ಶನಿವಾರ, ನವೆಂಬರ್ 16, 2019
24 °C
ಹಾಕಿದ ಬಂಡವಾಳವೂ ಕೈಸೇರದ ಸ್ಥಿತಿ

ಶೇ 90ರಷ್ಟು ಬೆಳೆ ಹಾನಿ: ರೈತನ ಕಣ್ಣೀರು ಹೆಚ್ಚಿಸಿದ ಈರುಳ್ಳಿ

Published:
Updated:
Prajavani

ಹುಬ್ಬಳ್ಳಿ: ರೈತನ ಕಿಸೆ ತುಂಬಿಸಬೇಕಿದ್ದ ಈರುಳ್ಳಿ ಈ ಬಾರಿ ಆತನಿಗೆ ಕೇವಲ ಕಣ್ಣೀರನ್ನಷ್ಟೇ ತರಿಸಿದೆ. ನಿರಂತರವಾಗಿ ಸುರಿದ ಮಳೆಗೆ ಬಹುತೇಕ ಬೆಳೆ ಹಾನಿಯಾಗಿದ್ದರೆ, ಅಲ್ಪಸ್ವಲ್ಪ ಉಳಿದ ಬೆಳೆಗೆ ಬೆಲೆ ಕುಸಿತದ ಬರೆ ಬಿದ್ದಿದೆ.

ಮಳೆಯ ರಭಸಕ್ಕೆ ಈರುಳ್ಳಿ ಬೆಳೆಯ ಕುರುಹು ಕೂಡಾ ಸಿಗದಂತೆ ಕೆಲವೆಡೆ ಜಮೀನು ಹಾನಿಗೊಂಡಿದೆ. ನೀರು ನಿಂತು ಕೊಳೆರೋಗ ಬಂದು, ಕೊಯ್ಲಿಗೆ ಬಂದಿದ್ದ ಬೆಳೆ ಹಳದಿ ಬಣ್ಣಕ್ಕೆ ತಿರುಗಿದೆ. ಕೊಳೆಯುತ್ತಿರುವ ಈರುಳ್ಳಿಯನ್ನು ಕೀಳುವುದಕ್ಕೂ ರೈತ ಕಷ್ಟಪಡುತ್ತಿದ್ದಾನೆ. ಇದರ ಮಧ್ಯೆಯೇ ನಿತ್ಯ ಮಳೆ ಸುರಿಯುತ್ತಿದೆ.

‘ಈ ಬಾರಿ ಮಳೆಯನ್ನೇ ನಂಬಿಆರು ಎಕರೆ ಗುತ್ತಿಗೆ ಭೂಮಿ ಸೇರಿದಂತೆ ಒಟ್ಟು ಎಂಟು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದೆ. ಎಕರೆಗೆ ₹25 ಸಾವಿರ ಖರ್ಚು ಮಾಡಿದ್ದೆ. ಆದರೆ, ಬಿಡದೆ ಸುರಿದ ಮಳೆ ಎಲ್ಲವನ್ನೂ ಸರ್ವನಾಶ ಮಾಡಿತು’ ಎಂದು ಕುಸುಗಲ್‌ನ ರೈತ ಚನ್ನಪ್ಪ ಈರಪ್ಪ ಮ್ಯಾಗೇರಿ ‘ಪ್ರಜಾವಾಣಿ’ ಜತೆ ಅಳಲು ತೋಡಿಕೊಂಡರು.

ಆತ್ಮಹತ್ಯೆಯೇ ಅಂತಿಮ ದಾರಿ: ‘ಮಳೆಗೆ ಬೆಳೆ ಕೊಚ್ಚಿ ಹೋಗಿ, ಜಮೀನಿನಲ್ಲಿ ಮರಳು ತುಂಬಿಕೊಂಡಿದೆ. ಕೊಳೆರೋಗದಿಂದ ಹಳದಿ ಬಣ್ಣಕ್ಕೆ ತಿರುಗಿರುವ ಬೆಳೆಯನ್ನು ಕಿತ್ತು, ಮುಂದಿನ ಬೆಳೆಗೆ ಭೂಮಿಯನ್ನು ಹದಗೊಳಿಸಲೂ ಸಹ ಕೈಯಲ್ಲಿ ನಯಾ ಪೈಸೆಯೂ ಇಲ್ಲ.

ಸರ್ಕಾರ ನೆರವಿಗೆ ಬರದಿದ್ದರೆ, ಆತ್ಮಹತ್ಯೆಯೇ ಉಳಿದಿರುವ ಅಂತಿಮ ದಾರಿ’ ಎಂದು ರೈತ ಹನುಮಂತಪ್ಪ ಜುಲಪ್ಪವನರ ಕಣ್ಣೀರಿಟ್ಟರು.‌

ಕ್ವಿಂಟಲ್‌ಗೆ ₹ 600: ‘ಕೆಲದಿನಗಳ ಹಿಂದೆ ಕ್ವಿಂಟಲ್‌ ಈರುಳ್ಳಿಗೆ ₹7ರಿಂದ ₹8 ಸಾವಿರ ದರವಿತ್ತು. ಇದೀಗ ಒಮ್ಮೆಲೆ ₹2 ಸಾವಿರಕ್ಕೆ ಕುಸಿದಿದೆ. ಅಲ್ಪಸ್ವಲ್ಪ ಕೊಳೆತಿದ್ದ ಈರುಳ್ಳಿಯನ್ನು ಕ್ವಿಂಟಲ್‌ಗೆ ₹600ಕ್ಕೆ ಕೇಳಿದರು’ ಎಂದು ರೆಹಮಾನ್ ಸಾಬ್ ಹುಬ್ಬಳ್ಳಿ ಬೇಸರ ವ್ಯಕ್ತಪಡಿಸಿದರು.

19 ಸಾವಿರ ಹೆಕ್ಟೇರ್‌ನಲ್ಲಿ ನಷ್ಟ
‘ಜಿಲ್ಲೆಯಾದ್ಯಂತ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ಈ ಪೈಕಿ, ಅತಿವೃಷ್ಟಿಯಿಂದಾಗಿ 19 ಸಾವಿರ ಹೆಕ್ಟೇರ್‌ನಲ್ಲಿದ್ದ ಬೆಳೆ ನಷ್ಟವಾಗಿದೆ. ಶೇ 90ರಷ್ಟು ಬೆಳೆ ಕೈ ಸೇರಿಲ್ಲ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ. ರಾಮಚಂದ್ರ ಮಡಿವಾಳ ‘ಪ್ರಜಾವಾಣಿ’ಗೆ ತಿಳಿಸಿದರು.

‘‍‍ಬೆಳೆ ಹಾನಿಯಾಗಿರುವ ಪ್ರತಿ ಹೆಕ್ಟೇರ್‌ಗೆ ₹16,800 ಪರಿಹಾರ ನೀಡಲಾಗುತ್ತಿದೆ. ಈ ಪೈಕಿ, ಎನ್‌ಡಿಆರ್‌ಎಫ್‌ ನಿಯಮದ ಪ್ರಕಾರ ₹6,800, ಹೆಚ್ಚುವರಿ ₹10 ಸಾವಿರವನ್ನು ರಾಜ್ಯ ಸರ್ಕಾರ ಪಾವತಿಸುತ್ತಿದೆ’ ಎಂದರು.

**

ಉತ್ತಮ ಮಳೆ ನಿರೀಕ್ಷೆಯಿಂದಾಗಿ ಇದ್ದ ಜಮೀನು ತುಂಬಾ ಈರುಳ್ಳಿ ಹಾಕಿದ್ದೆ. ಆದರೆ, ಭಾರಿ ಮಳೆಯಿಂದಾಗಿ ಈರುಳ್ಳಿ ಕೊಳೆತ ಪರಿಣಾಮ ಹಾಕಿದ್ದ ಬಂಡವಾಳವೂ ಸಿಕ್ಕಿಲ್ಲ.
– ಚನ್ನಪ್ಪ ಈರಪ್ಪ ಮ್ಯಾಗೇರಿ, ರೈತ

**

ಕೊಳೆರೋಗಕ್ಕೆ ಸಿಕ್ಕ ಈರುಳ್ಳಿಯನ್ನು ಮಾರುಕಟ್ಟೆಗೆ ಕೊಂಡೊಯ್ದರೆ ಕ್ವಿಂಟಲ್‌ಗೆ ₹600ರಿಂದ ₹800ಕ್ಕೆ ಕೇಳುತ್ತಾರೆ.‌ ಹೀಗಾದರೆ, ಬ್ಯಾಂಕ್ ಸಾಲ ತೀರಿಸಿ, ನಾವು ಬದುಕುವುದಾದರೂ ಹೇಗೆ?
– ಹುಸೇನ್‌ಸಾಬ್ ಡಂಬಳ, ರೈತ

ಪ್ರತಿಕ್ರಿಯಿಸಿ (+)