ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪ್ಪೇಸ್ವಾಮಿಗೆ ತಪ್ಪಿದ ಟಿಕೆಟ್‌: ಪ್ರತಿಭಟನೆ

ಶ್ರೀರಾಮುಲು ನಿರ್ಧಾರ ತಿಳಿದು ಮುಂದಿನ ಹೆಜ್ಜೆ ಇಡಲು ಪ್ರತಿಭಟನಾಕಾರರ ತೀರ್ಮಾನ
Last Updated 12 ಏಪ್ರಿಲ್ 2018, 7:09 IST
ಅಕ್ಷರ ಗಾತ್ರ

ಮೊಳಕಾಲ್ಮುರು: ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮುರಿನ ಬಿಜೆಪಿ ಟಿಕೆಟ್‌ ಅನ್ನು ಬಳ್ಳಾರಿ ಸಂಸತ್ ಸದಸ್ಯ ಬಿ. ಶ್ರೀರಾಮುಲು ಅವರಿಗೆ ನೀಡಿರುವುದನ್ನು ಖಂಡಿಸಿ ಕ್ಷೇತ್ರದ ಹಾಲಿ ಶಾಸಕ ಎಸ್‌. ತಿಪ್ಪೇಸ್ವಾಮಿಯ ಅಪಾರ ಬೆಂಬಲಿಗರು ತಾಲ್ಲೂಕಿನಾದ್ಯಂತ ಬುಧವಾರ ಬೃಹತ್‌ ಪ್ರತಿಭಟನೆಗಳನ್ನು ನಡೆಸಿದರು.

30 ಕ್ಕೂ ಹೆಚ್ಚು ಬಸ್ಸು, 40–50 ಟ್ರಾಕ್ಸ್‌, ಕಾರುಗಳಲ್ಲಿ ಬಂದಿದ್ದ ಸಹಸ್ರಾರು ಬೆಂಬಲಿಗರು ಕೆಇಬಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಪಕ್ಷ ಹಾಗೂ ಶ್ರೀರಾಮುಲು ವಿರುದ್ಧ ಘೋಷಣೆ ಕೂಗಿದರು. ನಂತರ ಬಸ್‌ನಿಲ್ದಾಣ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಿದರು.

ಯಾವುದೇ ಕಾರಣಕ್ಕೂ ತಿಪ್ಪೇಸ್ವಾಮಿಗೆ ಟಿಕೆಟ್‌ ತಪ್ಪಬಾರದು. ಕಷ್ಟದ ಸ್ಥಿತಿಯಲ್ಲಿ ಕ್ಷೇತ್ರದಲ್ಲಿ ಬಿಜೆಪಿಯನ್ನು ಅವರು ಕಟ್ಟಿ ಬೆಳೆಸಿದ್ದಾರೆ. ಟಿಕೆಟ್‌ ನೀಡದಿದ್ದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಈ ಬಗ್ಗೆ ಶ್ರೀರಾಮುಲು ಅವರ ನಿರ್ಧಾರ ಏನು ಎಂಬುದನ್ನು ತಿಳಿಯಲು ಬಳ್ಳಾರಿಗೆ ಹೋಗಲಾಗುವುದು. ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖಂಡರು ಹೇಳಿದರು. ಬಳ್ಳಾರಿಗೆ ಹೋಗುವ ದಾರಿ ಮಧ್ಯೆ ಬಿ.ಜಿ.ಕೆರೆ, ರಾಂಪುರದಲ್ಲೂ ಪ್ರತಿಭಟನೆ ನಡೆಸಲಾಯಿತು.

ತಿಪ್ಪೇಸ್ವಾಮಿ ವಿರೋಧಿ ಅಲೆ: ಪಕ್ಷ ನಡೆಸಿದ್ದ ಸಮೀಕ್ಷೆಯಲ್ಲಿ ತಿಪ್ಪೇಸ್ವಾಮಿ ವಿರೋಧಿ ಅಲೆ ಇರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಭಾಕರ ಮ್ಯಾಸನಾಯಕ ಅಥವಾ ಜೆ. ಶಾಂತಾ ಅವರನ್ನು ಕಣಕ್ಕಿಳಿಸುವ ನಿರ್ಧಾರ ಮಾಡಲಾಗಿತ್ತು. ಪಕ್ಷಕ್ಕೆ ಅನುಕೂಲವಾಗುವ ಕಾರಣ ಶ್ರೀರಾಮುಲುಗೆ ಟಿಕೆಟ್‌ ನೀಡಲಾಗಿದೆ. ಕ್ಷೇತ್ರ ಅಭಿವೃದ್ಧಿ ದೃಷ್ಟಿಯಿಂದ ಸ್ಪರ್ಧೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಎಚ್.ಟಿ. ನಾಗಿರೆಡ್ಡಿ ಹಾಗೂ ಬೆಂಬಲಿಗರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT