ಉತ್ತರ ಪ್ರದೇಶ, ಛತ್ತೀಸಗಢ, ನಾಗಾಲ್ಯಾಂಡ್‌ನಲ್ಲಿ ₹ 100ರ ಗಡಿ ದಾಟಿದ ಪೆಟ್ರೋಲ್

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಶನಿವಾರ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿವೆ. ಇದರಿಂದಾಗಿ ಉತ್ತರ ಪ್ರದೇಶ, ಛತ್ತೀಸಗಢ ಮತ್ತು ನಾಗಾಲ್ಯಾಂಡ್‌ನಲ್ಲಿ ಪೆಟ್ರೋಲ್ ದರವು ಲೀಟರಿಗೆ ₹ 100ರ ಗಡಿ ದಾಟಿದೆ.
ಪೆಟ್ರೋಲ್ ದರ ಲೀಟರಿಗೆ 35 ಪೈಸೆ ಮತ್ತು ಡೀಸೆಲ್ ದರ ಲೀಟರಿಗೆ 26 ಪೈಸೆ ಹೆಚ್ಚಿಸಲಾಗಿದೆ. ಹೀಗಾಗಿ ಉತ್ತರ ಪ್ರದೇಶದ ರಾಂಪುರ ಜಿಲ್ಲೆ, ಛತ್ತೀಸಗಢದ ಜಶ್‌ಪುರ್, ಕಾಂಕೆರ್ ಮತ್ತು ನಾರಾಯಣಪುರ ಜಿಲ್ಲೆಗಳಲ್ಲಿ ಹಾಗೂ ನಾಗಾಲ್ಯಾಂಡ್‌ನ ಕೊಹಿಮಾದಲ್ಲಿ ಪೆಟ್ರೋಲ್ ದರವು ಲೀಟರಿಗೆ ₹ 100ಕ್ಕಿಂತ ಮೇಲಕ್ಕೆ ಏರಿಕೆ ಕಂಡಿತು.
ಕರ್ನಾಟಕ, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಜಮ್ಮು–ಕಾಶ್ಮೀರ, ಒಡಿಶಾ, ತಮಿಳುನಾಡು, ಕೇರಳ, ಬಿಹಾರ, ಪಂಜಾಬ್. ಲಡಾಖ್, ಸಿಕ್ಕಿಂ ಮತ್ತು ಪುದುಚೆರಿಯಲ್ಲಿ ಪೆಟ್ರೋಲ್ ದರವು ಲೀಟರಿಗೆ ಈಗಾಗಲೇ ₹ 100ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಮಾರಾಟವಾಗುತ್ತಿದೆ. ರಾಜಸ್ಥಾನ, ಒಡಿಶಾ ಮತ್ತು ಮಧ್ಯಪ್ರದೇಶದಲ್ಲಿ ಡೀಸೆಲ್ ದರವು ಲೀಟರಿಗೆ ₹ 100ರ ಗಡಿ ದಾಟಿದೆ.
ಸ್ಥಳೀಯ ಮಾರಾಟ ತೆರಿಗೆಯ (ವ್ಯಾಟ್) ಆಧಾರದ ಮೇಲೆ ರಾಜ್ಯದಿಂದ ರಾಜ್ಯಕ್ಕೆ ದರದಲ್ಲಿ ವ್ಯತ್ಯಾಸ ಆಗುತ್ತದೆ. ದೆಹಲಿಯಲ್ಲಿ ಪೆಟ್ರೋಲ್ ದರ ₹ 100.91 ಮತ್ತು ಡೀಸೆಲ್ ದರ ₹ 89.88ರಷ್ಟಾಗಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ ₹ 104.35 ಮತ್ತು ಡೀಸೆಲ್ ದರ 95.32ಕ್ಕೆ ತಲುಪಿದೆ.
ಮೇ 4 ರಿಂದ ಇಲ್ಲಿಯವರೆಗೆ ಪೆಟ್ರೋಲ್ ದರವನ್ನು ಒಟ್ಟಾರೆ 38 ಬಾರಿ ಹೆಚ್ಚಿಸಲಾಗಿದೆ. ಇದರಿಂದ ಪ್ರತಿ ಲೀಟರಿಗೆ ₹ 10.51ರಷ್ಟು ಏರಿಕೆ ಆಗಿದೆ. ಮೇ 4 ರಿಂದ ಇಲ್ಲಿಯವರೆಗೆ 36 ಬಾರಿ ಡೀಸೆಲ್ ದರ ಹೆಚ್ಚಿಸಲಾಗಿದ್ದು, ಪ್ರತಿ ಲೀಟರಿಗೆ ₹ 9.15ರಷ್ಟು ಹೆಚ್ಚಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.