ಬುಧವಾರ, ಅಕ್ಟೋಬರ್ 21, 2020
24 °C

ಆರ್‌ಬಿಐ ಉಸ್ತುವಾರಿ: ಗ್ರಾಹಕರ ವಿಶ್ವಾಸ ವೃದ್ಧಿ ನಿರೀಕ್ಷೆ

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಟ್ಟಣ ಸಹಕಾರಿ ಬ್ಯಾಂಕ್‌ಗಳ (ಯುಸಿಬಿ) ಮೇಲುಸ್ತುವಾರಿಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ವರ್ಗಾಯಿಸುವ ಸುಗ್ರೀವಾಜ್ಞೆ ಜಾರಿಗೆ ಬಂದಿರುವುದರಿಂದ ಗ್ರಾಹಕರ ಹಿತರಕ್ಷಣೆಗೆ ಹೊಸ ಬಲ ಬಂದಿದ್ದು, ಅವರ ವಿಶ್ವಾಸ ವೃದ್ಧಿಯಾಗಲಿದೆ.

ನಿರ್ದೇಶಕ ಮಂಡಳಿಗಳ ವಂಚನೆಗೆ, ‘ಎನ್‌ಪಿಎ’ ಭಾರಕ್ಕೆ ಬ್ಯಾಂಕ್‌ಗಳು ದಿವಾಳಿ ಅಂಚಿಗೆ ಬಂದು ನಿಲ್ಲುವ, ಠೇವಣಿದಾರರ ಹಣದ ದುರ್ಬಳಕೆಯಾಗುವ ಮತ್ತು ತಪ್ಪಿತಸ್ಥ ನಿರ್ದೇಶಕ ಮಂಡಳಿಗಳನ್ನು ರದ್ದುಪಡಿಸುವಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಇನ್ನು ಮುಂದೆ ಕಡಿವಾಣ ಬೀಳಲಿದೆ.

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 264 ಪಟ್ಟಣ ಸಹಕಾರಿ ಬ್ಯಾಂಕ್‌ಗಳ (ಯುಸಿಬಿ) ಪೈಕಿ, 10 ಬ್ಯಾಂಕ್‌ಗಳನ್ನು ಹೊರತುಪಡಿಸಿ
ದರೆ ಉಳಿದವುಗಳ ಹಣಕಾಸು ಪರಿಸ್ಥಿತಿ ಚೆನ್ನಾಗಿದೆ. ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣ ಹೆಚ್ಚಿರುವು ದರಿಂದ  ಬೆರಳೆಣಿಕೆಯ ‘ಯುಸಿಬಿ’ಗಳ ಹಣಕಾಸು ಪರಿಸ್ಥಿತಿಯು ಉಳಿದವುಗಳಿಗೆ ಹೋಲಿಸಿದರೆ ಅಷ್ಟೇನೂ ಸಮಾಧಾನ ಕರವಾಗಿಲ್ಲ ಎಂದು ರಾಜ್ಯ ಸಹಕಾರ ಪಟ್ಟಣ ಬ್ಯಾಂಕ್‌ ಮಹಾ ಮಂಡಳದ ಮೂಲಗಳು ತಿಳಿಸಿವೆ.

‘ಮೊದಲಿನಿಂದಲೂ ‘ಯುಸಿಬಿ’ಗಳ ಮೇಲೆ ಆರ್‌ಬಿಐನ ನಿಯಂತ್ರಣ, ತಪಾಸಣೆ ಇದ್ದೇ ಇದೆ. ಹಾದಿ ತಪ್ಪಿದ ‘ಯುಸಿಬಿ’ಗಳ ಆಡಳಿತ ಮಂಡಳಿ ರದ್ದುಪಡಿಸುವ (ಸೂಪರ್‌ಸೀಡ್‌) ಅಧಿಕಾರವು ಈ ಹಿಂದೆ ರಾಜ್ಯ ಸರ್ಕಾರಕ್ಕೆ ಇತ್ತು. ರಾಜ್ಯಗಳ ಈ ಅಧಿಕಾರವನ್ನು ಈಗ ಕಿತ್ತುಕೊಂಡು ಆರ್‌ಬಿಐಗೆ ನೀಡಲಾಗುತ್ತಿದೆ. ರಾಜ ಕೀಯ ಮುಖಂಡರ ಹಸ್ತಕ್ಷೇಪ, ಬೇಕಾಬಿಟ್ಟಿಯಾಗಿ ಸಾಲ ಮಂಜೂರು, ಕೋರ್ಟ್‌ ಖಟ್ಲೆ ಮತ್ತಿತರ ಒಳಸುಳಿಗ ಳಲ್ಲಿ ‘ಯುಸಿಬಿ’ಗಳು ಸಿಲುಕಿಕೊಳ್ಳುವು ದಕ್ಕೆ ಇನ್ನು ಮುಂದೆ ಕಡಿವಾಣ ಬೀಳಲಿದೆ’ ಎಂದು ಪಟ್ಟಣ ಸಹಕಾರ ಮಹಾಮಂಡಳದ ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಇರುವ ಅನೇಕ ಅನುಕೂಲಗಳು ಅರ್ಬನ್‌ ಕೋ–ಆಪರೇಟಿವ್‌ ಬ್ಯಾಂಕ್‌ಗಳಿಗೆ  ಇರುವುದಿಲ್ಲ. ಷೇರುದಾರರು ಮತ್ತು ಠೇವಣಿದಾರರಿಂದ ಸಂಗ್ರಹಗೊಂಡ ಬಂಡವಾಳವನ್ನೇ ಸಾಲಕ್ಕೆ ಬಳಸುತ್ತವೆ. ಠೇವಣಿಗಳಲ್ಲಿನ ಶೇ 20ರಷ್ಟು ಮೊತ್ತವನ್ನು ಸರ್ಕಾರಿ ಸಾಲಪತ್ರಗಳಲ್ಲಿ ತೊಡಗಿಸಿ ಉಳಿದ ಶೇ 80ರಷ್ಟನ್ನು ಸಾಲಕ್ಕೆ ಉಪಯೋಗಿಸುತ್ತವೆ. ಈ ಎರಡೂ ಮೂಲಗಳ ಬಡ್ಡಿ ವರಮಾನದಲ್ಲಿಯೇ ಠೇವಣಿದಾರರ ಬಡ್ಡಿ ಮತ್ತು ಆಡಳಿತಾತ್ಮಕ ವೆಚ್ಚ ಸರಿದೂಗಿಸುತ್ತವೆ’ ಎಂದು ಅವರು ಹೇಳಿದ್ದಾರೆ.

ಗ್ರಾಹಕರ ವಿಶ್ವಾಸ ವೃದ್ಧಿ: ’ಸಾರ್ವಜನಿಕರು ಸಹಕಾರ ಬ್ಯಾಂಕುಗಳಲ್ಲಿ ವಿಶ್ವಾಸ ಇರಿಸಿ, ಠೇವಣಿ ಸುರಕ್ಷಿತವಾಗಿರುವ ನಂಬಿಕೆಯಿಂದ  ವ್ಯವಹರಿಸಲು,  ಗ್ರಾಹಕರ ಹಿತರಕ್ಷಣೆಯಾಗಲು ಸುಗ್ರೀ ವಾಜ್ಞೆ ಕಾರಣವಾಗಲಿದೆ’ ಎಂದು ಸ್ವರ್ಣಭಾರತಿ ಸಹಕಾರ ಬ್ಯಾಂಕ್‌ ಅಧ್ಯಕ್ಷ ಪಿ. ಎಲ್‌. ವೆಂಕಟರಾಮ ರೆಡ್ಡಿ ಅವರು ಪ್ರತಿಕ್ರಿಯಿಸಿದ್ದಾರೆ.

ವಸೂಲಾತಿ ಸಂಕಷ್ಟ: ರಾಜ್ಯದಲ್ಲಿನ ಶೇ 90ರಷ್ಟು ‘ಯುಸಿಬಿ’ಗಳಲ್ಲಿ ಯಾವುದೇ ಸಮಸ್ಯೆ ಇಲ್ಲ. ಲಾಕ್‌ಡೌನ್‌, ಸಾಲ ಮರುಪಾವತಿ ಕಂತು ಮುಂದೂಡಿಕೆ ಅವಕಾಶದ ಕಾರಣಕ್ಕೆ ದುಡ್ಡಿದ್ದವರೂ ಸಾಲ ಮರುಪಾವತಿ ಮಾಡುತ್ತಿಲ್ಲ. ಸಾಲಗಾರರ ಮನೆ ಬಾಗಿಲಿಗೆ ಹೋಗಿ ಮನವೊಲಿಸುವುದು ಕಷ್ಟವಾಗಿದೆ. ಸಾಲ ವಸೂಲಿಗೆ ನಿರ್ದಾಕ್ಷಿಣ್ಯವಾಗಿ ವರ್ತಿಸದಿದ್ದರೆ ಸಾಲ ವಸೂಲಾತಿ ಗುರಿ ಸಾಧ್ಯವಾಗುವುದಿಲ್ಲ’ ಎಂದು ಸ್ವರ್ಣ ಭಾರತಿ ಸಹಕಾರಿ ಬ್ಯಾಂಕ್‌ನ ಸಿಇಒ ಕೃಷ್ಣಮೂರ್ತಿ ಅವರು ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು