ಮಂಗಳವಾರ, ಅಕ್ಟೋಬರ್ 20, 2020
23 °C

ಬಡ್ಡಿದರ ಕಡಿತ ಅನುಮಾನ: ತಜ್ಞರ ಅಭಿಪ್ರಾಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಚಿಲ್ಲರೆ ಹಣದುಬ್ಬರ ಏರಿಕೆಯಾಗುತ್ತಿರುವ ಕಾರಣ ಭಾರತೀಯ ರಿಸರ್ವ್‌ ಬ್ಯಾಂಕ್‌ (ಅರ್‌ಬಿಐ) ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿದರವನ್ನು ಈಗಿರುವಂತೆಯೇ ಕಾಯ್ದುಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಹೇಳಿದ್ದಾರೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್‌ ನೇತೃತ್ವದ ಹಣಕಾಸು ನೀತಿ ಸಮಿತಿಯು (ಪಿಎಂಸಿ) ಮಂಗಳವಾರದಿಂದ ಗುರುವಾರದವರೆಗೆ ಸಭೆ ನಡೆಸಲಿದೆ. ಬಡ್ಡಿದರ ತಗ್ಗಿಸಲು ಅವಕಾಶವಿದೆಯಾದರೂ, ಆ ಅವಕಾಶವನ್ನು ವಿವೇಚನೆಯಿಂದ ಬಳಕೆ ಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ದಾಸ್‌ ಅವರು ಈ ಹಿಂದೆಯೇ ಹೇಳಿದ್ದಾರೆ. ಹೀಗಾಗಿ ಈ ಬಾರಿಯ ಸಭೆಯಲ್ಲಿ ಯಾವುದೇ ಬದಲಾವಣೆ ನಿರೀಕ್ಷೆ ಮಾಡಲಾಗದು ಎಂದು ತಜ್ಞರು ಹೇಳಿದ್ದಾರೆ.

ಗ್ರಾಹಕರ ದರ ಸೂಚ್ಯಂಕ ಆಧರಿಸಿದ ಹಣದುಬ್ಬರ ಏರುಮುಖವಾಗಿದೆ. ಹೀಗಾಗಿ ಆರ್‌ಬಿಐ ಹೊಂದಣಿಕೆಯ ನಿಲುವು ತಳೆದು ಬಡ್ಡಿದರ ಕಡಿತ ಮಾಡುವುದನ್ನು ತಪ್ಪಿಸಬೇಕಿದೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಹೇಳಿದೆ.

‘ಕೋವಿಡ್‌–19 ಪಿಡುಗಿನ ಪರಿಣಾಮದಿಂದಾಗಿ ಆರ್‌ಬಿಐ ಈ ಬಾರಿ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು’ ಎಂದು ಅಸೋಚಾಂನ ಪ್ರಧಾನ ಕಾರ್ಯದರ್ಶಿ ದೀಪ್‌ ಸೂದ್ ಹೇಳಿದ್ದಾರೆ. ಚಿಲ್ಲರೆ ಹಣದುಬ್ಬರ ದರ ಆಗಸ್ಟ್‌ನಲ್ಲಿ ಶೇ 6.69ರಷ್ಟಿತ್ತು. ಜುಲೈಗೆ ಹೋಲಿಸಿದರೆ ತುಸು ಇಳಿಕೆ ಆಗಿದೆ. ಜುಲೈನಲ್ಲಿ ಶೇ 6.73ರಷ್ಟಿತ್ತು.

‘ಸೆಪ್ಟೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಮುಂಬರುವ ತಿಂಗಳುಗಳಲ್ಲಿ ನಿಧಾನವಾಗಿ ಇಳಿಕೆಯಾಗಲಿದೆ’ ಎಂದು ಐಸಿಆರ್‌ಎನ ಮುಖ್ಯ ಆರ್ಥಿಕ ತಜ್ಞೆ ಅದಿತಿ ನಾಯರ್‌ ಹೇಳಿದ್ದಾರೆ. ಬಡ್ಡಿದರ ಕಡಿತ ಅಥವಾ ಯಥಾಸ್ಥಿತಿ ಕಾಯ್ದುಕೊಳ್ಳುವ ಕುರಿತು ಎಂಪಿಸಿ ಸಂದಿಗ್ಧ ಸ್ಥಿತಿಗೆ ಸಿಲುಕಲಿದೆ ಎನ್ನುವುದು ಆಸ್ತಿ ಸಲಹಾ ಸಂಸ್ಥೆ ಆನಾರ್ಕ್‌ನ ಅಧ್ಯಕ್ಷ ಅನುಜ್‌ ಪುರಿ ಅಭಿಪ್ರಾಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು