ಮಂಗಳವಾರ, ಸೆಪ್ಟೆಂಬರ್ 24, 2019
29 °C
ಗೃಹ, ವಾಹನ ಖರೀದಿ ಅಗ್ಗ, ಠೇವಣಿ ಬಡ್ಡಿ ಆದಾಯ ನಷ್ಟ

ಬಡ್ಡಿದರಗಳ ಕಡಿತ: ಎಸ್‌ಬಿಐ ಗ್ರಾಹಕರಿಗೆ ಹಬ್ಬದ ಕೊಡುಗೆ

Published:
Updated:

ಮುಂಬೈ: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ತನ್ನ ಗ್ರಾಹಕರಿಗೆ ಹಬ್ಬದ ಕೊಡುಗೆ ಘೋಷಿಸಿದೆ. ಎಲ್ಲಾ ಅವಧಿ ಸಾಲಗಳ ಮೇಲಿನ ಬಡ್ಡಿದರದಲ್ಲಿ ಶೇ 0.10ರಷ್ಟು ಇಳಿಕೆ ಮಾಡಿದೆ. 

ಇದರಿಂದ ವಿವಿಧ ಸಾಲಗಳು ಅಗ್ಗವಾಗಲಿವೆ. ಆದರೆ, ಠೇವಣಿಗಳ ಮೇಲಿನ ಬಡ್ಡಿ ಆದಾಯ ಅವಲಂಬಿಸಿರುವ ಹಿರಿಯ ನಾಗರಿಕರು ಮತ್ತು ನಿವೃತ್ತರಿಗೆ ನಷ್ಟವಾಗಲಿದೆ. ಪರಿಷ್ಕೃತ ಬಡ್ಡಿ ದರಗಳು ಮಂಗಳವಾರದಿಂದಲೇ ಜಾರಿಗೆ ಬರಲಿವೆ.

ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ ‘ಎಂಸಿಎಲ್‌ಆರ್‌’ ಅನ್ನು ಶೇ 8.25 ರಿಂದ ಶೇ 8.15ಕ್ಕೆ ಇಳಿಸಲಾಗಿದೆ. ಇದು ಬ್ಯಾಂಕಿಂಗ್‌ ಉದ್ಯಮದಲ್ಲಿಯೇ ಅತ್ಯಂತ ಕಡಿಮೆ ಬಡ್ಡಿದರವಾಗಿದೆ ಎಂದು ಬ್ಯಾಂಕ್‌ ಹೇಳಿಕೊಂಡಿದೆ.

ಹಬ್ಬದ ದಿನಗಳಲ್ಲಿ ಹೆಚ್ಚುವ ಗೃಹ, ವಾಹನ ಖರೀದಿ ಬೇಡಿಕೆ ಹೆಚ್ಚಳ ಮತ್ತು ತನ್ನ ಬಳಿ ಇರುವ ಹೆಚ್ಚುವರಿ ನಗದಿನ ಪ್ರಯೋಜನ ಪಡೆದುಕೊಳ್ಳಲು ಎಸ್‌ಬಿಐ ಈ ನಿರ್ಧಾರ ಕೈಗೊಂಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಬ್ಯಾಂಕ್‌ ಇದುವರೆಗೆ 5 ಬಾರಿ ಬಡ್ಡಿ ದರ ಕಡಿತ ಮಾಡಿದೆ. ಇದರ ಒಟ್ಟಾರೆ ಕಡಿತವು ಶೇ 0.40ರಷ್ಟಾಗಿದೆ. ಬ್ಯಾಂಕ್‌ ತನ್ನ ಬಹುತೇಕ ಎಲ್ಲಾ ಸಾಲ ಮತ್ತು ಠೇವಣಿ ಉತ್ಪನ್ನಗಳ ಬಡ್ಡಿ ದರಗಳನ್ನು ರೆಪೊ ದರ ಆಧರಿಸಿ ನಿಗದಿಪಡಿಸಿದೆ.

ಠೇವಣಿ ಬಡ್ಡಿ ದರ ಕಡಿತ

ಅವಧಿ ಠೇವಣಿಗಳ ಬಡ್ಡಿದರದಲ್ಲಿ ಶೇ 0.20 ರಿಂದ ಶೇ 0.25ರವರೆಗೂ ಕಡಿತ ಮಾಡಿದೆ. ₹ 1 ಕೋಟಿಗಿಂತ ಹೆಚ್ಚಿನ ಮೊತ್ತದ ವಿವಿಧ ಅವಧಿ ಠೇವಣಿಗಳ ಬಡ್ಡಿ ದರಗಳಲ್ಲಿ ಶೇ 0.10 ರಿಂದ ಶೇ 0.20ರವರೆಗೂ ಇಳಿಕೆ ಮಾಡಿದೆ.

Post Comments (+)