ಗುರುವಾರ , ಮಾರ್ಚ್ 23, 2023
28 °C

ತೈಲ ಬೆಲೆ ಹೆಚ್ಚಳ, ದಿನಸಿ ಖರ್ಚು ಕಡಿಮೆ ಮಾಡಿದ ಜನ!

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ತೈಲ ಬೆಲೆಯಲ್ಲಿ ಆಗಿರುವ ಹೆಚ್ಚಳದ ಪರಿಣಾಮವಾಗಿ ಜನ ದಿನಸಿಯಂತಹ ಅಗತ್ಯ ವಸ್ತುಗಳ ಮೇಲಿನ ಖರ್ಚನ್ನು ಕಡಿಮೆ ಮಾಡಿದ್ದಾರೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ನ (ಎಸ್‌ಬಿಐ) ಅರ್ಥಶಾಸ್ತ್ರಜ್ಞರು ಸಿದ್ಧಪಡಿಸಿರುವ ವರದಿಯೊಂದು ಹೇಳಿದೆ.

ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಬಗ್ಗೆ ಆಲೋಚಿಸಬೇಕು ಎಂದು ಎಸ್‌ಬಿಐನ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯಕಾಂತಿ ಘೋಷ್ ಸಿದ್ಧಪಡಿಸಿರುವ ವರದಿಯಲ್ಲಿ ಹೇಳಲಾಗಿದೆ. ದೇಶದ ಹಲವು ಕಡೆಗಳಲ್ಲಿ ಪೆಟ್ರೋಲ್ ಬೆಲೆಯು ಲೀಟರಿಗೆ ₹ 100ರ ಗಡಿಯನ್ನು ದಾಟಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಕುಸಿದಿದ್ದಾಗ ದೇಶಿ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಲಾಯಿತು. ಆದರೆ, ಈಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಹೆಚ್ಚಳ ಆಗಿದ್ದರೂ ದೇಶಿ ಮಾರುಕಟ್ಟೆಯಲ್ಲಿ ತೆರಿಗೆ ಪ್ರಮಾಣ ಕಡಿಮೆ ಮಾಡಿಲ್ಲ.

‘ಗ್ರಾಹಕರು ತೈಲೋತ್ಪನ್ನಗಳಿಗಾಗಿ ಹೆಚ್ಚು ಹಣ ವೆಚ್ಚ ಮಾಡುತ್ತಿದ್ದಾರೆ. ವಾಸ್ತವದಲ್ಲಿ, ಇದರಿಂದಾಗಿ ಇತರ ಅಗತ್ಯ ವಸ್ತುಗಳಾದ ದಿನಸಿ, ಕೆಲವು ಸೇವೆಗಳ ಮೇಲಿನ ಖರ್ಚನ್ನು ಜನ ಗಣನೀಯವಾಗಿ ಕಡಿಮೆ ಮಾಡಬೇಕಾಗಿದೆ. ಇಂತಹ ಉತ್ಪನ್ನಗಳು ಹಾಗೂ ಸೇವೆಗಳ ಬೇಡಿಕೆಯು ಗಣನೀಯವಾಗಿ ತಗ್ಗಿದೆ ಎಂಬುದನ್ನು ಎಸ್‌ಬಿಐ ಕಾರ್ಡ್‌ ಮೂಲಕ ಜನ ಮಾಡಿರುವ ಖರ್ಚುಗಳನ್ನು ವಿಶ್ಲೇಷಣೆಗೆ ಗುರಿಪಡಿಸಿದಾಗ ನಮಗೆ ಗೊತ್ತಾಗಿದೆ’ ಎಂದು ಘೋಷ್ ಅವರು ಹೇಳಿದ್ದಾರೆ.

ತೈಲೋತ್ಪನ್ನಗಳ ಮೇಲೆ ಮಾಡಬೇಕಿರುವ ವೆಚ್ಚ ಬಹಳ ಹೆಚ್ಚಾಗಿರುವುದು ಹಣದುಬ್ಬರದ ಮೇಲೆಯೂ ಪರಿಣಾಮ ಉಂಟುಮಾಡುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ತೈಲೋತ್ಪನ್ನಗಳ ಬೆಲೆಯನ್ನು ಆದಷ್ಟು ಬೇಗ ತಗ್ಗಿಸಬೇಕಾದ ಅಗತ್ಯ ಇದೆ. ಇದನ್ನು ಮಾಡದಿದ್ದರೆ ಅಗತ್ಯ ವಸ್ತುಗಳ ಮೇಲೆ ಜನ ಮಾಡಬೇಕಿರುವ ಖರ್ಚುಗಳಲ್ಲಿ ಬಹಳ ವ್ಯತ್ಯಾಸ ಆಗುತ್ತದೆ. ಹಾಗೆಯೇ, ತೀರಾ ಅಗತ್ಯವಲ್ಲದ ಇತರ ವಸ್ತುಗಳ ಮೇಲಿನ ಖರ್ಚುಗಳೂ ಕಡಿಮೆ ಆಗುತ್ತವೆ ಎಂದು ಘೋಷ್ ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು