ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಸಾಲ | ನಿಯಮ ಪಾಲನೆ ಕಡ್ಡಾಯ: ಆರ್‌ಬಿಐ ನಿರ್ದೇಶನ

₹20 ಸಾವಿರ ನಗದು ಪಾವತಿ ಮಿತಿ
Published 10 ಮೇ 2024, 15:46 IST
Last Updated 10 ಮೇ 2024, 15:46 IST
ಅಕ್ಷರ ಗಾತ್ರ

ನವದೆಹಲಿ: ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ಚಿನ್ನದ ಮೇಲೆ ಸಾಲ ನೀಡುವಾಗ ₹20 ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ನಗದು ರೂ‍ಪದಲ್ಲಿ ನೀಡಬಾರದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಸೂಚಿಸಿದೆ. 

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 269ಎಸ್‌ಎಸ್‌ ಅನ್ವಯ ಸಾಲ ಪಡೆಯುವ ವ್ಯಕ್ತಿಗೆ ನೀಡುವ ನಗದನ್ನು ₹20 ಸಾವಿರಕ್ಕೆ ಮಿತಿಗೊಳಿಸಲಾಗಿದೆ. ಈ ನಿಯಮಾವಳಿಯನ್ನು ಚಿನ್ನದ ಸಾಲ ನೀಡುವ ಹಣಕಾಸು ಸಂಸ್ಥೆಗಳು ಮತ್ತು ಕಿರು ಹಣಕಾಸು ಸಂಸ್ಥೆಗಳು ಪಾಲಿಸಬೇಕು ಎಂದು ನಿರ್ದೇಶನ ನೀಡಿದೆ. 

ಐಐಎಫ್‌ಎಲ್‌ ಫೈನಾನ್ಸ್‌ ಕಂಪನಿಗೆ ಚಿನ್ನದ ಸಾಲ ವಿತರಿಸದಂತೆ ನಿರ್ಬಂಧ ಹೇರಿದ ಒಂದು ವಾರದ ಬಳಿಕ ಆರ್‌ಬಿಐನಿಂದ ಈ ನಿರ್ದೇಶನ ಹೊರಬಿದ್ದಿದೆ. 

ಈ ಕಂಪನಿಯು ಚಿನ್ನವನ್ನು ಒತ್ತೆಯಾಗಿಟ್ಟುಕೊಂಡು ನೂರಾರು ಗ್ರಾಹಕರಿಗೆ ಸಾಲ ನೀಡಿದೆ. ಸಕಾಲದಲ್ಲಿ ಸಾಲ ಮರು ಪಾವತಿಸದ ಗ್ರಾಹಕರ ಚಿನ್ನವನ್ನು ಹರಾಜಿಗಿಟ್ಟಿತ್ತು. ಈ ಕುರಿತು ನಡೆಸಿದ ಮೌಲ್ಯಮಾಪನದಲ್ಲಿ ಕಂಪನಿಯ ವ್ಯವಹಾರದಲ್ಲಿ ಹಲವು  ದೋಷಗಳಿರುವುದನ್ನು ಆರ್‌ಬಿಐ ಪತ್ತೆ ಹಚ್ಚಿದೆ ಎಂದು ಹೇಳಲಾಗಿದೆ.

‘ನಮ್ಮ ಕಂಪನಿಯ ಆನ್‌ಲೈನ್‌ ಗೋಲ್ಡ್‌ ಲೋನ್ ಯೋಜನೆಯು ಕಾಗದರಹಿತ ಪ್ರಕ್ರಿಯೆಯಾಗಿದೆ. ಬಹುತೇಕ ಗ್ರಾಹಕರು ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಹಣ ವರ್ಗಾಯಿಸುವಂತೆ ಕೋರುತ್ತಾರೆ’ ಎಂದು ಮಣಪ್ಪುರಂ ಫೈನಾನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ನಂದಕುಮಾರ್‌ ಹೇಳಿದ್ದಾರೆ.

‘ಆರ್‌ಬಿಐ ನಿರ್ದೇಶನವು ಪಾರದರ್ಶಕತೆಗೆ ಒತ್ತು ನೀಡಲಿದೆ. ಇದರಿಂದ ಡಿಜಿಟಲ್‌ ಇಂಡಿಯಾಕ್ಕೆ ಉತ್ತೇಜನ ಸಿಗಲಿದೆ. ಆದರೆ, ಗ್ರಾಮೀಣ ಭಾಗದ ಬಹಳಷ್ಟು ಗ್ರಾಹಕರು ಮುಖ್ಯವಾಹಿನಿಯ ಬ್ಯಾಂಕಿಂಗ್‌ ವ್ಯವಸ್ಥೆಯಿಂದ ದೂರ ಉಳಿದಿದ್ದಾರೆ. ಅಂತಹವರ ಮೇಲೆ ಈ ಕ್ರಮವು ಪರಿಣಾಮ ಬೀರಬಹುದು. ತುರ್ತು ಸಂದರ್ಭದಲ್ಲಿ ಚಿನ್ನದ ಸಾಲ ಪಡೆಯುವ ವ್ಯವಸ್ಥೆಯಿಂದ ಅವರು ಹೊರಗುಳಿಸುವ ಸಾಧ್ಯತೆಯಿದೆ’ ಎಂದು ಇಂಡೆಲ್‌ ಮನಿ ಲಿಮಿಟೆಡ್‌ನ ಸಿಇಒ ಉಮೇಶ್‌ ಮೋಹನನ್‌ ಹೇಳಿದ್ದಾರೆ.

ಅಕ್ಷಯ ತೃತೀಯ: ಚಿನ್ನದ ದರ ಏರಿಕೆ

ನವದೆಹಲಿ (ಪಿಟಿಐ): ಇಲ್ಲಿನ ಚಿನಿವಾರ ಪೇಟೆಯಲ್ಲಿ ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಇಳಿಕೆ ಕಂಡಿದ್ದ ಚಿನ್ನ ಹಾಗೂ ಬೆಳ್ಳಿ ಧಾರಣೆಯು ಅಕ್ಷಯ ತೃತೀಯ ದಿನವಾದ ಶುಕ್ರವಾರ ಏರಿಕೆ ಕಂಡಿದೆ. ಚಿನ್ನದ ದರ 10 ಗ್ರಾಂಗೆ ₹950 ಏರಿಕೆಯಾಗಿದ್ದು ₹73 ಸಾವಿರಕ್ಕೆ ಮುಟ್ಟಿದೆ. ಬೆಳ್ಳಿ ಧಾರಣೆಯು ಕೆ.ಜಿಗೆ ₹2300 ಹೆಚ್ಚಳವಾಗಿದ್ದು ₹85500ಕ್ಕೆ ಮಾರಾಟವಾಗಿದೆ.  ‘ಅಕ್ಷಯ ತೃತೀಯ ದಿನದಂದು ಗ್ರಾಹಕರು ಚಿನ್ನದ ನಾಣ್ಯ ಗಟ್ಟಿ ಹಾಗೂ ಆಭರಣಗಳ ಖರೀದಿಗೆ ಮುಂದಾಗಿದ್ದರಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ವಹಿವಾಟು ಹೆಚ್ಚಿದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯೂರಿಟೀಸ್‌ನ ಹಿರಿಯ ವಿಶ್ಲೇಷಕ ಸೌಮಿಲ್‌ ಗಾಂಧಿ ಹೇಳಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT