ಸೋಮವಾರ, ಸೆಪ್ಟೆಂಬರ್ 26, 2022
24 °C

ಡಿಜಿಟಲ್ ಸಾಲ ಆ್ಯಪ್‌ಗೆ ಆರ್‌ಬಿಐ ಕಠಿಣ ಮಾರ್ಗಸೂಚಿ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ದುಬಾರಿ ಬಡ್ಡಿ ದರ ವಿಧಿಸುವುದನ್ನು ತಡೆಯಲು, ಸಾಲ ವಸೂಲಿ ಸಂದರ್ಭದಲ್ಲಿ ಅಕ್ರಮ ಮಾರ್ಗ ಅನುಸರಿಸುವುದನ್ನು ನಿಯಂತ್ರಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಡಿಜಿಟಲ್ ವೇದಿಕೆಗಳ ಮೂಲಕ ಸಾಲ ನೀಡುವವರಿಗೆ ಕಠಿಣ ಮಾರ್ಗಸೂಚಿ ರೂಪಿಸಿದೆ.

ಹೊಸ ಮಾರ್ಗಸೂಚಿಗಳ ಅನ್ವಯ, ಸಾಲ ಮಂಜೂರು ಮತ್ತು ಮರುಪಾವತಿಯು ಸಾಲ‍ ಪಡೆಯುವವರ ಹಾಗೂ ಕೊಡುವ ಸಂಸ್ಥೆಯ ಬ್ಯಾಂಕ್‌ ಖಾತೆಗಳ ಮೂಲಕವೇ ನಡೆಯಬೇಕಿದೆ. ಸಾಲವನ್ನು ಮೂರನೆಯ ವ್ಯಕ್ತಿಯ, ಸಂಸ್ಥೆಯ ಖಾತೆಯಿಂದ ವರ್ಗಾವಣೆ ಮಾಡುವಂತಿಲ್ಲ.

ಸಾಲದ ಸೇವೆ ಒದಗಿಸುವವರಿಗೆ ನೀಡುವ ಶುಲ್ಕಗಳನ್ನು ಸಾಲ ನೀಡುವ ಸಂಸ್ಥೆಗಳೇ ಪಾವತಿ ಮಾಡಬೇಕು. ಅದನ್ನು ಸಾಲ ಪಡೆಯುವವರಿಂದ ವಸೂಲು ಮಾಡುವಂತಿಲ್ಲ ಎಂದು ಆರ್‌ಬಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸಾಲಕ್ಕೆ ಸಂಬಂಧಿಸಿದ ಒಪ್ಪಂದ ಪತ್ರವನ್ನು ಅಂತಿಮಗೊಳಿಸುವ ಮೊದಲು ಗ್ರಾಹಕರಿಗೆ, ಪ್ರಮುಖ ಮಾಹಿತಿಯನ್ನು ನಿರ್ದಿಷ್ಟ ನಮೂನೆಯಲ್ಲಿ ಒದಗಿಸಬೇಕು. ಸಾಲ ಪಡೆಯುವವರ ಸ್ಪಷ್ಟ ಒಪ್ಪಿಗೆ ಇಲ್ಲದೆ, ಅವರ ಸಾಲದ ಮಿತಿಯನ್ನು ಹೆಚ್ಚಿಸುವುದನ್ನು ನಿರ್ಬಂಧಿಸಲಾಗಿದೆ.

‘ಸಾಲ ಪಡೆದವರು ಅಸಲು ಹಾಗೂ ಅದಕ್ಕೆ ಸಂಬಂಧಿಸಿದ ವಾರ್ಷಿಕ ಸರಾಸರಿ ದರವನ್ನು ಪಾವತಿಸಿ ಡಿಜಿಟಲ್ ಸಾಲದಿಂದ ಹೊರಬರಲು ಅವಕಾಶ ಕೊಡಬೇಕು. ಇದಕ್ಕೆ ಯಾವುದೇ ದಂಡ ವಿಧಿಸುವಂತಿಲ್ಲ. ಸಾಲ ಪಡೆದವ ದೂರು ನೀಡಿದರೆ ಅದನ್ನು ಮೂವತ್ತು ದಿನಗಳಲ್ಲಿ ಇತ್ಯರ್ಥಪಡಿಸಬೇಕು. ಇಲ್ಲವಾದಲ್ಲಿ ಆತ ಆರ್‌ಬಿಐ ಒಂಬುಡ್ಸ್‌ಮನ್‌ ಮೊರೆ ಹೋಗಲು ಅವಕಾಶ ಇರುತ್ತದೆ’ ಎಂದು ಹೇಳಲಾಗಿದೆ.

ಗ್ರಾಹಕರ ಮಾಹಿತಿಯನ್ನು ಅಗತ್ಯ ಇರುವಷ್ಟು ಮಾತ್ರ ಸಂಗ್ರಹಿಸಬೇಕು, ಗ್ರಾಹಕರಿಂದ ಸ್ಪಷ್ಟ ಪೂರ್ವಾನುಮತಿ ಪಡೆದು ವಿವರ ಸಂಗ್ರಹಿಸಬೇಕು.

600 ಆ್ಯಪ್‌ಗಳು: ಡಿಜಿಟಲ್ ವೇದಿಕೆಗಳ ಮೂಲಕ ಸಾಲ ವಿತರಣೆ ಮಾಡುವ 600 ಅಕ್ರಮ ಆ್ಯಪ್‌ಗಳು ದೇಶದಲ್ಲಿ ಇವೆ ಎಂದು ಆರ್‌ಬಿಐ ರಚಿಸಿದ್ದ ಕಾರ್ಯಕಾರಿ ಸಮಿತಿ ಹೇಳಿತ್ತು. ಈ ಆ್ಯಪ್‌ಗಳು 81 ಬೇರೆ ಬೇರೆ ಆ್ಯಪ್‌ ಸ್ಟೋರ್‌ಗಳಲ್ಲಿ ಲಭ್ಯವಿವೆ ಎಂದು ಅದು ತಿಳಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು