ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಈರುಳ್ಳಿ ಕಟಾವು ಪ್ರಾರಂಭ: ಲಾಭದ ನಿರೀಕ್ಷೆಯಲ್ಲಿ ರೈತರು

Published : 11 ಸೆಪ್ಟೆಂಬರ್ 2024, 19:14 IST
Last Updated : 11 ಸೆಪ್ಟೆಂಬರ್ 2024, 19:14 IST
ಫಾಲೋ ಮಾಡಿ
Comments

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನಲ್ಲಿ ಮುಂಗಾರು ಋತುವಿನ ಈರುಳ್ಳಿ ಕಟಾವು ಪ್ರಾರಂಭವಾಗಿದೆ. ಮಾರುಕಟ್ಟೆಯಲ್ಲಿ ‘ಎ’ ಗ್ರೇಡ್ ಈರುಳ್ಳಿಗೆ ಉತ್ತಮ ಬೆಲೆಯಿದ್ದು, ಬೆಳೆಗಾರರು ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದಾರೆ.

ಈ ವರ್ಷ ತಾಲ್ಲೂಕಿನಲ್ಲಿ 1,250 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ಇಲ್ಲಿನ ರೈತರು ಬೆಂಗಳೂರು ಮಾರುಕಟ್ಟೆಯನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ.

ಇಟ್ಟಿಗಿ ಹೋಬಳಿಯ ಇಟ್ಟಿಗಿ, ಉತ್ತಂಗಿ, ತಳಕಲ್ಲು, ಕೆಂಚಮ್ಮನಹಳ್ಳಿ, ಮಹಾಜನದಹಳ್ಳಿ, ಸೋಗಿ ಗ್ರಾಮ, ಹಡಗಲಿ, ಹಿರೇಹಡಗಲಿ ಹೋಬಳಿಯ ಕೆಲವು ಗ್ರಾಮಗಳಲ್ಲಿ ರೈತರು ಈರುಳ್ಳಿ ಬೆಳೆದಿದ್ದಾರೆ.

ಐದಾರು ವರ್ಷದಿಂದ ಈರುಳ್ಳಿ ಬೆಳೆಗೆ ಕೊಳೆ ರೋಗ ಬಂದು ಬೆಳೆಗಾರರು ನಷ್ಟ ಅನುಭವಿಸಿದ್ದರು. ಬೆಳೆ ನಿರ್ವಹಣೆ ಖರ್ಚು ಲಭಿಸದೆ ಇದ್ದುದರಿಂದ ಹಲವು ರೈತರು ಈರುಳ್ಳಿ ಕೃಷಿಯಿಂದ ವಿಮುಖರಾಗಿದ್ದರು. ತಾಲ್ಲೂಕಿನಲ್ಲಿ ಈ ಹಿಂದೆ ಮೂರು–ನಾಲ್ಕು ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತಿತ್ತು.

‘ಎರಡು ಎಕರೆಯಲ್ಲಿ ಈರುಳ್ಳಿ ಬೆಳೆದು ಕಟಾವು ಮಾಡುತ್ತಿದ್ದೇವೆ. 120 ಕ್ವಿಂಟಲ್ ನಿರೀಕ್ಷೆಯಲ್ಲಿದ್ದೇವೆ. ಬೆಳೆ ನಿರ್ವಹಣೆಗೆ ₹1.50 ಲಕ್ಷ ಖರ್ಚು ಮಾಡಿದ್ದು, ಈ ಬಾರಿ ಮಾರುಕಟ್ಟೆಯಲ್ಲಿ ಸ್ಥಿರ ಬೆಲೆ ಇರುವುದರಿಂದ ಆದಾಯ ಕೈ ಸೇರುವ ನಿರೀಕ್ಷೆ ಇದೆ’ ಎಂದು ಉತ್ತಂಗಿ ಗ್ರಾಮದ ರೈತ ಅಂಗಡಿ ಕೊಟ್ರೇಶ ಹೇಳಿದರು.

‘ಕೇಂದ್ರ ಸರ್ಕಾರವು ರೈತರಿಂದ ಕ್ವಿಂಟಲ್‌ಗೆ ₹2,500 ದರದಲ್ಲಿ ಈರುಳ್ಳಿ ಖರೀದಿಸಿ, ಕೆ.ಜಿಗೆ ₹ 35ರಂತೆ ಗ್ರಾಹಕರಿಗೆ ಮಾರಲು ಮುಂದಾಗುತ್ತಿರುವುದು ಸರಿಯಲ್ಲ.‌ ಪ್ರತಿ ಕ್ವಿಂಟಲ್ ಈರುಳ್ಳಿಯನ್ನು ₹7,000 ದರದಲ್ಲಿ ಖರೀದಿಸಿ, ಗ್ರಾಹಕರಿಗೆ ಮಾರಾಟ ಮಾಡಬೇಕು. ಆಗ ಬೆಳೆಗಾರರಿಗೆ ನಷ್ಟವಾಗುವುದಿಲ್ಲ’ ಎಂಬುದು ಈರುಳ್ಳಿ ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎನ್.ಎಂ. ಸಿದ್ದೇಶ ಅವರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT