ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಪಾವತಿ ವ್ಯವಸ್ಥೆ ರೂಪಿಸುತ್ತಿರುವ ಆರ್‌ಬಿಐ

Published 30 ಮೇ 2023, 15:22 IST
Last Updated 30 ಮೇ 2023, 15:22 IST
ಅಕ್ಷರ ಗಾತ್ರ

ಮುಂಬೈ: ನೈಸರ್ಗಿಕ ವಿಕೋಪ, ಯುದ್ಧದಂತಹ ದುರಂತಗಳ ಸಂದರ್ಭಗಳಲ್ಲಿ ಬಳಕೆಗೆ ಬರುವ, ಹಗುರವಾದ ಹಾಗೂ ಎಲ್ಲಿಗೆ ಬೇಕಿದ್ದರೂ ಒಯ್ಯಲು ಆಗುವಂತಹ ಪಾವತಿ ವ್ಯವಸ್ಥೆಯೊಂದನ್ನು ರೂಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕೆಲಸ ಮಾಡುತ್ತಿದೆ.

ಇದನ್ನು ಆರ್‌ಬಿಐ ‘ಪಾವತಿ ವ್ಯವಸ್ಥೆಯ ಪಾಲಿನ ಬಂಕರ್‌’ ಇದ್ದಂತೆ ಎಂದು ಬಣ್ಣಿಸಿದೆ. ಈ ವ್ಯವಸ್ಥೆಯು ಈಗಿರುವ ಯಾವುದೇ ಸಾಂಪ್ರದಾಯಿಕ ಪಾವತಿ ವ್ಯವಸ್ಥೆಯ ಜೊತೆ ನಂಟು ಹೊಂದಿರುವುದಿಲ್ಲ. ಇದನ್ನು ಕನಿಷ್ಠ ಸಂಖ್ಯೆಯ ಸಿಬ್ಬಂದಿಯೊಂದಿಗೆ ಎಲ್ಲಿಂದ ಬೇಕಿದ್ದರೂ ನಿರ್ವಹಿಸಬಹುದು ಎಂದು ಆರ್‌ಬಿಐ ಹೇಳಿದೆ.

ಈಗಿರುವ ಸಾಂಪ್ರದಾಯಿಕ ಪಾವತಿ ವ್ಯವಸ್ಥೆಗಳಾಗಿರುವ ಆರ್‌ಟಿಜಿಎಸ್, ಎನ್‌ಇಎಫ್‌ಟಿ ಮತ್ತು ಯುಪಿಐ ಭಾರಿ ಪ್ರಮಾಣದ ವಹಿವಾಟುಗಳನ್ನು ನಿಭಾಯಿಸಲು ವಿನ್ಯಾಸಗೊಂಡಿವೆ. ಆದರೆ ಈ ವ್ಯವಸ್ಥೆಗಳಿಗೆ ಸಂಕೀರ್ಣ ಜಾಲ ಹಾಗೂ ಉನ್ನತ ಐ.ಟಿ. ಮೂಲಸೌಕರ್ಯದ ಅಗತ್ಯವಿದೆ.

ನೈಸರ್ಗಿಕ ವಿಕೋಪಗಳು ಹಾಗೂ ಯುದ್ಧದಂತಹ ದುರಂತಗಳು, ಮಾಹಿತಿ ಮತ್ತು ಸಂವಹನ ವ್ಯವಸ್ಥೆಯನ್ನು ಹಾಳುಗೆಡವಿ ಈ ವ್ಯವಸ್ಥೆಗಳನ್ನು ಕೆಲವು ಹೊತ್ತಿನವರೆಗೆ ನಿಷ್ಕ್ರಿಯವಾಗಿಸಬಹುದು ಎಂದು ಆರ್‌ಬಿಐ ತನ್ನ ವಾರ್ಷಿಕ ವರದಿಯಲ್ಲಿ ವಿವರಿಸಿದೆ.

ಇವನ್ನು ಗಮನದಲ್ಲಿ ಇರಿಸಿಕೊಂಡು ಆರ್‌ಬಿಐ ಹೊಸ ವ್ಯವಸ್ಥೆ ರೂಪಿಸಲು ಕೆಲಸ ಮಾಡುತ್ತಿದೆ. ‘ಹೊಸ ವ್ಯವಸ್ಥೆಯು ಅತ್ಯಂತ ಕಡಿಮೆ ಪ್ರಮಾಣದ ತಂತ್ರಾಂಶಗಳನ್ನು ಮತ್ತು ಯಂತ್ರಾಂಶಗಳನ್ನು ಬಳಸಿಕೊಳ್ಳುತ್ತದೆ. ಅಗತ್ಯ ಅನ್ನಿಸಿದ ಸಂದರ್ಭಗಳಲ್ಲಿ ಮಾತ್ರ ಇದನ್ನು ಬಳಸಿಕೊಳ್ಳಬಹುದು. ಅರ್ಥ ವ್ಯವಸ್ಥೆಯ ಸ್ಥಿರತೆಗೆ ಅಗತ್ಯವಿರುವ ವಹಿವಾಟುಗಳನ್ನು ಇದು ನಿಭಾಯಿಸುತ್ತದೆ’ ಎಂದು ಆರ್‌ಬಿಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT