ಗುರುವಾರ , ಆಗಸ್ಟ್ 18, 2022
24 °C
ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ ತಯಾರಕ ಕಂಪನಿಗಳು

ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಸಬ್ಸಿಡಿ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿದ್ಯುತ್‌ ಚಾಲಿತ ವಾಹನಗಳ ತಯಾರಿಕೆ ಉತ್ತೇಜಿಸುವ 2ನೇ ಹಂತದ ಯೋಜನೆಯಲ್ಲಿ (ಫೇಮ್‌–2) ದ್ಚಿಚಕ್ರ ವಾಹನಗಳ ಮೇಲಿನ ಸಬ್ಸಿಡಿಯನ್ನು ಶೇಕಡ 50ರಷ್ಟು ಹೆಚ್ಚಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಕಂಪನಿಗಳು ಸ್ವಾಗತಿಸಿವೆ. ಇದು ಮಹತ್ವದ ನಿರ್ಧಾರ ಎಂದು ಕಂಪನಿಗಳು ಅಭಿಪ್ರಾಯಪಟ್ಟಿವೆ.

ಕೇಂದ್ರ ಸರ್ಕಾರವು ಶುಕ್ರವಾರ ಫೇಮ್‌–2 ಯೋಜನೆಯಲ್ಲಿ ಒಂದಿಷ್ಟು ಬದಲಾವಣೆ ಮಾಡಿದೆ. ಈ ಮೊದಲು ಎಲ್ಲಾ ವಿದ್ಯುತ್‌ ಚಾಲಿತ ವಾಹನಗಳಿಗೆ ಪ್ರತಿ ಕೆಡಬ್ಲ್ಯುಎಚ್‌ಗೆ (per KWh) ₹ 10 ಸಾವಿರ ಸಬ್ಸಿಡಿ ನಿಗದಿಪಡಿಸಲಾಗಿತ್ತು. ಇದೀಗ ದ್ವಿಚಕ್ರವಾಹನಗಳಿಗೆ ಪ್ರತಿ ಕೆಡಬ್ಲ್ಯುಎಚ್‌ಗೆ (per KWh)) ₹ 15 ಸಾವಿರ ಸಬ್ಸಿಡಿ ನಿಗದಿ ಮಾಡಲಾಗಿದೆ.

ಬೃಹತ್‌ ಉದ್ದಿಮೆಗಳ ಇಲಾಖೆಯು ಈಚೆಗೆ ತಂದಿರುವ ಬದಲಾವಣೆಯ ಪ್ರಕಾರ, ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೆ ನೀಡುವ ಆರ್ಥಿಕ ಉತ್ತೇನ ಮೊತ್ತವನ್ನು ವಾಹನಗಳ ಒಟ್ಟು ವೆಚ್ಚದ ಶೇ 40ಕ್ಕೆ ಹೆಚ್ಚಿಸಲಾಗಿದೆ. ಈ ಮೊದಲು ಇದು ಶೇ 20ರಷ್ಟಿತ್ತು.

‘ಕೋವಿಡ್‌ ಸಾಂಕ್ರಾಮಿಕದ ಹೊರತಾಗಿಯೂ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಮಾರಾಟ ಬೆಳವಣಿಗೆ ಕಂಡಿದೆ. ಸಬ್ಸಿಡಿಯನ್ನು ಶೇ 50ರಷ್ಟು ಹೆಚ್ಚಿಸುವ ಕೇಂದ್ರದ ನಿರ್ಧಾರದಿಂದ ಮಾರಾಟವು ಇನ್ನಷ್ಟು ಹೆಚ್ಚಳ ಆಗುವ ನಿರೀಕ್ಷೆ ಇದೆ. 2025ರ ವೇಳೆಗೆ 60 ಲಕ್ಷಕ್ಕೂ ಹೆಚ್ಚಿನ ವಾಹನಗಳ ಮಾರಾಟದ ಗುರಿ ತಲುಪುವ ಅಂದಾಜು ಇದೆ’ ಎಂದು ಏಥರ್‌ ಎನರ್ಜಿ ಕಂಪನಿಯ ಸಹ ಸ್ಥಾಪಕ ತರುಣ್‌ ಮೆಹ್ತಾ ಹೇಳಿದ್ದಾರೆ.

‘ಕೇಂದ್ರದ ನಿರ್ಧಾರದಿಂದ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಬೆಲೆಯು ಪೆಟ್ರೋಲ್ ಎಂಜಿನ್‌ ವಾಹನಗಳ ಆಸುಪಾಸಿಗೆ ಇಳಿಕೆ ಆಗಲಿದೆ’ ಎಂದು ವಿದ್ಯುತ್‌ ಚಾಲಿತ ವಾಹನಗಳ ತಯಾರಕರ ಸಂಘದ (ಎಸ್‌ಎಂಇವಿ) ಪ್ರಧಾನ ನಿರ್ದೇಶಕ ಸೋಹಿಂದರ್‌ ಗಿಲ್‌ ಅಭಿಪ್ರಾಯಪಟ್ಟಿದ್ದಾರೆ.

‘ನಗರ ಪ್ರದೇಶದಲ್ಲಿ ಬಳಸುವ ವಿದ್ಯುತ್ ಚಾಲಿತ ಸ್ಕೂಟರ್‌ ಬೆಲೆಯು ₹ 60 ಸಾವಿರಕ್ಕಿಂತಲೂ ಕಡಿಮೆ ಆಗಲಿದ್ದು, ಗರಿಷ್ಠ ವೇಗದ ಸ್ಕೂಟರ್‌ಗಳ ಬೆಲೆಯು ₹ 1 ಲಕ್ಷದ ಸಮೀಪಕ್ಕೆ ಬರಲಿದೆ’ ಎಂದು ಅವರು ವಿವರಿಸಿದ್ದಾರೆ.

ಕೇಂದ್ರದ ನಿರ್ಧಾರದಿಂದ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಬಳಕೆಗೆ ವೇಗ ಸಿಗಲಿದೆ ಎಂದು ರೆವೋಲ್ಟ್‌, ಓಕಿನೋವಾ ಕಂಪನಿಗಳು ಸಹ ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು