ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

12 ಸಾವಿರ ಹೊಸ ಉದ್ಯೋಗಿಗಳ ನೇಮಕಕ್ಕೆ ಎಸ್‌ಬಿಐ ನಿರ್ಧಾರ

Published 12 ಮೇ 2024, 13:57 IST
Last Updated 12 ಮೇ 2024, 13:57 IST
ಅಕ್ಷರ ಗಾತ್ರ

ಮುಂಬೈ: ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು, 2024–25ನೇ ಆರ್ಥಿಕ ವರ್ಷದಲ್ಲಿ ಹೊಸದಾಗಿ ಸುಮಾರು 12 ಸಾವಿರ ಉದ್ಯೋಗಿಗಳ ನೇಮಕಕ್ಕೆ ಮುಂದಾಗಿದ್ದು, ಈ ಪೈಕಿ ಶೇ 85ರಷ್ಟು ಎಂಜಿನಿಯರಿಂಗ್‌ ಪದವೀಧರರಿಗೆ ಆದ್ಯತೆ ನೀಡಲು ನಿರ್ಧರಿಸಿದೆ.

3 ಸಾವಿರಕ್ಕೂ ಹೆಚ್ಚು ಪ್ರೊಬೆಷನ್‌ ಅಧಿಕಾರಿಗಳು ಮತ್ತು 8 ಸಾವಿರಕ್ಕೂ ಹೆಚ್ಚು ಸಹಾಯಕ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ದಿನೇಶ ಕುಮಾರ್‌ ಖಾರಾ ತಿಳಿಸಿದ್ದಾರೆ.

‘ಹೊಸ ಉದ್ಯೋಗಿಗಳಿಗೆ ಬ್ಯಾಂಕಿಂಗ್‌ ವ್ಯವಸ್ಥೆ ಕುರಿತು ಅಗತ್ಯ ತರಬೇತಿ ನೀಡಿದ ಬಳಿಕ ಬ್ಯಾಂಕ್‌ನ ವಿವಿಧ ಸ್ತರಗಳಲ್ಲಿ ಕೆಲಸಕ್ಕೆ ನಿಯೋಜಿಸಲಾಗುತ್ತದೆ. ನೇಮಕವಾಗುವ ಎಂಜಿನಿಯರ್‌ಗಳಿಗೆ ನೀಡುವ ಹುದ್ದೆಗಳ ಶ್ರೇಣಿಯಲ್ಲಿ ಯಾವುದೇ ಪಕ್ಷಪಾತ ಅನುಸರಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. 

‘ಬ್ಯಾಂಕಿಂಗ್‌ ವ್ಯವಸ್ಥೆ ಕುರಿತು ಎಂಜಿನಿಯರ್‌ಗಳಿಗೆ ಪರಿಚಯಿಸುವ ಜೊತೆಗೆ ಅವರ ಸಾಮರ್ಥ್ಯದ ಆಧಾರದ ಮೇಲೆ ಬ್ಯಾಂಕ್‌ನ ವ್ಯವಹಾರ ಹಾಗೂ ಮಾಹಿತಿ ತಂತ್ರಜ್ಞಾನದ ಕೆಲಸಕ್ಕೆ ನಿಯೋಜಿಸಲಾಗುತ್ತದೆ. ಇದು ಬ್ಯಾಂಕ್‌ನಲ್ಲಿ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಬಲವರ್ಧನೆಗೂ ಸಹಕಾರಿಯಾಗಲಿದೆ’ ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ದೇಶದಲ್ಲಿ ಪ್ರತಿವರ್ಷ ಎಂಜಿನಿಯರಿಂಗ್‌ ಕಾಲೇಜುಗಳಿಂದ ಹೊರಬರುತ್ತಿರುವ ‍ಪದವೀಧರರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಅದಕ್ಕೆ ತಕ್ಕಂತೆ ಐ.ಟಿ ವಲಯದಲ್ಲಿ ಹೊಸದಾಗಿ ನೇಮಕಾತಿ ನಡೆಯುತ್ತಿಲ್ಲ. ಇಂತಹ ಸಂದಿಗ್ಥ ಸ್ಥಿತಿಯಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆಯು ಈ ಪದವೀಧರರ ಪಾಲಿಗೆ ವರದಾನವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

‘ತಂತ್ರಜ್ಞಾನ ಬಹುಮುಖ್ಯವಾಗಿದ್ದು, ಯಾರೊಬ್ಬರು ಇದನ್ನು ನಿರ್ಲಕ್ಷಿಸುವಂತಿಲ್ಲ. ಭಾರತೀಯ ರಿಸರ್ವ್‌ ಬ್ಯಾಂಕ್‌ ಕೂಡ ನಿಯಮಿತವಾಗಿ ತಂತ್ರಜ್ಞಾನದ ಮಹತ್ವ ಕುರಿತು ನಿಯಮಿತವಾಗಿ ಬ್ಯಾಂಕ್‌ಗಳಿಗೆ ಮಾರ್ಗದರ್ಶನ ನೀಡುತ್ತದೆ’ ಎಂದು ಖಾರಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT