ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಖಾಸಗಿ ಸಂಸ್ಥೆಗಳ ಆ್ಯಪ್‌ಗಳಲ್ಲಿ ಹೂಡಿಕೆ ಮಾಡಬಹುದೇ?

Last Updated 22 ನವೆಂಬರ್ 2022, 21:04 IST
ಅಕ್ಷರ ಗಾತ್ರ

ಅಭಿಷೇಕ್ ಗೌಡ ಕೆ., ಊರು ಬೇಡ

l ಪ್ರಶ್ನೆ: ಸರ್ಕಾರ, ನಿಗಮ ಮಂಡಳಿ ಹಾಗೂ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರು ಷೇರು ಮಾರುಕಟ್ಟೆ, ಬಾಂಡ್, ವ್ಯಾಪಾರ ಹಾಗೂ ಖಾಸಗಿ ಸಂಸ್ಥೆಗಳ ಆ್ಯಪ್‌ಗಳಲ್ಲಿ ಹೂಡಿಕೆ ಮಾಡಬಹುದೇ? ಮಾಡಬಹುದಾದಲ್ಲಿ ಆದಾಯ ತೆರಿಗೆ ವಿವರ ಸಲ್ಲಿಸುವಾಗ ಯಾವ ಆಯ್ಕೆ ಬಳಸಬೇಕು ಎಂಬ ಮಾಹಿತಿ ಬೇಕು.

ಉತ್ತರ: ಷೇರು ಮಾರುಕಟ್ಟೆಯನ್ನು ಯಾವುದೇ ಸಾಮಾಜಿಕ ಸ್ಥಾನ ಹೊಂದಿರುವ ಜನ ಹೂಡಿಕೆ ಮಾಡಬಹುದಾದ ವ್ಯವಹಾರ ತಾಣವೆಂದು ಪರಿಗಣಿಸಲಾಗಿದೆ. ಆದರೆ ಸರ್ಕಾರಿ ನೌಕರರ ವಿಚಾರಕ್ಕೆ ಬಂದಾಗ ಹಲವಾರು ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ. ಸರ್ಕಾರಿ ನೌಕರಿಯಲ್ಲಿರುವ ವ್ಯಕ್ತಿಯ ವೃತ್ತಿ ಅಥವಾ ಉದ್ಯೋಗ ಸಮಯಕ್ಕೆ ಧಕ್ಕೆಯಾಗಬಾರದೆಂದು, ಆರ್ಥಿಕವಾಗಿ ಅನಗತ್ಯ ಆಮಿಷಗಳಿಗೆ ಒಳಗಾಗಬಾರದೆಂದು ಇಂತಹ ನಿರ್ಬಂಧಗಳನ್ನು ಹೇರಲಾಗಿದೆ. ಇದು ಸರ್ಕಾರಿ ಉದ್ಯೋಗದಲ್ಲಿನ ವ್ಯಕ್ತಿಗಳ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಕೆ ಮಾಡುವ ಉದ್ದೇಶವನ್ನೂ ಹೊಂದಿದೆ.

ಕೇಂದ್ರ ನಾಗರಿಕ ಸೇವೆಗಳ ನಿಯಮಾವಳಿಯಲ್ಲಿ ಸರ್ಕಾರಿ ಹುದ್ದೆಯಲ್ಲಿರುವ ವ್ಯಕ್ತಿಗಳಿಗೆ ಅನ್ವಯವಾಗುವ ನಿರ್ಬಂಧಗಳನ್ನು ಉಲ್ಲೇಖಿಸಲಾಗಿದೆ. ನಿಯಮ 16ರ ಅನ್ವಯ, ಯಾವುದೇ ಸರ್ಕಾರಿ ಉದ್ಯೋಗಿ ಯಾವುದೇ ಷೇರು ಅಥವಾ ಇತರ ಹೂಡಿಕೆಗಳಲ್ಲಿ ವ್ಯಾಪಾರದ ಉದ್ದೇಶದಿಂದ ವ್ಯವಹರಿಸುವುದನ್ನು ನಿರ್ಬಂಧಿಸಲಾಗಿದೆ. ಈ ನಿಯಮ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶಗಳ ಎಲ್ಲ ಸರ್ಕಾರಿ ನೌಕರರಿಗೆ ಅನ್ವಯಿಸುತ್ತದೆ. ಕರೆನ್ಸಿ ಟ್ರೇಡಿಂಗ್, ಸರಕು ವ್ಯಾಪಾರ, ಫ್ಯೂಚರ್ಸ್ ಮತ್ತು ಆಪ್ಶನ್ ವಹಿವಾಟು ಅಥವಾ ಯಾವುದೇ ರೀತಿಯ ಅಲ್ಪಾವಧಿ ವಹಿವಾಟುಗಳನ್ನು ಅಥವಾ ಇಂಟ್ರಾಡೇ ಟ್ರೇಡಿಂಗ್ ಮಾಡಲು ಅವಕಾಶ ಇರುವುದಿಲ್ಲ.

ಆದರೆ ಕೆಲವು ಹೂಡಿಕೆಗಳಿಗೆ ರಿಯಾಯಿತಿ ಕೊಡಲಾಗಿದೆ. ನಿರ್ಬಂಧಗಳನ್ನು ಅರ್ಥಮಾಡಿಕೊಳ್ಳುವ ಮೊದಲು ವ್ಯಾಪಾರ ಮತ್ತು ಹೂಡಿಕೆಯ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು. ಈ ಎರಡೂ ಪದಗಳನ್ನು ಸಾಮಾನ್ಯವಾಗಿ ಪರಸ್ಪರ ಬದಲಿಯಾಗಿ ಬಳಸಲಾಗಿದ್ದರೂ, ಇವೆರಡೂ ವಿಭಿನ್ನ ಉದ್ದೇಶ ಹಾಗೂ ಗುಣಲಕ್ಷಣಗಳನ್ನು ಹೊಂದಿವೆ. ನೋಂದಾಯಿತ ಸ್ಟಾಕ್ ಬ್ರೋಕರ್‌ಗಳು ಅಥವಾ ಇತರ ನೋಂದಾಯಿತ ಸಂಸ್ಥೆಗಳ ಮೂಲಕ ಮಾಡಲಾದ ದೀರ್ಘಾವಧಿ ಹೂಡಿಕೆಗಳು ಈ ನಿಯಮಾವಳಿಯ ವ್ಯಾಪ್ತಿಯಿಂದ ಹೊರಗಿರುವಂತಿದೆ. ದೀರ್ಘಾವಧಿಗೆ ಷೇರುಗಳಲ್ಲಿ, ಎಸ್ಐಪಿ, ಗೋಲ್ಡ್ ಬಾಂಡ್‌, ಆರ್‌ಬಿಐ ಬಾಂಡ್‌ ಮತ್ತು ಅಂತಹ ಇತರೆ ಹೂಡಿಕೆಗಳಿಗೆ ಅವಕಾಶ ಕಲ್ಪಿಸಿಕೊಟ್ಟಂತಿದೆ. ಇಲ್ಲಿ ತಿಳಿಸಲಾದ ನಿಯಮಾವಳಿಯ ಒಟ್ಟು ಆಶಯ, ವ್ಯವಹಾರವನ್ನೇ ಉದ್ದೇಶವನ್ನಾಗಿಸಿ ಮಾರುಕಟ್ಟೆಯಲ್ಲಿ ಹಣ ತೊಡಗಿಸಿ ಚೆಲ್ಲಾಡುವುದನ್ನು ನಿಯಂತ್ರಿಸುವುದು.

ಯಾವುದೇ ವ್ಯವಹಾರವು ನಿರ್ಬಂಧಗಳ ವ್ಯಾಪ್ತಿಯಲ್ಲಿ ಬರುವಂಥದ್ದೇ ಅಲ್ಲವೇ ಎಂಬುದನ್ನು ನಿರ್ಣಯಿಸುವ ಅಧಿಕಾರ ಸರ್ಕಾರದ್ದು. ನಿಮ್ಮಲ್ಲಿ ಇನ್ನೂ ಸಂದೇಹ ಇದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಲಿಖಿತ ರೂಪದಲ್ಲಿ ನಿಮ್ಮ ಅಹವಾಲುಗಳನ್ನು ಸಲ್ಲಿಸಿ, ಅವರಿಂದ ಮಾಹಿತಿ ಪಡೆದುಕೊಳ್ಳಿ. ನೀವು ಯಾವುದೇ ಆ್ಯಪ್ ಮೂಲಕ ವ್ಯವಹರಿಸಿದರೂ, ಯಾವ ರೀತಿಯ ವ್ಯವಹಾರ ಮಾಡುತ್ತೀರಿ ಎನ್ನುವುದಷ್ಟೇ ಇಲ್ಲಿ ಗಣನೆಗೆ ಬರುತ್ತದೆ. ತೆರಿಗೆ ವಿವರ ಸಲ್ಲಿಸುವಾಗ ನೀವು ಸರ್ಕಾರಿ ನೌಕರ ಎನ್ನುವ ವರ್ಗದಲ್ಲೇ ಆದಾಯ ತೆರಿಗೆ ವಿವರ ಸಲ್ಲಿಸಬೇಕಾಗಿರುತ್ತದೆ.

***

ಪ್ರಸನ್ನ ಕುಮಾರ್ ವಿ, ಮೈಸೂರು

l ಪ್ರಶ್ನೆ: ವಾಲ್ಯೂ ಇನ್ವೆಸ್ಟ್ಮೆಂಟ್, ಗ್ರೋತ್ ಇನ್ವೆಸ್ಟ್ಮೆಂಟ್ ಎನ್ನುವ ಹೊಸ ವಿಚಾರಗಳನ್ನು ಟಿ.ವಿ. ಮಾಧ್ಯಮಗಳಲ್ಲಿ ಆಗಾಗ ಕೇಳುತ್ತಿರುತ್ತೇವೆ. ಇದು ನಿಜಾರ್ಥದಲ್ಲಿ ಏನು? ಲಾಭ ಗಳಿಸುವುದೇ ಅಥವಾ ಜೀವನದುದ್ದಕ್ಕೂ ಹೂಡಿಕೆ ಮಾಡುತ್ತಾ ಹಣ ಸಂಗ್ರಹಿಸಿಡುವುದೇ? ದೀರ್ಘಾವಧಿಯಲ್ಲಿ ಹೂಡಿಕೆ ಮಾಡಿದಾಗ ಇವು ನಿಜಕ್ಕೂ ಹಣದುಬ್ಬರಕ್ಕಿಂತ ಹೆಚ್ಚಿನ ಮೌಲ್ಯ ಗಳಿಸುವ ಅವಕಾಶ ನೀಡುತ್ತವೆಯೇ?

ಉತ್ತರ: ಅನೇಕ ಪದಗಳು ಯಾವುದೇ ಹೂಡಿಕೆದಾರನಿಗೆ ಮೊದಲು ವಿಶೇಷವಾಗಿ ಕಾಣಿಸಬಹುದು. ಆದರೆ ಹೂಡಿಕೆಯ ಪ್ರಪಂಚ ಬಹಳ ದೊಡ್ಡದು. ಇದರ ಬಗ್ಗೆ ಯಾವುದೇ ಹೂಡಿಕೆದಾರನಿಗೆ ಕೌತುಕ ಇರುವುದು ಸಹಜ.

ವಾಸ್ತವದಲ್ಲಿ ಇವೆರಡು ತುಸು ಬೇರೆಯಾಗಿರುವ ಹೂಡಿಕೆ ಧೋರಣೆಗಳು. ಅಥವಾ ಹೂಡಿಕೆ ಮಾಡಬಹುದಾದ ಕಂಪನಿಗಳನ್ನು ಅನ್ವೇಷಿಸುವ ಭಿನ್ನ ರೀತಿಗಳು. ಇವೆರಡರ ಒಟ್ಟಾರೆ ಉದ್ದೇಶ, ಹೂಡಿಕೆದಾರರಿಗೆ ದೀರ್ಘಾವಧಿಯಲ್ಲಿ ಉತ್ತಮ ಆದಾಯ ಗಳಿಸಿಕೊಡುವುದು. ಹೂಡಿಕೆಯ ಆಯ್ಕೆಗೆ ಕಂಪನಿಯ ಬೆಳವಣಿಗೆಯನ್ನೇ ಮೂಲ ಮಾನದಂಡವನ್ನಾಗಿಸಿ ಹೂಡಿಕೆ ಮಾಡುವ ವರ್ಗದವರು ಗ್ರೋತ್ ಇನ್ವೆಸ್ಟರ್‌ಗಳು. ಇಂತಹ ಕಂಪನಿಗಳು ಎಂತಹ ಆರ್ಥಿಕ ಇಕ್ಕಟ್ಟಿನ ಪರಿಸ್ಥಿತಿಯಲ್ಲೂ ಅದೇ ವರ್ಗದ ಇತರ ಕಂಪನಿಗಳ ಸರಾಸರಿ ಬೆಳವಣಿಗೆಗಿಂತ ಹೆಚ್ಚಿನ ಲಾಭಾಂಶ ದಾಖಲಿಸಿ ತೋರಿಸುವುದರಲ್ಲಿ ಶಕ್ತವಾಗಿರುತ್ತವೆ. ಇದಕ್ಕೆ ತದ್ವಿರುದ್ಧವಾಗಿರುವುದು ವ್ಯಾಲ್ಯೂ ಇನ್ವೆಸ್ಟಿಂಗ್. ಈ ತನಕ ದೊಡ್ಡದೇನನ್ನೂ ಸಾಧಿಸದೆ ಇದ್ದರೂ, ಭವಿಷ್ಯದಲ್ಲಿ ನಿರ್ದಿಷ್ಟ ಕ್ಷೇತ್ರದಲ್ಲಿ ಕಂಪನಿಯ ಉತ್ಪನ್ನಗಳು ಅಥವಾ ಸೇವೆಗಳು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡು ಭಾರೀ ಪ್ರಮಾಣದ ಮೌಲ್ಯ ಸೃಷ್ಟಿಸಬಹುದು. ಅಂತಹ ಕಂಪನಿಗಳನ್ನು ಹುಡುಕಿ, ಅವುಗಳಲ್ಲಿ ಹೂಡಿಕೆ ಮಾಡುವುದೇ ವ್ಯಾಲ್ಯೂ ಇನ್ವೆಸ್ಟ್ಮೆಂಟ್. ಇಂತಹ ಕಂಪನಿಗಳ ಷೇರುಗಳು ತಮ್ಮ ಕ್ಷೇತ್ರದ ಇತರ ಷೇರುಗಳಿಗೆ ಹೋಲಿಸಿದರೆ ಕಡಿಮೆ ಬೆಲೆಗೆ ದೊರಕುತ್ತಿರುತ್ತವೆ. ಆದರೆ ಯಾವುದೋ ಕಾರಣಕ್ಕೆ ಬಹಳಷ್ಟು ಹೂಡಿಕೆದಾರರಿಗೆ ಅಂತಹ ಷೇರುಗಳ ಮೇಲೆ ಭರವಸೆ ಮೂಡಿರುವುದಿಲ್ಲ.

ಹೂಡಿಕೆದಾರರು ಇವೆರಡರ ಸರಿಯಾದ ಸಂಯೋಜನೆಯಲ್ಲಿ ತಮ್ಮ ಹೂಡಿಕೆ ಮುಂದುವರಿಸಿದ್ದೇ ಆದರೆ, ಪ್ರಸ್ತುತ ಇರುವ ಶೇ 6-7ರ ಹಣದುಬ್ಬರಕ್ಕಿಂತ ಹೆಚ್ಚಿನ ಪ್ರಮಾಣದ ಲಾಭವನ್ನು ದೀರ್ಘಾವಧಿ ಹೂಡಿಕೆಗಳಲ್ಲಿ ಪಡೆಯಬಹುದು. ಗ್ರೋತ್ ಇನ್ವೆಸ್ಟ್ಮೆಂಟ್ ಪ್ರಸ್ತುತ ಇರುವ ಲಾಭಂಶವನ್ನು ಮುಂದೆಯೂ ನಿರೀಕ್ಷಿಸುತ್ತದೆ. ಪ್ರಸ್ತುತ ಅಗ್ಗವಾಗಿರುವ ಷೇರು ಬೆಲೆ ಮುಂದೊಂದು ದಿನ ಕಂಪನಿ ದೊಡ್ಡ ಲಾಭ ಗಳಿಸುವ ಹಂತಕ್ಕೆ ಬಂದಾಗ ಹೂಡಿಕೆದಾರರಿಗೆ ಉತ್ತಮ ಮೌಲ್ಯ ದೊರಕಿಸಿಕೊಡುತ್ತದೆ ಎಂಬ ನಿರೀಕ್ಷೆವ್ಯಾಲ್ಯೂ ಇನ್ವೆಸ್ಟ್ಮೆಂಟ್‌ನಲ್ಲಿ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT