ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ ₹82.15; ಮುಂದುವರಿದ ತೈಲ ದರ ಏರಿಕೆ

ಅಕ್ಷರ ಗಾತ್ರ

ಬೆಂಗಳೂರು: ಕಳೆದ ಎರಡು ತಿಂಗಳು ಜಾಗತಿಕವಾಗಿ ತೈಲ ಬೇಡಿಕೆ ಕುಸಿದು, ಬ್ರೆಂಟ್‌ ಕಚ್ಚಾ ತೈಲ ಫ್ಯೂಚರ್ಸ್‌ ದರ ದಾಖಲೆಯ ಇಳಿಕೆಯಾದರೂ ಭಾರತದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಇಳಿಕೆಯಾಗಲಿಲ್ಲ. ಲಾಕ್‌ಡೌನ್‌ ಸಡಿಲಿಕೆಯಾಗಿ ಬೇಡಿಕೆ ಹೆಚ್ಚುತ್ತಿದ್ದಂತೆ ದಿನೇ ದಿನೇ ದರ ಹೆಚ್ಚಳ ಸಾಮಾನ್ಯವಾಗಿದೆ. ಸೋಮವಾರ ಸಹ ಲೀಟರ್‌ ಡೀಸೆಲ್‌ಗೆ 58 ಪೈಸೆ ಏರಿಕೆಯಾಗಿದೆ.

ಸತತ 16 ದಿನಗಳಿಂದ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ ಕಾಣುತ್ತಿದೆ. ಇಂಡಿಯನ್‌ ಆಯಿಲ್‌ ವೆಬ್‌ಸೈಟ್ ಪ್ರಕಾರ, ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 33 ಪೈಸೆ ಹೆಚ್ಚಳವಾಗಿ ₹79.56, ಡೀಸೆಲ್‌ 58 ಏರಿಕೆಯೊಂದಿಗೆ ₹78.85 ಆಗಿದೆ.

ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ 34 ಪೈಸೆ ಹೆಚ್ಚಳವಾಗಿ ₹82.15 ಹಾಗೂ ಡೀಸೆಲ್‌ 55 ಪೈಸೆ ಹೆಚ್ಚಳವಾಗಿ ₹74.98 ತಲುಪಿದೆ.

ಕೇಂದ್ರ ಸರ್ಕಾರ ಮಾರ್ಚ್‌ 14ರಂದು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್‌ಗೆ ₹3 ಹೆಚ್ಚಿಸಿತು. ಮತ್ತೆ ಮೇ 5ರಂದು ಪ್ರತಿ ಲೀಟರ್‌ ಪೆಟ್ರೋಲ್‌ ಮೇಲಿನ ತೆರಿಗೆ ₹10 ಹಾಗೂ ಡೀಸೆಲ್‌ಗೆ ₹13 ಹೆಚ್ಚಳ ಮಾಡಿತು. ಇದರಿಂದಾಗಿ ಸರ್ಕಾರಕ್ಕೆ ₹2 ಲಕ್ಷ ಕೋಟಿ ಹೆಚ್ಚುವರಿ ತೆರಿಗೆ ವರಮಾನ ಸಂಗ್ರಹವಾಗಿದೆ.

ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ದರ ಇಳಿಕೆಯಿಂದಾಗಿ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌, ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ ಹಾಗೂ ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ ಗ್ರಾಹಕರ ಮೇಲೆ ತೆರಿಗೆ ಹೊರೆ ಪೂರ್ಣ ವರ್ಗಾಯಿಸದೆ, ರಿಟೇಲ್‌ ದರದಲ್ಲಿ ಸರಿದೂಗಿಸುವ ಕ್ರಮ ವಹಿಸಿದ್ದವು. ಇದೀಗ ಕಚ್ಚಾ ತೈಲ ದರದ ಅನ್ವಯ ನಿತ್ಯವೂ ಪೆಟ್ರೋಲ್‌, ಡೀಸೆಲ್‌ ಬೆಲೆ ಏರುಗತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT