ತೈಲೋತ್ಪಾದನೆ ತಗ್ಗಿಸಲು ಒಪೆಕ್ ನಿರ್ಧಾರ: ದಿನಕ್ಕೆ 12 ಲಕ್ಷ ಬ್ಯಾರೆಲ್ ಕಡಿತ

ವಿಯೆನ್ನಾ: 2019ರ ಜನವರಿಯಿಂದ ದಿನಕ್ಕೆ 12 ಲಕ್ಷ ಬ್ಯಾರೆಲ್ಗಳಷ್ಟು ತೈಲ ಉತ್ಪಾದನೆ ತಗ್ಗಿಸಲು ಒಪೆಕ್ ಮತ್ತು ಇತರೆ ಉತ್ಪಾದನಾ ರಾಷ್ಟಗಳು ಒಪ್ಪಂದ ಮಾಡಿಕೊಂಡಿವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರೋಧದ ನಡುವೆಯೂ ಮಾರುಕಟ್ಟೆಯಲ್ಲಿ ಸಮತೋಲನ ಕಾಯ್ದುಕೊಳ್ಳಲು ತೈಲ ಉತ್ಪಾದನಾ ರಾಷ್ಟ್ರಗಳು ಈ ನಿರ್ಧಾರಕ್ಕೆ ಬಂದಿವೆ.
‘ಜನವರಿಯಿಂದ ದಿನಕ್ಕೆ 5 ಲಕ್ಷ ಬ್ಯಾರೆಲ್ಗಳಷ್ಟು ಉತ್ಪಾದನೆ ತಗ್ಗಿಸಲಾಗುವುದು. ಇದರಿಂದ ಒಂದು ದಿನದ ಉತ್ಪಾದನೆ 1.02 ಕೋಟಿ ಬ್ಯಾರೆಲ್ಗೆ ಇಳಿಕೆಯಾಗಿದೆ’ ಎಂದು ಸೌದಿ ಅರೇಬಿಯಾದ ಇಂಧನ ಸಚಿವ ಖಾಲಿದ್ ಅಲ್ ಫಲೀಹ್ ತಿಳಿಸಿದ್ದಾರೆ.
‘ಮಾರುಕಟ್ಟೆಗೆ ಅಗತ್ಯಕ್ಕಿಂತಲೂ ಹೆಚ್ಚು ತೈಲ ಪೂರೈಕೆಯಾಗುತ್ತಿದ್ದು, ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಹೀಗಾಗಿ ಉತ್ಪಾದನೆ ತಗ್ಗಿಸುವ ನಿರ್ಧಾರ ಅಗತ್ಯವಾಗಿತ್ತು’ ಎಂದೂ ಹೇಳಿದ್ದಾರೆ.
’ಒಟ್ಟಾರೆ ಉತ್ಪಾದನೆಯಲ್ಲಿ ದಿನಕ್ಕೆ 2.30 ಲಕ್ಷ ಬ್ಯಾರೆಲ್ಗಳಷ್ಟು ತಗ್ಗಿಸಲಾಗುವುದು’ ಎಂದು ರಷ್ಯಾದ ಇಂಧನ ಸಚಿವ ಅಲೆಕ್ಸಾಂಡರ್ ನೊವೋಕ್ ಹೇಳಿದ್ದಾರೆ.
‘ಒಪೆಕ್ ಸದಸ್ಯ ರಾಷ್ಟ್ರಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿವೆ ಎನ್ನುವುದಕ್ಕಷ್ಟೇ ಅಲ್ಲದೆ, ಸೌದಿ ಅರೇಬಿಯಾ ಮತ್ತು ರಷ್ಯಾ ನಡುವಣ ಹೊಸ ಸಹಕಾರ ಒಪ್ಪಂದಕ್ಕೆ ಈ ಸಭೆ ಪರೀಕ್ಷೆಯೊಡ್ಡಿತ್ತು’ ಎಂದು ಕೊಲಂಬಿಯಾ ವಿಶ್ವವಿದ್ಯಾಲಯದ ಜಾಸನ್ ಬಾರ್ಡೋಫ್ ವಿಶ್ಲೇಷಣೆ ಮಾಡಿದ್ದಾರೆ.
‘ಮಾರುಕಟ್ಟೆಯಲ್ಲಿ ಸ್ಥಿರತೆ ಮೂಡಿಸಲು ಕೈಗೊಂಡಿರುವ ಪ್ರಮುಖ ನಿರ್ಧಾರ ಇದಾಗಿದೆ’ ಎಂದು ಐಎಚ್ಎಸ್ ಮರ್ಕಿಟ್ನ ಸಂಶೋಧನಾ ಉಪಾಧ್ಯಕ್ಷ ರೋಜರ್ ದಿವಾನ್ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ, ಕಚ್ಚಾ ತೈಲ ದರವು ಅಕ್ಟೋಬರ್ನಲ್ಲಿದ್ದ ಒಟ್ಟಾರೆ ಮೌಲ್ಯದ ಮೂರರಷ್ಟು ಇಳಿಕೆ ಕಂಡಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.