ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಧಗಳೊಂದಿಗೆ ಗಸ್ತು ತಿರುಗಿದ ಜನರು!

ನಗರಕ್ಕೆ ಮಕ್ಕಳ ಅಪಹರಿಸುವ ತಂಡ ಬಂದಿರುವ ಭೀತಿಯಲ್ಲಿ ಜನತೆ
Last Updated 19 ಮೇ 2018, 9:10 IST
ಅಕ್ಷರ ಗಾತ್ರ

ರಾಯಚೂರು: ಮಕ್ಕಳನ್ನು ಅಪಹರಿಸುವ ತಂಡವೊಂದು ನಗರಕ್ಕೆ ಬಂದಿದೆ ಎನ್ನುವ ವದಂತಿ ಹರಡಿದ್ದರಿಂದ ಬುಧವಾರ ರಾತ್ರಿಯಿಡೀ ಜನರು ಕೋಲು ಹಾಗೂ ಇತರೆ ಆಯುಧಗಳನ್ನು ಹಿಡಿದುಕೊಂಡು ಬಡಾವಣೆಗಳಲ್ಲಿ ಗಸ್ತು ತಿರುಗಿದ ಘಟನೆ ನಡೆದಿದೆ.

ಅಲ್ಲದೆ, ಜನರು ಸದರ್‌ ಬಜಾರ್‌ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ಮಕ್ಕಳನ್ನು ಅಪಹರಣ ಮಾಡುವ ತಂಡವೊಂದು ನಗರದೊಳಗೆ ನುಗ್ಗಿದ್ದು, ಅವರನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಿಎಸ್‌ಐ ಅವರನ್ನು ತಳ್ಳಾಡಿದ ಪ್ರಸಂಗವೂ ನಡೆದಿದೆ. ಸಣ್ಣ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆದಿದ್ದು, ಕೆಲವು ಪೊಲೀಸರಿಗೆ ಗಾಯಗಳಾಗಿವೆ.

ಮಕ್ಕಳ ಅಪಹರಣ ಮಾಡುವ ತಂಡ ನಗರಕ್ಕೆ ಬಂದಿದೆ ಎನ್ನುವ ವದಂತಿಯು ವ್ಯಾಟ್ಸ್‌ಆ್ಯಪ್‌ ಮೂಲಕ ಹರಿದಾಡಿದೆ. ಇದನ್ನು ನೋಡಿದ ಜನರು ಆತಂಕಗೊಂಡು ವಿವಿಧ ಕಡೆಗಳಲ್ಲಿ ಅನುಮಾನಸ್ಪದರನ್ನು ಹಿಡಿದು ಹಲ್ಲೆ ನಡೆಸಿದರು. ಆದರೆ, ಜನರಿಂದ ಹಲ್ಲೆಗೊಳಗಾದವರು ಮಾನಸಿಕ ಅಸ್ವಸ್ಥರು ಹಾಗೂ ಬೇರೆ ಊರಿನಿಂದ ಬಂದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಲಾಲ್‌ ನಗರ, ಹರಿಜನವಾಡ, ಸಿಯಾತಲಾಬ್, ತೀನ್‌ ಕಂದಿಲ್, ಅಶೋಕ ಡಿಪೋ, ಮಾವಿನ ಕೆರೆ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡ ನಗರದಲ್ಲಿ ಗಸ್ತು ತಿರುಗುತ್ತಿದ್ದಾರೆ.

ಸಿಯಾತಲಾಬ್ ಬಡಾವಣೆಯಲ್ಲಿ ಇಬ್ಬರು ಮಕ್ಕಳನ್ನು ಅಪಹರಣಕ್ಕೆ ಪ್ರಯತ್ನಿಸಲಾಗಿದೆ ಎಂಬ ಸಂಶಯದ ಮೇರೆಗೆ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಹಿಡಿದು ಮನಬಂದಂತೆ ಥಳಿಸಲಾಗಿದೆ. ಮಾರ್ಕೆಟ್‌ ಯಾರ್ಡ್‌ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿಯೂ ವ್ಯಕ್ತಿಯೊಬ್ಬನನ್ನು ಹಿಡಿದು ಥಳಿಸಲಾಗಿದೆ.

ಮಕ್ಕಳ ಅಪಹರಣ ಮಾಡಲು ಕಳ್ಳರು ಬಂದಿದ್ದಾರೆ ಎಂಬ ಭೀತಿಯಿಂದ ವಿವಿಧ ಬಡಾವಣೆಗಳಲ್ಲಿ ಮಕ್ಕಳ ಪೋಷಕರು ಮಕ್ಕಳ ರಕ್ಷಣೆಗೆ ಕಾವಲು ಕಾದರು. ಗುರುವಾರ ಬೆಳಿಗ್ಗೆಯೂ ನಗರದ ವಿವಿಧ ಬಡಾವಣೆಗಳಲ್ಲಿ ಕಳ್ಳರು ಸಿಕ್ಕಿದ್ದಾರೆ ಎಂಬ ಮಾಹಿತಿಯಿಂದ ಜನರು ತಂಡೋಪ ತಂಡವಾಗಿ ಅಲ್ಲಿ ಇಲ್ಲಿ ಎಂದು ತಿರುಗಾಡುವ ಪ್ರಸಂಗ ನಡೆಯಿತು.

ಜಿಲ್ಲೆಯಲ್ಲಿ ಎಲ್ಲಿಯೂ ಮಕ್ಕಳ ಅಪಹರಣ ಮಾಡುವ ಗುಂಪು ಸಂಚರಿಸುತ್ತಿಲ್ಲ. ಅನಾವಶ್ಯಕ ವದಂತಿ ಹಬ್ಬಿಸುವವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ಹೇಳಿದರು.

ಗುರುವಾರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗರಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಕಾನೂನು ಕೈಗೆತ್ತಿಕೊಳ್ಳುವಂತಹ ಯಾವುದೇ ಕಾರ್ಯವನ್ನು ಮಾಡದೇ ಶಾಂತಿಯಿಂದ ಇರಬೇಕು ಎಂದು ಮನವಿ ಮಾಡಿದರು.

ವ್ಯಾಟ್ಸ್‌ಆ್ಯಪ್‌ನಲ್ಲಿ ಆಧಾರವಿಲ್ಲದ ಸಂದೇಶಗಳು ಸ್ವೀಕಾರಗೊಂಡು ವದಂತಿ ಹಬ್ಬುತ್ತಿವೆ. ಇದರಿಂದ ಅಮಾಯಕ ಜನರು ಭಯಭೀತರಾಗಿದ್ದಾರೆ. ಆದ್ದರಿಂದ ಇಂತಹ ಸಂದೇಶಗಳನ್ನು ಫಾರ್‌ವರ್ಡ್‌ ಮಾಡುವುದರಿಂದ ಯಾರಿಗಾದರೂ ತೊಂದರೆಯಾದರೆ ಸಂದೇಶ ಕಳುಹಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಜನರ ಭೀತಿಯನ್ನು ದೂರ ಮಾಡಲು ಅಗತ್ಯ ಭದ್ರತೆ ಕಲ್ಪಿಸುವ ಮುಲಕ ರಾತ್ರಿ ಗಸ್ತನ್ನು ಕೂಡ ಹೆಚ್ಚಿಸಲಾಗಿದೆ. ಜಿಪಿಎಸ್‌ ಮೂಲಕ ಅಧಿಕಾರಿಗಳ ಗಸ್ತಿನ ಮಾಹಿತಿಯೂ ಸಂಗ್ರಹಿಸಲಾಗುತ್ತಿದೆ ಎಂದರು.

***
ಆಂಧ್ರಪ್ರದೇಶದ ಕರ್ನೂಲ್ , ಗದ್ವಾಲ್‌ ಕಡೆಯಿಂದ ಈ ಸುಳ್ಳು ಸಂದೇಶ ಹರಡಿರುವ ಮಾಹಿತಿಯಿದ್ದು, ಈ ಬಗ್ಗೆ ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ವಹಿಸಲಾಗುತ್ತದೆ
ಡಿ.ಕಿಶೋರಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT