ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚೇರಿ ಬಾಡಿಗೆ ದರ ಹೆಚ್ಚಳಮುಂಚೂಣಿಯಲ್ಲಿ ಬೆಂಗಳೂರು

Last Updated 25 ನವೆಂಬರ್ 2019, 14:33 IST
ಅಕ್ಷರ ಗಾತ್ರ

ನವದೆಹಲಿ : ಕಚೇರಿ ಬಾಡಿಗೆ ಹೆಚ್ಚಳದಲ್ಲಿ ಬೆಂಗಳೂರಿನ ಪ್ರಮುಖ ವಹಿವಾಟು ಪ್ರದೇಶವು (ಸಿಬಿಡಿ) ಏಷ್ಯಾ ಪೆಸಿಫಿಕ್‌ನಲ್ಲಿ ಶೇ 17.6ರಷ್ಟು ಏರಿಕೆ ಸಾಧಿಸಿ ಮುಂಚೂಣಿಯಲ್ಲಿ ಇದೆ.

ಕಚೇರಿ ಸ್ಥಳಾವಕಾಶಕ್ಕೆ ಭಾರಿ ಬೇಡಿಕೆ ಕಂಡು ಬಂದಿದ್ದರಿಂದ ಈ ವರ್ಷದ ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಈ ಏರಿಕೆ ದಾಖಲಾಗಿದೆ ಎಂದು ಜಾಗತಿಕ ಆಸ್ತಿ ಸಲಹಾ ಸಂಸ್ಥೆ ನೈಟ್‌ ಫ್ರ್ಯಾಂಕ್‌ ವರದಿಯಲ್ಲಿ ತಿಳಿಸಲಾಗಿದೆ.

ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆ, ಇನ್‌ಫಂಟ್ರಿ ರಸ್ತೆ, ರೆಸಿಡೆನ್ಸಿ ರಸ್ತೆ ಒಳಗೊಂಡ ಸೆಂಟ್ರಲ್‌ ಬಿಸಿನೆಸ್‌ ಡಿಸ್ಟ್ರಿಕ್ಟ್‌ (ಸಿಬಿಡಿ) ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಗರಿಷ್ಠ ಪ್ರಮಾಣದ ಕಚೇರಿ ಬಾಡಿಗೆ ಹೆಚ್ಚಳ ದಾಖಲಿಸಿದೆ.

ಬೆಂಗಳೂರು ನಂತರದ ಸ್ಥಾನದಲ್ಲಿ ಮೆಲ್ಬರ್ನ್‌ ಮತ್ತು ಬ್ಯಾಂಕಾಕ್‌ನ ‘ಸಿಬಿಡಿ’ಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿ ಇವೆ.

ಏಷ್ಯಾ – ಪೆಸಿಫಿಕ್‌ ಪ್ರದೇಶದಲ್ಲಿ ಅತ್ಯಂತ ತ್ವರಿತವಾಗಿ ಬೆಳವಣಿಗೆ ಕಾಣುತ್ತಿರುವ 20 ಪ್ರಮುಖ ಕಚೇರಿ ಮಾರುಕಟ್ಟೆಗಳಲ್ಲಿ, ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿನ (ಎನ್‌ಸಿಆರ್‌) ಕನ್ಹಾಟ್‌ ಪ್ಲೇಸ್‌ ಮತ್ತು ಮುಂಬೈನಲ್ಲಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ (ಬಿಕೆಸಿ) ಕ್ರಮವಾಗಿ 7 ಮತ್ತು 11ನೆ ಸ್ಥಾನದಲ್ಲಿ ಇವೆ.

ಭಾರತದ ಆರ್ಥಿಕತೆ ಮಂದಗತಿಯ ಪ್ರಗತಿ ದಾಖಲಿಸುತ್ತಿದ್ದರೂ, ಪ್ರಮುಖ ಸ್ಥಳಗಳಲ್ಲಿನ ಕಚೇರಿ ಬಾಡಿಗೆ ಮಾರುಕಟ್ಟೆಯು ನಿರಂತರವಾಗಿ ಗಮನಾರ್ಹ ಬೆಳವಣಿಗೆ ದಾಖಲಿಸುತ್ತಿದೆ. ಈ ಮಾರುಕಟ್ಟೆಯು ಸುಸ್ಥಿರ ಪ್ರಗತಿಯನ್ನೂ ಕಾಣುತ್ತಿದೆ. ಇದು ಕಚೇರಿ ಬಾಡಿಗೆ ಮೌಲ್ಯ ಹೆಚ್ಚಳದಲ್ಲಿ ಪ್ರತಿಫಲನಗೊಳ್ಳುತ್ತಿದೆ ಎಂದು ನೈಟ್‌ ಫ್ರ್ಯಾಂಕ್‌ ವರದಿಯಲ್ಲಿ ತಿಳಿಸಲಾಗಿದೆ.

ಸ್ಪರ್ಧಾತ್ಮಕ ದರ: ‘ದೆಹಲಿ ಮತ್ತು ಮುಂಬೈ ‘ಸಿಬಿಡಿ’ಗೆ ಹೋಲಿಸಿದರೆ, ಸ್ಪರ್ಧಾತ್ಮಕ ದರಗಳಿಂದಾಗಿ ಬೆಂಗಳೂರು ‘ಸಿಬಿಡಿ’ಯು ಕಚೇರಿ ಗುತ್ತಿಗೆ ಚಟುವಟಿಕೆಗಳಲ್ಲಿ ನಿರಂತರ ಪ್ರಗತಿ ದಾಖಲಾಗುತ್ತಿದೆ. ಕಚೇರಿ ಸ್ಥಳಾವಕಾಶಕ್ಕಾಗಿ ಇಲ್ಲಿ ನಿರಂತರ ಬೇಡಿಕೆ ಕಂಡು ಬರುತ್ತಿದೆ’ ಎಂದು ನೈಟ್‌ ಫ್ರ್ಯಾಂಕ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಶಿಶಿರ್‌ ಬೈಜಾಲ್‌ ಹೇಳಿದ್ದಾರೆ.

ನಗರ; ಕಚೇರಿ ಬಾಡಿಗೆ ಹೆಚ್ಚಳ (%)

ಬೆಂಗಳೂರು;17.6

ಮೆಲ್ಬರ್ನ್;15.5

ಬ್ಯಾಂಕಾಕ್;9.4

ದೆಹಲಿ (ಎನ್‌ಸಿಆರ್‌);4.4

ಮುಂಬೈ;2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT