ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ತಿಂಗಳ ಗರಿಷ್ಠ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ

Last Updated 14 ಫೆಬ್ರುವರಿ 2022, 19:48 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣವು ಜನವರಿಯಲ್ಲಿ ಶೇಕಡ 6.01ಕ್ಕೆ ತಲುಪಿದೆ. ಇದು ಏಳು ತಿಂಗಳ ಗರಿಷ್ಠ ಪ್ರಮಾಣ. ಕೆಲವು ಆಹಾರ ವಸ್ತುಗಳ ಬೆಲೆಯಲ್ಲಿ ಆದ ಹೆಚ್ಚಳವೇ ಹಣದುಬ್ಬರ ಜಾಸ್ತಿ ಆಗಲು ಕಾರಣ. ಜನವರಿಯಲ್ಲಿನ ಹಣದುಬ್ಬರ ದರವು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ನಿಗದಿ ಮಾಡಿಕೊಂಡಿರುವ ಗರಿಷ್ಠ ಮಟ್ಟಕ್ಕಿಂತ ಹೆಚ್ಚು.

ಎಣ್ಣೆ ಮತ್ತು ಕೊಬ್ಬು ವಿಭಾಗದಲ್ಲಿ ಜನವರಿಯಲ್ಲಿ ಹಣದುಬ್ಬರವು ಶೇ 18.7ರಷ್ಟು ಆಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಸೋಮವಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳುತ್ತವೆ. ಬಟ್ಟೆ ಮತ್ತು ಪಾದರಕ್ಷೆ, ಸಾರಿಗೆ ಮತ್ತು ಸಂವಹನ ವರ್ಗದಲ್ಲಿ ವಾರ್ಷಿಕ ಹಣದುಬ್ಬರ ಪ್ರಮಾಣವು ಶೇ 9ನ್ನು ದಾಟಿದೆ.

ಡಿಸೆಂಬರ್‌ ತಿಂಗಳ ಹಣದುಬ್ಬರ ಪ್ರಮಾಣವನ್ನು ಪರಿಷ್ಕರಿಸಲಾಗಿದ್ದು, ಅದು ಶೇ 5.66 ಎಂದು ಕೇಂದ್ರ ತಿಳಿಸಿದೆ. ಹಿಂದಿನ ವರ್ಷದ ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 4.06ರಷ್ಟು ಇತ್ತು. 2021ರ ಜೂನ್‌ನಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 6.26ರಷ್ಟು ಆಗಿತ್ತು.

ಮಾಂಸ ಮತ್ತು ಮೀನು (ಶೇ 5.47ರಷ್ಟು ಹಣದುಬ್ಬರ), ಧಾನ್ಯಗಳು ಮತ್ತು ಉತ್ಪನ್ನಗಳು (ಶೇ 3.39ರಷ್ಟು), ತರಕಾರಿ (ಶೇ 5.19ರಷ್ಟು) ವಿಭಾಗಗಳಲ್ಲಿ ಕೂಡ ಹಣದುಬ್ಬರವು ಜಾಸ್ತಿ ಆಗಿದೆ.

ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಶೇ 4ರಲ್ಲಿ ಮಿತಿಗೊಳಿಸುವ ಹೊಣೆ ಆರ್‌ಬಿಐ ಮೇಲೆ ಇದೆ. ಹಣದುಬ್ಬರವು ಶೇ 6ರವರೆಗೆ ತಲುಪಲು ಅವಕಾಶ ಇದೆ. ಆರ್‌ಬಿಐ ರೆಪೊ ದರದಲ್ಲಿ ವ್ಯತ್ಯಾಸ ಮಾಡುವ ಸಂದರ್ಭದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಪರಿಗಣಿಸುತ್ತದೆ.

ಸಗಟು ಹಣದುಬ್ಬರ ಇಳಿಕೆ: ಜನವರಿಯಲ್ಲಿ ಸಗಟು ಹಣದುಬ್ಬರ ಪ್ರಮಾಣವು ಶೇ 12.96ಕ್ಕೆ ಇಳಿಕೆ ಕಂಡಿದೆ. ಆದರೆ, ಸತತ ಹತ್ತು ತಿಂಗಳುಗಳಿಂದ ಸಗಟು ಹಣದುಬ್ಬರ ಪ್ರಮಾಣವು ಎರಡಂಕಿ ಮಟ್ಟದಲ್ಲಿಯೇ ಇದೆ. ಹಿಂದಿನ ವರ್ಷದ ಜನವರಿಯಲ್ಲಿ ಸಗಟು ಹಣದುಬ್ಬರ ಪ್ರಮಾಣವು ಶೇ 2.51ರಷ್ಟು ಇತ್ತು.

ಷೇರುಪೇಟೆ: ಸೆನ್ಸೆಕ್ಸ್ 1,747 ಅಂಶ ಕುಸಿತ‌

ಮುಂಬೈ : ರಷ್ಯಾ ಮತ್ತು ಉಕ್ರೇನ್ ನಡುವಿನ ಬಿಕ್ಕಟ್ಟು ತೀವ್ರವಾಗುತ್ತಿರುವ ಕಾರಣ ವಿಶ್ವದೆಲ್ಲೆಡೆ ಹೂಡಿಕೆದಾರರು ಅಪಾಯ ಹೆಚ್ಚಿರುವ ಹೂಡಿಕೆ ಉತ್ಪನ್ನಗಳು, ಷೇರುಗಳ ಮಾರಾಟಕ್ಕೆ ಮುಂದಾದರು. ಇದರ ಪರಿಣಾಮವು ಮುಂಬೈ ಷೇರು‍ಪೇಟೆಯ ಮೇಲೆಯೂ ಆಯಿತು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,747 ಅಂಶ ಇಳಿಕೆ ಕಂಡಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 531 ಅಂಶ ಕುಸಿಯಿತು.

ಅಮೆರಿಕದ ಡಾಲರ್ ಎದುರು ರೂಪಾಯಿಯು 24 ಪೈಸೆಯಷ್ಟು ಮೌಲ್ಯ ಕಳೆದುಕೊಂಡಿದ್ದು ಹಾಗೂ ವಿದೇಶಿ ಬಂಡವಾಳ ಹೊರಹರಿವು ಮುಂದುವರಿದಿದ್ದು ಕೂಡ ಸೂಚ್ಯಂಕಗಳ ಇಳಿಕೆಗೆ ಕಾರಣವಾದವು ಎಂದು ವರ್ತಕರು ತಿಳಿಸಿದ್ದಾರೆ. ಸೋಮವಾರದ ವಹಿವಾಟಿನ ಕೊನೆಯಲ್ಲಿ ಸೆನ್ಸೆಕ್ಸ್ 56,405 ಅಂಶಗಳಿಗೆ, ನಿಫ್ಟಿ 16,842 ಅಂಶಗಳಿಗೆ ತಲುಪಿವೆ. 2021ರ ಫೆಬ್ರುವರಿ 26ರ ನಂತರದ ಅತಿದೊಡ್ಡ ಕುಸಿತವನ್ನು ಸೆನ್ಸೆಕ್ಸ್ ಸೋಮವಾರ ಕಂಡಿದೆ.

ಎರಡು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತಿನ ಮೌಲ್ಯವು ₹ 12.38 ಲಕ್ಷ ಕೋಟಿಗಿಂತ ಹೆಚ್ಚು ನಷ್ಟವಾಗಿದೆ.

‘ಜಾಗತಿಕ ವಿದ್ಯಮಾನಗಳು ದೇಶದ ಷೇರುಪೇಟೆಗಳ ಮೇಲೆ ಪರಿಣಾಮ ಉಂಟುಮಾಡುತ್ತಿವೆ. ರಷ್ಯಾ ಹಾಗೂ ಉಕ್ರೇನ್ ನಡುವಿನ ಬಿಕ್ಕಟ್ಟು ಉಲ್ಬಣವಾಗುತ್ತಿರುವುದು ಮತ್ತು ಕಚ್ಚಾ ತೈಲದ ಬೆಲೆಯಲ್ಲಿ ನಿರಂತರವಾಗಿ ಏರಿಕೆ ಆಗುತ್ತಿರುವುದು ಮಾರುಕಟ್ಟೆಯ ಓಟಕ್ಕೆ ತಡೆ ಒಡ್ಡುತ್ತಿದೆ. ಮಾರುಕಟ್ಟೆಯಲ್ಲಿ ಈಗ ಕರಡಿಯ ಹಿಡಿತ ಬಲವಾಗಿರುವಂತೆ ಕಾಣುತ್ತಿದೆ. ಷೇರುಪೇಟೆ ಸೂಚ್ಯಂಕಗಳು ಇನ್ನಷ್ಟು ಕೆಳಕ್ಕೆ ಹೋಗುವ ಸಾಧ್ಯತೆ ಇದೆ’ ಎಂದು ರೆಲಿಗೇರ್ ಬ್ರೋಕಿಂಗ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಅಜಿತ್ ಮಿಶ್ರಾ ಹೇಳಿದ್ದಾರೆ.

ರಿಯಾಲ್ಟಿ, ಲೋಹ ಮತ್ತು ಬ್ಯಾಂಕಿಂಗ್ ಸೂಚ್ಯಂಕಗಳು ಶೇಕಡ 5ಕ್ಕಿಂತ ಹೆಚ್ಚು ಕುಸಿತ ಕಂಡಿವೆ. ಸ್ಮಾಲ್‌ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಲಾರ್ಜ್‌ ಕ್ಯಾಪ್ ಸೂಚ್ಯಂಕಗಳು ಗರಿಷ್ಠ ಶೇ 4.15ರವರೆಗೆ ಇಳಿಕೆ ಕಂಡಿವೆ. ರಷ್ಯಾ ಸೇನೆಯು ಉಕ್ರೇನ್ ಮೇಲೆ ಶೀಘ್ರದಲ್ಲಿಯೇ ದಾಳಿ ನಡೆಸಬಹುದು ಎಂಬ ಕಳವಳದ ಕಾರಣದಿಂದಾಗಿ ಏಷ್ಯಾದ ಇತರೆಡೆಗಳಲ್ಲಿಯೂ ಷೇರುಪೇಟೆ ಸೂಚ್ಯಂಕಗಳು ಇಳಿಕೆ ಕಂಡಿವೆ.

ಬ್ರೆಂಟ್ ಕಚ್ಚಾ ತೈಲದ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ 1ರಷ್ಟು ಹೆಚ್ಚಾಗಿ ಪ್ರತಿ ಬ್ಯಾರೆಲ್‌ಗೆ 95.44 ಅಮೆರಿಕನ್ ಡಾಲರ್‌ ತಲುಪಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ಎದುರು ರೂಪಾಯಿ ಮೌಲ್ಯವು 75.60ಕ್ಕೆ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT