ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕ ವಾಹನ ರಿಟೇಲ್‌ ಮಾರಾಟ ಶೇ 8ರಷ್ಟು ಇಳಿಕೆ

Last Updated 4 ಮಾರ್ಚ್ 2022, 11:37 IST
ಅಕ್ಷರ ಗಾತ್ರ

ಮುಂಬೈ: ದೇಶಿ ಪ್ರಯಾಣಿಕ ವಾಹನ ರಿಟೇಲ್‌ ಮಾರಾಟವು 2021ರ ಫೆಬ್ರುವರಿಗೆ ಹೋಲಿಸಿದರೆ 2022ರ ಫೆಬ್ರುವರಿಯಲ್ಲಿ ಶೇಕಡ 8ರಷ್ಟು ಇಳಿಕೆ ಆಗಿದೆ ಎಂದು ಭಾರತೀಯ ವಾಹನ ವಿತರಕರ ಒಕ್ಕೂಟ (ಎಫ್‌ಎಡಿಎ) ಹೇಳಿದೆ.

ಸೆಮಿಕಂಡಕ್ಟರ್‌ ಚಿಪ್‌ ಕೊರತೆಯಿಂದಾಗಿ ಕಂಪನಿಗಳು ತಯಾರಿಕಾ ನಷ್ಟ ಅನುಭವಿಸುವಂತಾಗಿದೆ. ಇದರಿಂದಾಗಿ ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ ಎಂದು ಅದು ತಿಳಿಸಿದೆ.

2021ರ ಫೆಬ್ರುವರಿಯಲ್ಲಿ 2.58 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟ ಆಗಿದ್ದವು. ಇದು 2022ರ ಫೆಬ್ರುವರಿಯಲ್ಲಿ 2.38 ಲಕ್ಷಕ್ಕೆ ಇಳಿಕೆ ಆಗಿದೆ.

ಪ್ರಯಾಣಿಕ ವಾಹನ ವಿಭಾಗವು ಹೊಸ ವಾಹನಗಳ ಬಿಡುಗಡೆ ಮತ್ತು ಪೂರೈಕೆಯಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡರೂ ಗ್ರಾಹಕರಿಂದ ಬಂದ ಬೇಡಿಕೆ ಪೂರೈಸಲು ಆಗಿಲ್ಲ. ಹೊಸ ವಾಹನ ಪಡೆಯಲು ಗ್ರಾಹಕರು ಕಾಯಬೇಕಾದ ಅವಧಿಯು ಕಳೆದ ಕೆಲವು ತಿಂಗಳುಗಳಲ್ಲಿ ಇದ್ದಷ್ಟೇ ಇದೆ. ಅದರಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ಒಕ್ಕೂಟದ ಅಧ್ಯಕ್ಷ ವಿಂಕೇಶ್‌ ಗುಲಾಟಿ ಹೇಳಿದ್ದಾರೆ.

ರಷ್ಯಾ–ಉಕ್ರೇನ್‌ ಸಂಘರ್ಷವು ಸೆಮಿಕಂಡಕ್ಟರ್‌ ತಯಾರಿಕೆಯ ಮೇಲೆ ಇನ್ನಷ್ಟು ಪರಿಣಾಮ ಉಂಟುಮಾಡಬಹುದು ಎಂದು ಒಕ್ಕೂಟವು ಎಚ್ಚರಿಕೆ ನೀಡಿದೆ.

ಅತ್ಯಂತ ವಿರಳವಾದ ಪಲೇಡಿಯಂ ಲೋಹವನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ದೇಶಗಳಲ್ಲಿ ರಷ್ಯಾ ಕೂಡ ಒಂದು. ಸೆಮಿಕಂಡಕ್ಟರ್‌ ತಯಾರಿಕೆಗೆ ಈ ಲೋಹ ಅತ್ಯವಶ್ಯಕ. ಇನ್ನೊಂದೆಡೆ, ನಿಯಾನ್‌ ಗ್ಯಾಸ್‌ ತಯಾರಿಕೆ ಮತ್ತು ರಫ್ತಿನಲ್ಲಿ ಉಕ್ರೇನ್‌ ಸಹ ಪ್ರಮುಖ ಪಾತ್ರ ವಹಿಸುತ್ತಿದೆ. ಸೆಮಿಕಂಡಕ್ಟರ್ ತಯಾರಿಕೆಯಲ್ಲಿ ನಿಯಾನ್‌ ಗ್ಯಾಸ್‌ ಬಳಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ದ್ವಿಚಕ್ರ ವಾಹನ ಮಾರಾಟ ಶೇ 10.67ರಷ್ಟು, ಟ್ರ್ಯಾಕ್ಟರ್ ಮಾರಾಟ ಶೇ 18.87ರಷ್ಟು ಇಳಿಕೆ ಆಗಿದೆ. ವಾಣಿಜ್ಯ ವಾಹನಗಳ ಮಾರಾಟ ಶೇ 7.41ರಷ್ಟು ಹೆಚ್ಚಾಗಿದೆ. ಎಲ್ಲ ವಿಭಾಗಗಳನ್ನೂ ಒಳಗೊಂಡು ಒಟ್ಟಾರೆ ಮಾರಾಟವು ಶೇ 9.21ರಷ್ಟು ಇಳಿಕೆ ಆಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT