ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ರೂಪಾಯಿ ಪ್ರಾಯೋಗಿಕ ಬಳಕೆ ಮಂಗಳವಾರದಿಂದ ಶುರು

Last Updated 31 ಅಕ್ಟೋಬರ್ 2022, 14:19 IST
ಅಕ್ಷರ ಗಾತ್ರ

ಮುಂಬೈ : ದೇಶದ ಮೊದಲ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಬಳಕೆಯು ಮಂಗಳವಾರದಿಂದ ಆರಂಭವಾಗಲಿದೆ. ಆರಂಭಿಕ ಹಂತದಲ್ಲಿ ಸರ್ಕಾರಿ ಟ್ರೆಷರಿ ಬಿಲ್‌, ಬಾಂಡ್‌ ವಹಿವಾಟುಗಳಲ್ಲಿ ಈ ವರ್ಚುವಲ‌್ ಕರೆನ್ಸಿ ಬಳಕೆ ಮಾಡಲು ಅವಕಾಶ ಇರಲಿದೆ.

ಎಸ್‌ಬಿಐ, ಬ್ಯಾಂಕ್ ಆಫ್‌ ಬರೋಡ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಚ್‌ಎಸ್‌ಬಿಸಿ ಡಿಜಿಟಲ್ ರೂಪಾಯಿ ನೀಡಲಿವೆ.

ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ರಿಟೇಲ್ ವಹಿವಾಟು ದೇಶದ ಕೆಲವು ಆಯ್ದ ಪ್ರದೇಶಗಳಲ್ಲಿ, ಕೆಲವು ಗ್ರಾಹಕರು ಮತ್ತು ವ್ಯಾಪಾರಿಗಳ ನಡುವೆ ಒಂದು ತಿಂಗಳಲ್ಲಿ ಆರಂಭವಾಗಲಿದೆ ಎಂದು ಆರ್‌ಬಿಐ ಹೇಳಿದೆ.

ಪ್ರಾಯೋಗಿಕ ಬಳಕೆಯಲ್ಲಿ ಸಿಗುವ ಅನುಭವ ಆಧರಿಸಿ ಇತರ ಸಗಟು ವಹಿವಾಟುಗಳಲ್ಲಿ ಹಾಗೂ ಬೇರೆ ಬೇರೆ ದೇಶಗಳಲ್ಲಿ ಇರುವವರ ನಡುವಿನ ಪಾವತಿಗಳಲ್ಲಿ ಇದನ್ನು ಬಳಸಲು ಆದ್ಯತೆ ನೀಡಲಾಗುತ್ತದೆ.

ಈಚೆಗೆ ಸಿದ್ಧಪಡಿಸಿರುವ ಪರಿಕಲ್ಪನಾ ಟಿಪ್ಪಣಿಯಲ್ಲಿ ಆರ್‌ಬಿಐ, ಕೇಂದ್ರೀಯ ಬ್ಯಾಂಕ್‌ನ ಡಿಜಿಟಲ್‌ ಕರೆನ್ಸಿಯನ್ನು (ಸಿಬಿಡಿಸಿ) ಸೃಷ್ಟಿಸುವುದು ಚಾಲ್ತಿಯಲ್ಲಿ ಇರುವ ಕರೆನ್ಸಿಗೆ ಪೂರಕವೇ ವಿನಾ, ಪರ್ಯಾಯ ಅಲ್ಲ ಎಂದು ಹೇಳಿದೆ. ಬಳಕೆದಾರರಿಗೆ ಹೆಚ್ಚುವರಿ ಪಾವತಿ ವ್ಯವಸ್ಥೆಯೊಂದನ್ನು ಇದು ಕಲ್ಪಿಸುತ್ತದೆ. ಈಗ ಇರುವ ಪಾವತಿ ವ್ಯವಸ್ಥೆಗಳನ್ನು ತೆಗೆದುಹಾಕುವುದಿಲ್ಲ ಎಂದು ಕೂಡ ಹೇಳಿದೆ.

ಸಿಬಿಡಿಟಿ ಎಂಬುದು ಕೇಂದ್ರೀಯ ಬ್ಯಾಂಕ್‌ ಹೊರಡಿಸುವ ಡಿಜಿಟಲ್ ಕರೆನ್ಸಿ. ಈ ವರ್ಷದ ಫೆಬ್ರುವರಿ 1ರಂದು ಮಂಡಿಸಿದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಸಿಬಿಡಿಸಿ ಚಲಾವಣೆಗೆ ತರುವ ಘೋಷಣೆ ಮಾಡಿತ್ತು. ಜಾಗತಿಕವಾಗಿ 60ಕ್ಕೂ ಹೆಚ್ಚು ಕೇಂದ್ರೀಯ ಬ್ಯಾಂಕ್‌ಗಳು ಸಿಬಿಡಿಸಿ ಬಗ್ಗೆ ಆಸಕ್ತಿ ತೋರಿವೆ. ಕೆಲವು ದೇಶಗಳಲ್ಲಿ ಈ ಕರೆನ್ಸಿಯನ್ನು ಚಲಾವಣೆಗೆ ತರುವ ಪ್ರಾಯೋಗಿಕ ಕಾರ್ಯ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT