ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಲ್ಲರೆ ಹಣದುಬ್ಬರ: 11 ತಿಂಗಳ ಕನಿಷ್ಠ

ಇಳಿಕೆಯಾಗದ ಹಣ್ಣು, ತರಕಾರಿ, ಬೇಳೆಕಾಳು ಧಾರಣೆ
Published 13 ಮೇ 2024, 16:24 IST
Last Updated 13 ಮೇ 2024, 16:24 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಚಿಲ್ಲರೆ ಹಣದುಬ್ಬರವು ಏಪ್ರಿಲ್‌ನಲ್ಲಿ ಹನ್ನೊಂದು ತಿಂಗಳ ಕನಿಷ್ಠ ಮಟ್ಟವಾದ ಶೇ 4.83ಕ್ಕೆ ಇಳಿಕೆಯಾಗಿದೆ. ಸತತ ಎರಡು ತಿಂಗಳಿನಿಂದ ಹಣದುಬ್ಬರವು ಇಳಿಕೆಯ ಪಥದಲ್ಲಿ ಸಾಗುತ್ತಿದ್ದರೂ, ಕೆಲವು ಆಹಾರ ಪದಾರ್ಥಗಳ ಧಾರಣೆಯು ಏರುಗತಿಯಲ್ಲಿಯೇ ಸಾಗಿದೆ.

ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ (ಸಿಪಿಐ) ಚಿಲ್ಲರೆ ಹಣದುಬ್ಬರವು ಮಾರ್ಚ್‌ನಲ್ಲಿ ಶೇ 4.85ರಷ್ಟು ದಾಖಲಾಗಿತ್ತು. ಇದಕ್ಕೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಶೇ 4.7ರಷ್ಟು ದಾಖಲಾಗಿತ್ತು.  

ಮಾರ್ಚ್‌ನಲ್ಲಿ ಶೇ 8.52ರಷ್ಟಿದ್ದ ಆಹಾರದ ಹಣದುಬ್ಬರವು, ಏಪ್ರಿಲ್‌ನಲ್ಲಿ ಶೇ 8.70ಕ್ಕೆ ಏರಿಕೆಯಾಗಿದೆ. ಮೊಟ್ಟೆ, ಮಾಂಸ, ಸಂಬಾರ ಪದಾರ್ಥಗಳು, ಧಾನ್ಯಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಆದರೆ, ಹಣ್ಣುಗಳು, ತರಕಾರಿಗಳು ಮತ್ತು ಬೇಳೆಕಾಳು ಧಾರಣೆಯಲ್ಲಿ ಏರಿಕೆಯಾಗಿದೆ.

‌ಕಳೆದ ವರ್ಷದ ಏಪ್ರಿಲ್‌ಗೆ ಹೋಲಿಸಿದರೆ ತರಕಾರಿ ಬೆಲೆಯಲ್ಲಿ ಶೇ 27.80ರಷ್ಟು, ಬೇಳೆಕಾಳು ಬೆಲೆಯಲ್ಲಿ ಶೇ 16.84ರಷ್ಟು ಹೆಚ್ಚಳವಾಗಿದೆ. 

ನಗರವಾಸಿಗಳಿಗೆ ಹೋಲಿಸಿದರೆ ಗ್ರಾಮೀಣ ಜನರಿಗೆ ಆಹಾರ ಪದಾರ್ಥಗಳ ಬೆಲೆಯ ಬಿಸಿ ತಟ್ಟಿದೆ. ನಗರ ಪ್ರದೇಶದ ಹಣದುಬ್ಬರವು ಶೇ 4.11ಕ್ಕೆ ಇಳಿಕೆಯಾಗಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ 5.43ಕ್ಕೆ ಏರಿಕೆಯಾಗಿದೆ ಎಂದು ಸೋಮವಾರ ಬಿಡುಗಡೆಯಾಗಿರುವ ಕೇಂದ್ರ ಸಾಂಖ್ಯಿಕ ಇಲಾಖೆಯ ವರದಿ ತಿಳಿಸಿದೆ.

‘ಗ್ರಾಮೀಣ ಪ್ರದೇಶದಲ್ಲಿ ಹಣದುಬ್ಬರದ ಮಟ್ಟ ಏರಿಕೆಯಲ್ಲಿ ಆಹಾರ ಪದಾರ್ಥಗಳ ಕೊಡುಗೆ ದೊಡ್ಡದಿದೆ’ ಎಂದು ಬ್ಯಾಂಕ್‌ ಆಫ್‌ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್ ತಿಳಿಸಿದ್ದಾರೆ.

‘ನಗರ ಪ್ರದೇಶಗಳಲ್ಲಿ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಬಳಕೆ ಮಾಡಲಾಗುತ್ತದೆ. ಸಂಸ್ಕರಣೆ ಮಾಡಿದ ಆಹಾರ ಪದಾರ್ಥಗಳ ಬೆಲೆಯಲ್ಲಷ್ಟೇ ತುಸು ಏರಿಕೆಯಾಗಿದೆ’ ಎಂದು ಹೇಳಿದ್ದಾರೆ.

‘ಇಂಧನ, ವಿದ್ಯುತ್‌, ಸಾರಿಗೆ ಮತ್ತು ಸರಕು ಸೇವಾ ವಿಭಾಗದಲ್ಲಿ ಬೆಲೆ ಗಮನಾರ್ಹವಾಗಿ ಕಡಿಮೆಯಾಗಿದೆ. ಆದರೆ, ಆಹಾರ ಪದಾರ್ಥಗಳ ಬೆಲೆಯಲ್ಲಿ ಅಲ್ಪಮಟ್ಟಿಗೆ ಏರಿಕೆಯಾಗಿದೆ’ ಎಂದು ಇವೈ ಇಂಡಿಯಾದ ಮುಖ್ಯ ನೀತಿ ಸಲಹೆಗಾರ ಡಿ.ಕೆ. ಶ್ರೀವಾಸ್ತವ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT