ ಇತರ ಸಂಸ್ಥೆಗಳು ನ್ಯಾಯೋಚಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಈ ಆದೇಶ ಸಮರ್ಥಿಸಿದೆ’ ಎಂದು ಟಾಟಾ ಸನ್ಸ್‌ನ ಅಧ್ಯಕ್ಷ ಎನ್‌. ಚಂದ್ರಶೇಖರನ್‌ ಪ್ರತಿಕ್ರಿಯಿಸಿದ್ದಾರೆ.

‘ಟಾಟಾ ಸಮೂಹವು  ಪಾರದರ್ಶಕತೆ ಮತ್ತು ಉತ್ತಮ ಕಾರ್ಪೊರೇಟ್‌ ಆಡಳಿತದ ಜಾಗತಿಕ ಮಾನದಂಡಗಳನ್ನು ಪಾಲಿಸುವುದಕ್ಕೆ ಸದಾಕಾಲವೂ ಬದ್ಧವಾಗಿರುತ್ತದೆ’ ಎಂದು ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !