ಬುಧವಾರ, ಫೆಬ್ರವರಿ 19, 2020
27 °C
ಸಚಿವಾಲಯವೇ ಕಾರಣ ಆಗಿರಬಹುದು ಎಂದ ಸಚಿವೆ

ತೆರಿಗೆ ಗೊಂದಲಕ್ಕೆ ಸ್ಪಷ್ಟನೆ ಶೀಘ್ರ: ನಿರ್ಮಲಾ ಸೀತಾರಾಮನ್

ಅನ್ನಪೂರ್ಣಾ ಸಿಂಗ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಹೊಸ ವೈಯಕ್ತಿಕ ಆದಾಯ ತೆರಿಗೆ ವ್ಯವಸ್ಥೆಯ ಬಗ್ಗೆ ಮೂಡಿರುವ ಗೊಂದಲಗಳನ್ನು ಬಗೆಹರಿಸಲು ಸ್ಪಷ್ಟೀಕರಣ ನೀಡಲಾಗುವುದು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಹೊಸ ತೆರಿಗೆ ದರದ ಬಗ್ಗೆ ಸ್ಪಷ್ಟತೆಯ ಕೊರತೆ ಇದೆ ಎನ್ನುವುದನ್ನು ಖುದ್ದು ಸಚಿವರೇ ಒಪ್ಪಿಕೊಂಡಿದ್ದಾರೆ. ‘ಬಹುಶಃ ಹಣಕಾಸು ಸಚಿವಾಲಯದಿಂದಲೇ ಹೊಸ ತೆರಿಗೆ ವ್ಯವಸ್ಥೆಯ ಬಗ್ಗೆ ಗೊಂದಲ ಮೂಡಿರಬಹುದು. ಹೀಗಾಗಿಯೇ ಸ್ಪಷ್ಟೀಕರಣ ನೀಡಲು ಆರಂಭಿಸಿದ್ದೇವೆ’ ಎಂದೂ ಹೇಳಿದ್ದಾರೆ.

‘ಹೊಸ ತೆರಿಗೆ ದರದಿಂದ ಆಗಲಿರುವ ಪ್ರಯೋಜನಗಳ ಬಗ್ಗೆ ಸಚಿವಾಲಯವು ಲೆಕ್ಕಾಚಾರಗಳನ್ನು ಮಾಡುತ್ತಿದೆ. ಅದು ಪೂರ್ಣಗೊಂಡ ಬಳಿಕ ಎಲ್ಲರಿಗೂ ಅದನ್ನು ತಿಳಿಸಲಾಗುವುದು.

ಹೊಸ ವ್ಯವಸ್ಥೆಯಲ್ಲಿ ಎಲ್ಲಾ ವಿನಾಯ್ತಿಗಳನ್ನೂ ಕೈಬಿಡಲಾಗಿಲ್ಲ. ಕೆಲವು ವಿನಾಯ್ತಿಗಳು ಇಲ್ಲಿಯೂ ಮುಂದುವರಿಯಲಿವೆ. ಈ ಬಗ್ಗೆ ಮಾಹಿತಿ ನೀಡಲಾಗುವುದು’ ಎಂದು
ಹೇಳಿದ್ದಾರೆ.

‘ಹೊಸ ತೆರಿಗೆ ಹಂತದಲ್ಲಿ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರಿಗೆ ಅತಿ ಹೆಚ್ಚಿನ ತೆರಿಗೆ ದರ ಕಡಿತ ಮಾಡಲಾಗಿದೆ. ಜನರ ಬಳಿ ಹೆಚ್ಚಿನ ಹಣ ಇರಲಿ ಎನ್ನುವುದು ಅದರ ಹಿಂದಿನ ಮೂಲ ಉದ್ದೇಶವಾಗಿದೆ.

‘ಕ್ರಮೇಣ ಎಲ್ಲಾ ರೀತಿಯ ವಿನಾಯ್ತಿಗಳನ್ನೂ ರದ್ದುಪಡಿಸಲಾಗುವುದು. ಇದು ಸಾಧ್ಯವಾಗಲು ತೆರಿಗೆ ದರವು ಈಗಿರುವುದಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಇರಬೇಕು. ಸದ್ಯದ ಮಟ್ಟಿಗೆ ಹೊಸ ತೆರಿಗೆ ದರವನ್ನು ಆಯ್ಕೆಯಾಗಿ ನೀಡಲಾಗಿದ್ದು, ಹಾಲಿ ಜಾರಿಯಲ್ಲಿರುವ ತೆರಿಗೆ ದರವನ್ನೂ ಉಳಿಸಿಕೊಳ್ಳಲಾಗಿದೆ’ ಎಂದು ಅವರು ವಿವರಿಸಿದ್ದಾರೆ.

ಎನ್‌ಆರ್‌ಐ ತೆರಿಗೆ:  ‘ಅನಿವಾಸಿ ಭಾರತೀಯರು (ಎನ್‌ಆರ್‌ಐ) ವಿದೇಶದಲ್ಲಿ ಗಳಿಸುವ ಆದಾಯಕ್ಕೆ ತೆರಿಗೆ ವಿಧಿಸುವ ಯಾವುದೇ ಉದ್ದೇಶ ಇಲ್ಲ. ಆದರೆ, ಭಾರತದಲ್ಲಿ ಗಳಿಸುವ ಆದಾಯಕ್ಕಷ್ಟೇ ತೆರಿಗೆ ಕಟ್ಟಬೇಕಾಗುತ್ತದೆ’ ಎಂದು ನಿರ್ಮಲಾ ಸ್ಪಷ್ಟಪಡಿಸಿದ್ದಾರೆ.

ಎನ್‌ಆರ್‌ಐಗಳು ಭಾರತದಲ್ಲಿ ಆಸ್ತಿ ಹೊಂದಿದ್ದು, ಅದರಿಂದ ಅವರಿಗೆ ಬರುವ ಆದಾಯಕ್ಕೆ ತೆರಿಗೆ ವಿಧಿಸುವ ಎಲ್ಲ ರೀತಿಯ ಹಕ್ಕೂ ಸರ್ಕಾರಕ್ಕೆ ಇದೆ ಎಂದು ಹೇಳಿದ್ದಾರೆ.

ಅನಿವಾಸಿ ಭಾರತೀಯರು ತಮ್ಮ ಸ್ಥಾನಮಾನದ ದುರ್ಬಳಕೆ ಮಾಡಿಕೊಂಡು ತೆರಿಗೆ ವಂಚಿಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು