ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚೇರಿ ಪ್ರೇಮ ಸಲ್ಲಾಪ: ವೃತ್ತಿ-ಕೌಟುಂಬಿಕ ಜೀವನದಲ್ಲಿ ಸಮತೋಲನ ಸಾಧಿಸುವ ಸವಾಲು

Last Updated 16 ಜೂನ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ: ಕಾರ್ಪೊರೇಟ್‌ಗಳ ಉನ್ನತ ಅಧಿಕಾರಿಗಳು ತಮ್ಮೆಲ್ಲ ಕೆಲಸದ ಒತ್ತಡದ ಮಧ್ಯೆ ಸಹೋದ್ಯೋಗಿಗಳತ್ತ ಆಕರ್ಷಿತರಾಗಿ ವಿವಾಹ ಬಂಧನಕ್ಕೆ ಒಳಗಾದಾಗ ಹಿತಾಸಕ್ತಿ ಸಂಘರ್ಷದ ಬಗ್ಗೆ ಎಚ್ಚರವಹಿಸಬೇಕು ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ವೃತ್ತಿ ಬದುಕಿನ ಸವಾಲುಗಳನ್ನು ಎದುರಿಸುತ್ತ, ಕೌಟುಂಬಿಕ ಬದುಕನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ಸಮತೋಲನ ಸಾಧಿಸಲು ಉನ್ನತ ಹುದ್ದೆಯಲ್ಲಿ ಇರುವ ಸ್ತ್ರೀ – ಪುರುಷರು ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸಿಇಒ ಹುದ್ದೆಯಲ್ಲಿ ಇರುವ ಪತಿ – ಪತ್ನಿ ಅನೇಕ ಸಂದರ್ಭದಲ್ಲಿ ಬೇರೆ, ಬೇರೆ ನಗರಗಳಲ್ಲಿ ನೆಲೆಸಿರಬೇಕಾಗುತ್ತದೆ. ವೈವಾಹಿಕ ಬಾಂಧವ್ಯ ಗಟ್ಟಿಗೊಳಿಸಲು ಸಾಕಷ್ಟು ದೂರ ಪ್ರಯಾಣವನ್ನೂ ಮಾಡಬೇಕಾಗುತ್ತದೆ.

‘ವೃತ್ತಿ ಬದುಕಿನ ಅನೇಕ ಸಂದರ್ಭಗಳಲ್ಲಿ ಯಂತ್ರದಂತೆ ದುಡಿಯುವವರಲ್ಲಿ ವೈವಾಹಿಕ ಬದುಕಿನಲ್ಲಿ ಸಮತೋಲನ ಕಾಯ್ದುಕೊಳ್ಳಲು ಬದ್ಧತೆಯೂ ಬೇಕಾಗುತ್ತದೆ’ ಎಂದು ಲೇಖಕ ಅರವಿಂದ ಪರಾಶರ ಅವರು ಹೇಳಿದ್ದಾರೆ. ಡೆಲ್‌, ಜೆನ್‌ಪ್ಯಾಕ್ಟ್‌ ಮತ್ತು ಜಿಇ ಕಂಪನಿಗಳಲ್ಲಿ ಹಿರಿಯ ಹುದ್ದೆಯಲ್ಲಿದ್ದು ಆನಂತರ ಕೆಲಸ ತೊರೆದಿರುವ ಇವರು ಈಗ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ.

‘ಸದ್ಯದ ಕಾರ್ಪೊರೇಟ್‌ ಪರಿಸರದಲ್ಲಿ ಉದ್ಯೋಗಿಗಳು ತಮ್ಮ ಕೆಲಸದ ಬಹುಭಾಗವನ್ನು ಕಚೇರಿಯಲ್ಲಿಯೇ ಕಳೆಯುತ್ತಾರೆ. ಹೀಗಾಗಿ ಅನೇಕರು ಸಹಜವಾಗಿಯೇ ಕೆಲಸದ ಸ್ಥಳದಲ್ಲಿಯೇ ಸಂಗಾತಿಗಳನ್ನು ಆಯ್ಕೆ ಮಾಡಿಕೊಂಡು ದಾಂಪತ್ಯ ಬದುಕಿಗೆ ಕಾಲಿಡುತ್ತಾರೆ. ದಂಪತಿ ಒಂದೇ ಕಚೇರಿಯ ಒಂದೇ ವಿಭಾಗದಲ್ಲಿ ಕೆಲಸ ಮಾಡುವುದು ಸರಿಯಲ್ಲ. ಅದರಿಂದ ಹಿತಾಸಕ್ತಿ ಸಂಘರ್ಷ ಉದ್ಭವಿಸುವ ಅಪಾಯ ಇದ್ದೇ ಇರುತ್ತದೆ’ ಎಂದು ಸ್ಟೆಲ್ಲರ್‌ ಸರ್ಚ್‌ನ ಸ್ಥಾಪಕಿ ಶೈಲಜಾ ದತ್ತ ಹೇಳಿದ್ದಾರೆ.

‘ಸಂಗಾತಿಗಳು ದೊಡ್ಡ ಸಂಸ್ಥೆಯಲ್ಲಿ ಬೇರೆ, ಬೇರೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರೆ, ಕಚೇರಿ ಕೆಲಸಕ್ಕೆ ಅವರಿಬ್ಬರ ಮಧ್ಯೆ ಪರಸ್ಪರ ಸಂವಹನ ಇರದಿರುವುದು ಅವರಿಬ್ಬರ ವೃತ್ತಿ ಮತ್ತು ವೈವಾಹಿಕ ಬದುಕಿಗೆ ಒಳ್ಳೆಯದು’ ಎಂದೂ ಅವರು ಹೇಳಿದ್ದಾರೆ.

‘ಕಚೇರಿ ಪ್ರೇಮ ಸಲ್ಲಾಪದ ಬಗ್ಗೆ ಉದ್ಯೋಗಿಗಳು ಮತ್ತು ಕಂಪನಿಗಳು ಎಚ್ಚರದ ನಿಲುವು ತಳೆದಿರಬೇಕು’ ಎಂದು ಲೇಖಕಿ ಒಶಿಕ್ಕಾ ಲಂಬ್‌ ಅಭಿಪ್ರಾಯಪಟ್ಟಿದ್ದಾರೆ.

‘ಕಚೇರಿ ಕೆಲಸದ ವೇಳೆಯಲ್ಲಿ ಸಹೋದ್ಯೋಗಿಗಳು ಪ್ರೇಮ ಸಲ್ಲಾಪದಲ್ಲಿ ಇಲ್ಲವೆ ಬೇರೆ ಯಾವುದೇ ಕಾರಣಕ್ಕೆ ವಾದ – ವಿವಾದಕ್ಕೆ ಇಳಿದರೆ ಕಚೇರಿ ಕೆಲಸಕ್ಕೆ ಅಡಚಣೆ ಉಂಟಾಗುತ್ತದೆ. ಇದೇ ಕಾರಣಕ್ಕೆ ಉನ್ನತ ಹುದ್ದೆಗಳಲ್ಲಿ ಇರುವವರ ಪ್ರೇಮ ಪ್ರಕರಣಗಳ ಬಗ್ಗೆ ಕಚೇರಿಗಳ ಮಾನವ ಸಂಪನ್ಮೂಲ ವಿಭಾಗಗಳು ಕಠಿಣ ನಿಯಮಗಳನ್ನು ಪಾಲಿಸುತ್ತಿವೆ.

‘ಕೆಲವರು ಕಚೇರಿಗಳಲ್ಲಿ ಪಕ್ಕಾ ವೃತ್ತಿಪರರಂತೆ ವರ್ತಿಸಿ ಪ್ರಬುದ್ಧತೆ ತೋರುತ್ತಾರೆ. ತಮ್ಮ ಕೌಟುಂಬಿಕ ಬದುಕು ವೃತ್ತಿ ಬದುಕಿನ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರದಂತೆ ಕಟ್ಟೆಚ್ಚರ ವಹಿಸುತ್ತಾರೆ’ ಎಂದೂ ಅವರು ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT