ನವದೆಹಲಿ: ಬೆಂಗಳೂರು ಸೇರಿದಂತೆ ದೇಶದ ಆರು ಪ್ರಮುಖ ನಗರಗಳಲ್ಲಿ ಅಕ್ಟೋಬರ್–ಡಿಸೆಂಬರ್ ಅವಧಿಯಲ್ಲಿ ಕಚೇರಿ ಸ್ಥಳಾವಕಾಶದ ಬೇಡಿಕೆಯು ಶೇ 92ರಷ್ಟು ಏರಿಕೆಯಾಗಿದೆ ಎಂದು ‘ಕೊಲಿಯರ್ಸ್ ಇಂಡಿಯಾ’ ತಿಳಿಸಿದೆ.
ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಕೊಲಿಯರ್ಸ್ ಇಂಡಿಯಾ ವರದಿಯು, ಪ್ರಸಕ್ತ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಒಟ್ಟು ಕಚೇರಿ ಸ್ಥಳದ 2.02 ಕೋಟಿ ಚದರ ಅಡಿಗಳಷ್ಟು ಆಗಿದ್ದರೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ 1.05 ಕೋಟಿ ಚದರ ಅಡಿ ಆಗಿತ್ತು ಎಂದು ತಿಳಿಸಿದೆ.
ಡಿಸೆಂಬರ್ ತ್ರೈಮಾಸಿಕದಲ್ಲಿ ಉತ್ತಮ ಬೇಡಿಕೆಯಿಂದಾಗಿ ಕಚೇರಿ ಸ್ಥಳ ಒಟ್ಟು ಗುತ್ತಿಗೆ ಶೇ 16ರಷ್ಟು ಏರಿಕೆಯಾಗಿ 5.82 ಕೋಟಿ ಚದರ ಅಡಿಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 5.3 ಕೋಟಿ ಚದರ ಅಡಿ ಇತ್ತು.
ಬೆಂಗಳೂರು, ಚೆನ್ನೈ, ದೆಹಲಿ–ಎನ್‌ಸಿಆರ್, ಹೈದರಾಬಾದ್, ಮುಂಬೈ ಮತ್ತು ಪುಣೆ ನಗರಗಳಲ್ಲಿ ಕಚೇರಿ ಸ್ಥಳಕ್ಕೆ ಇರುವ ಬೇಡಿಕೆ ಮತ್ತು ಪೂರೈಕೆಯ ಮೇಲೆ ಕೋಲಿಯರ್ಸ್ ಇಂಡಿಯ ನಿಗಾ ಇರಿಸಿದೆ.
ಅಂಕಿ–ಅಂಶದ ಪ್ರಕಾರ ಅಕ್ಟೋಬರ್–ಡಿಸೆಂಬರ್ ಅವಧಿಯಲ್ಲಿ ಬೆಂಗಳೂರಲ್ಲಿ ಕಚೇರಿ ಸ್ಥಳ ಗುತ್ತಿಗೆಯು, 55 ಲಕ್ಷ ಚದರ ಅಡಿಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 35 ಲಕ್ಷ ಚದರ ಅಡಿ ಇತ್ತು ಎಂದು ಕೊಲಿಯರ್ಸ್ ತಿಳಿಸಿದೆ.