ಮುಂಬೈ: ಸೋಮವಾರ ಭಾರಿ ಕುಸಿತದ ಬಳಿಕ ಮಂಗಳವಾರ ಬೆಳಿಗ್ಗೆ ಚೇತರಿಕೆ ಕಂಡಿದ್ದ ದೇಶೀಯ ಷೇರುಪೇಟೆಯು ಮಧ್ಯಾಹ್ನದ ಹೊತ್ತಿಗೆ ಮತ್ತೆ ಕುಸಿತ ಕಂಡಿದೆ.
30 ಷೇರುಗಳ ಬಿಎಸ್‌ಇ ಸೆನ್ಸಕ್ಸ್ 61.30 ಅಂಶಗಳಷ್ಟು ಕುಸಿದು 78,698.10ರಲ್ಲಿ ವಹಿವಾಟು ನಡೆಸುತ್ತಿದೆ. ಎನ್‌ಎಸ್‌ಇ ನಿಫ್ಟಿ 48.95 ಅಂಶಗಳಷ್ಟು ಕುಸಿದು 24,006.65ರಲ್ಲಿ ವಹಿವಾಟು ನಡೆಸುತ್ತಿದೆ.
ಷೇರುಪೇಟೆಯ ಮಾಹಿತಿ ಪ್ರಕಾರ, ಸೋಮವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹10,073.75 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಬಿಎಸ್‌ಇ ವ್ಯಾಪ್ತಿಯ ಟಾಟಾ ಮೋಟಾರ್ಸ್, ಅದಾನಿ ಪೋರ್ಟ್ಸ್, ಟಾಟಾ ಸ್ಟೀಲ್, ಪವರ್ ಗ್ರಿಡ್, ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್, ಇಂಡಸ್‌ಲ್ಯಾಂಡ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ಗಳು ನಷ್ಟ ಕಂಡಿವೆ.
ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಊಹಾಪೋಹಗಳ ನಡುವೆ ಜಾಗತಿಕ ಷೇರುಪೇಟೆಯಲ್ಲಿ ತಲ್ಲಣ ಉಂಟಾಗಿದ್ದು, ದೇಶೀಯ ಷೇರುಪೇಟೆ ಮೇಲೂ ಅದು ಪರಿಣಾಮ ಬೀರಿದೆ.