ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

ಪುರವಣಿ
Last Updated 26 ನವೆಂಬರ್ 2019, 19:45 IST
ಅಕ್ಷರ ಗಾತ್ರ

- ವಿಜಯಾನಂದ, ಬೆಂಗಳೂರು

ಹಳ್ಳಿಯಲ್ಲಿ ಎರಡೂವರೆ ಗುಂಟೆ ಜಾಗ ಇದೆ. ಅದು ಬಿನ್‌ಶೇತಗಿ ಜಾಗವಾಗಿರುತ್ತದೆ. ಊರಿನಲ್ಲಿ ನನ್ನ ಮಗ ಇರುತ್ತಾನೆ. ಅವನ ತಿಂಗಳ ಆದಾಯ₹ 25,000, ಹೆಂಡತಿ ಆದಾಯ₹ 8,000. ಇವರಿಗೆ ನನ್ನ ಜಾಗದಲ್ಲಿ ಮನೆ ಕಟ್ಟಲು₹ 10 ಲಕ್ಷ ಸಾಲ ಬೇಕಾಗಿದೆ. ಮಾರ್ಗದರ್ಶನ ಮಾಡಿರಿ. ನನ್ನ ವಯಸ್ಸು 71.

ಉತ್ತರ: ಬಿನ್‌ಶೇತಗಿ ಅಂದರೆ (Non Agriculture) ಎಂದು ಭಾವಿಸುವೆ. ಒಟ್ಟಿನಲ್ಲಿ ಮನೆ ಕಟ್ಟಲು ಭೂಮಿ ಪರಿವರ್ತನೆ(Non Agriculture) ಮಾಡಿಸಿಕೊಳ್ಳಬೇಕು. ಜಾಗ ನಿಮ್ಮ ಹೆಸರಿನಲ್ಲಿ ಇರುವುದರಿಂದ, ನಿಮ್ಮ ವಯಸ್ಸು ಪರಿಗಣಿಸಿ, ನಿಮಗೆ ಗೃಹಸಾಲ ದೊರೆಯುವುದಿಲ್ಲ. ಆದರೆ, ನಿಮ್ಮ ಮಗ ಸೊಸೆ ಸಹಸಾಲಗಾರರಾಗಿ (Co – borrowors) ನಿಮ್ಮ ಹೆಸರಿನಲ್ಲಿ ಗೃಹ ಸಾಲ ಪಡೆಯಬಹುದು.₹ 10 ಲಕ್ಷ ಸಾಲಕ್ಕೆ ಮಾಸಿಕ ಕಂತು (EMI)₹ 10,000 ಬರುತ್ತದೆ. ಸಮೀಪದ ಬ್ಯಾಂಕಿನಲ್ಲಿ ವಿಚಾರಿಸಿ.

- ಶರವಣ, ನೆಲಮಂಗಲ

ಒಂದು ಬಟ್ಟೆ ಅಂಗಡಿಯಲ್ಲಿ ಕಳೆದ 10 ವರ್ಷಗಳಿಂದ ಕೆಲಸ ಮಾಡಿ ಕೂಡಿಟ್ಟ ಹಣ ₹ 3 ಲಕ್ಷವನ್ನು 11 ತಿಂಗಳ ಹಿಂದೆ ನಮ್ಮ ಕುಟುಂಬದ ಸ್ನೇಹಿತರ ಮಾತು ಕೇಳಿ ಮ್ಯೂಚುವಲ್ ಫಂಡ್‌ನಲ್ಲಿ ಹಾಕಿದೆ. ಈಗ ಅದರ ನೆಟ್‌ ಅಸೆಟ್‌ ವ್ಯಾಲ್ಯೂ₹ 2.15 ಲಕ್ಷವಾಗಿದೆ. ಈ ಯೋಜನೆ ULIP ಆಗಿದ್ದು, 5 ವರ್ಷಗಳವರೆಗೆ ಹಣ ಹಿಂದೆ ಪಡೆಯುವಂತಿಲ್ಲ. ನನಗೆ 5 ವರ್ಷ ಮುಗಿದ ನಂತರ ಕನಿಷ್ಠ ಹಾಕಿದ ಹಣ ವಾಪಸ್‌ ಬರಬಹುದೇ ತಿಳಿಸಿರಿ.

ಉತ್ತರ: ಪ್ರಪ್ರಥವಾಗಿ ನಿಮ್ಮ ಪರಿಸ್ಥಿತಿ ನೋಡಿ ನಾನು ತುಂಬಾ ನೊಂದು ಕೊಂಡೆ. ಮಧ್ಯಮ ಹಾಗೂ ಕೆಳ ವರ್ಗದ ಜನರು ತಾವು ಕಷ್ಟಪಟ್ಟು ಕೂಡಿಟ್ಟ ಹಣ ಎಂದಿಗೂ ನಾಶವಾಗಬಾರದು ಎನ್ನುವುದೇ ನನ್ನ ಮುಖ್ಯ ಗುರಿ. ಮ್ಯೂಚುವಲ್ ಫಂಡ್ ಹಾಗೂ ಷೇರು ಮಾರುಕಟ್ಟೆಯಲ್ಲಿ ಏರಿಳಿತ ಸಹಜ. ನೀವು 5 ವರ್ಷಗಳಲ್ಲಿ ಸ್ವಲ್ಪ ಹೆಚ್ಚಿನ ನೆಟ್‌ ಅಸೆಟ್ ವ್ಯಾಲ್ಯೂ (NAV) ಪಡೆದರೂ ಪಡೆಯಬಹುದು. ನಿಮಗೊಂದು ಕಿವಿಮಾತು. ಎಲ್ಲಾ ಮೊಟ್ಟೆಗಳನ್ನು ಒಂದು ಬುಟ್ಟಿಯಲ್ಲಿ ಇಡಬೇಡಿ ಎನ್ನುವ ಹಿರಿಯರ ಮಾತು ಜ್ಞಾಪಿಸಿಕೊಳ್ಳಿ. ನಿಮ್ಮಲ್ಲಿರುವ ಅಷ್ಟೂ ಹಣ ಇಲ್ಲಿ ಹೂಡಬಾರದಿತ್ತು. ಈಗ ಚಿಂತಿಸಿ ಫಲವಿಲ್ಲ. ಮುಂದಾದರೂ ಬ್ಯಾಂಕ್, ಅಂಚೆ ಕಚೇರಿ ಠೇವಣಿ ಹೊರತುಪಡಿಸಿ ಊಹಾಪೋಹಗಳಿಗೆ ಬಲಿಯಾಗದಿರಿ. ನಿಮ್ಮ ಅನುಭವ–ಪ್ರಶ್ನೆ ಹಲವರಿಗೆ ಉತ್ತರವಾಗಬಹುದು.

-ಮಧುಸೂಧನ್. ಎಚ್.ಆರ್.

ನಾನು ಅಂಚೆ ಕಚೇರಿಯ ಕಿಸಾನ್ ವಿಕಾಸ್‌ ಪತ್ರದಲ್ಲಿ (KVP) ಹಣ ಹೂಡಿದ್ದೇವೆ. ಇಲ್ಲಿ ಒಮ್ಮೆಲೇ ಬಡ್ಡಿ ಬರುತ್ತದೆ. ಈ ಬಡ್ಡಿ ಹಣಕ್ಕೆ ತೆರಿಗೆ ವಿನಾಯಿತಿ ಇದೆಯೇ ತಿಳಿಸಿರಿ.

ಉತ್ತರ: ಪಿ.ಪಿ.ಎಫ್. ಹಾಗೂ ಟ್ಯಾಕ್ಸ್‌ಫ್ರೀ ಬಾಂಡ್ ಇವೆರಡನ್ನು ಹೊರತುಪಡಿಸಿ, ಬೇರೆ ಯಾವ ಠೇವಣಿ ಹೂಡಿಕೆಯಿಂದ ಬರುವ ಬಡ್ಡಿಗೆ ಆದಾಯ ತೆರಿಗೆ ಕಾನೂನಿನಲ್ಲಿ ವಿನಾಯಿತಿ ಪಡೆಯುವಂತಿಲ್ಲ. ಬ್ಯಾಂಕ್ ಅಥವಾ ಅಂಚೆ ಕಚೇರಿ ಠೇವಣಿಗಳಲ್ಲಿ, ಅವಧಿ ಮುಗಿಯುವಾಗ ಒಮ್ಮೆಲೇ ಬಡ್ಡಿ ಬರುವ ಯೋಜನೆಯಲ್ಲಿ ಅಂತಹ ಸಂಸ್ಥೆಯಿಂದ ಫಾರಂ ನಂಬರ್‌ 16 A (Accrued Interest Certificate) ಪಡೆದು, ನಿಮ್ಮ ವಾರ್ಷಿಕ ಒಟ್ಟು ಆದಾಯಕ್ಕೆ ಸೇರಿಸಿ ತೆರಿಗೆ ಕೊಡಬಹುದು. ಹೀಗೆ ಮಾಡಿದಲ್ಲಿ ಠೇವಣಿ ಅವಧಿ ಮುಗಿದು ಒಮ್ಮೆಲೇ ಪಡೆಯುವ ದೊಡ್ಡ ಮೊತ್ತದ ಬಡ್ಡಿಗೆ, ಒಮ್ಮೆಲೇ ತೆರಿಗೆ ಕೊಡುವ ಪ್ರಮೇಯವಿರುವುದಿಲ್ಲ. ಒಟ್ಟಿನಲ್ಲಿ KVPಯಿಂದ ಬರುವ ಬಡ್ಡಿಗೆ ಆದಾಯ ತೆರಿಗೆ ಅನ್ವಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT