ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟಿಎಂ ಷೇರಿನ ಮೌಲ್ಯ ಇಳಿಕೆ

Published 2 ಮಾರ್ಚ್ 2024, 13:18 IST
Last Updated 2 ಮಾರ್ಚ್ 2024, 13:18 IST
ಅಕ್ಷರ ಗಾತ್ರ

ನವದೆಹಲಿ/ಮುಂಬೈ: ಪೇಟಿಎಂನ ಮಾತೃಸಂಸ್ಥೆಯಾದ ಒನ್‌97 ಕಮ್ಯುನಿಕೇಷನ್‌ ಲಿಮಿಟೆಡ್‌ನ ಷೇರಿನ ಮೌಲ್ಯ ಶನಿವಾರ ನಡೆದ ವಿಶೇಷ ವಹಿವಾಟಿನಲ್ಲಿ ಶೇ 2.50ರಷ್ಟು ಇಳಿಕೆ ಕಂಡಿದೆ. 

ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ಹಣಕಾಸು ಗುಪ್ತಚರ ಘಟಕವು ₹5.49 ಕೋಟಿ ದಂಡ ವಿಧಿಸಿದ ನಂತರ ಷೇರಿನ ಮೌಲ್ಯ ಕುಸಿದಿದೆ. ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ಷೇರಿನ ಮೌಲ್ಯ ಶೇ 2.56 ಮತ್ತು ಶೇ 2.13ರಷ್ಟು ಇಳಿಕೆ ಆಗಿದೆ. ಪ್ರತಿ ಷೇರಿನ ಬೆಲೆ ಕ್ರಮವಾಗಿ ₹414.55 ಮತ್ತು ₹414.40 ಮುಟ್ಟಿದೆ.

ಷೇರು ಸೂಚ್ಯಂಕಗಳು ಏರಿಕೆ: 

ಜಿಡಿಪಿ ಪ್ರಗತಿ ಮತ್ತು ವಿದೇಶಿ ಬಂಡವಾಳ ಒಳಹರಿವಿನಿಂದಾಗಿ ಶನಿವಾರ ಷೇರು ಸೂಚ್ಯಂಕಗಳು ಏರಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 60 ಅಂಶ ಏರಿಕೆಯಾಗಿ 73,806ಕ್ಕೆ ಸ್ಥಿರಗೊಂಡಿತು. ವಹಿವಾಟಿನ ವೇಳೆ 249 ಅಂಶ ಏರಿಕೆಯಾಗಿ 73,994 ಅಂಶಕ್ಕೆ ಮುಟ್ಟಿತ್ತು. 

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 39 ಅಂಶ ಏರಿಕೆಯಾಗಿ 22,378ಕ್ಕೆ ಕೊನೆಗೊಂಡಿತು. 

ಪ್ರಾಥಮಿಕ ಸೈಟ್‌ನಲ್ಲಿನ ಅಡಚಣೆ ನಿಭಾಯಿಸಲು ಕೈಗೊಂಡಿರುವ ಸಿದ್ಧತೆಯನ್ನು ಪರಿಶೀಲಿಸುವ ಉದ್ದೇಶದಿಂದ ಶನಿವಾರ ಎರಡು ಸೆಷನ್‌ಗಳಲ್ಲಿ ವಿಶೇಷ ವಹಿವಾಟು ನಡೆಸಲಾಯಿತು. ಮೊದಲ ಸೆಷನ್‌ ಬೆಳಿಗ್ಗೆ 9.15ರಿಂದ 10ರವರೆಗೆ ಮತ್ತು ಎರಡನೆಯ ಸೆಷನ್‌ 11.30 ರಿಂದ 12.30ರವರೆಗೆ ನಡೆಯಿತು.

ಟಾಟಾ ಸ್ಟೀಲ್‌, ಟಾಟಾ ಮೋಟರ್ಸ್‌, ಜೆಎಸ್‌ಡಬ್ಯ್ಲು ಸ್ಟೀಲ್‌, ವಿಪ್ರೊ, ಐಟಿಸಿ ಮತ್ತು ಏಷ್ಯನ್‌ ಪೇಂಟ್ಸ್‌ ಗಳಿಕೆ ಕಂಡಿವೆ. ಮಹೀಂದ್ರ ಆ್ಯಂಡ್‌ ಮಹೀಂದ್ರ, ಎನ್‌ಟಿಪಿಸಿ, ಮಾರುತಿ ಮತ್ತು ಅಲ್ಟ್ರಾಟೆಕ್‌ನ ಷೇರಿನ ಮೌಲ್ಯ ಇಳಿಕೆ ಕಂಡಿವೆ.

ಬಿಎಸ್‌ಇ ಸ್ಮಾಲ್‌ಕ್ಯಾಪ್‌ ಗೇಜ್‌ ಮತ್ತು ಮಿಡ್‌ ಕ್ಯಾಪ್‌ ಸೂಚ್ಯಂಕಗಳ ಷೇರು ಮೌಲ್ಯ ಏರಿಕೆ ಕಂಡಿವೆ. ಲೋಹ, ಗ್ರಾಹಕ ಬಳಕೆ ವಸ್ತುಗಳು, ರಿಯಾಲ್ಟಿ ಮತ್ತು ಹೆಲ್ತ್‌ಕೇರ್‌ ಷೇರಿನ ಸೂಚ್ಯಂಕಗಳು ಏರಿಕೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT