ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಆತಂಕ: ಷೇರು ಕುಸಿತ

ಒಂದೇ ದಿನ ಬಿಎಸ್‌ಇ 930, ನಿಫ್ಟಿ 303 ಅಂಶ ಇಳಿಕೆ
Published 20 ಡಿಸೆಂಬರ್ 2023, 16:37 IST
Last Updated 20 ಡಿಸೆಂಬರ್ 2023, 16:37 IST
ಅಕ್ಷರ ಗಾತ್ರ

ಮುಂಬೈ: ವಾರದ ಹಿಂದೆ ನಾಗಾಲೋಟ ಕಂಡಿದ್ದ ಮುಂಬೈ ಷೇರು ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ ಮತ್ತು ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಬುಧವಾರ ಭಾರಿ ಇಳಿಕೆ ಕಂಡಿವೆ. 

ಭಾರತ ಸೇರಿದಂತೆ ವಿದೇಶಗಳಲ್ಲಿ ಮತ್ತೆ ಕಾಣಿಸಿಕೊಂಡಿರುವ ಕೋವಿಡ್‌–19 ಪ್ರಕರಣಗಳು ಮತ್ತು ಹೂಡಿಕೆದಾರರು ಲಾಭ ಮಾಡಿಕೊಳ್ಳಲು ಷೇರುಗಳ ಮಾರಾಟದಲ್ಲಿ ತೊಡಗಿದ್ದೇ ಈ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ.

‘ಜಾಗತಿಕಮಟ್ಟದಲ್ಲಿನ ಧನಾತ್ಮಕ ಪ್ರವೃತ್ತಿಯ ಹೊರತಾಗಿಯೂ ದೇಶೀಯ ಮಾರುಕಟ್ಟೆಯಲ್ಲಿ ತೀಕ್ಷ್ಣ ಮತ್ತು ಹಠಾತ್ ಮಾರಾಟ ಪ್ರವೃತ್ತಿ ಕಂಡುಬಂದಿತು. ಬೆಲೆ ಏರಿಕೆಯು ಹೂಡಿಕೆದಾರರು ಲಾಭ ಕಾಯ್ದಿರಿಸಲು ಪ್ರೇರೇಪಿಸಿತು’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

30 ಷೇರುಗಳ ಮುಂಬೈ ಷೇರು ಸೂಚ್ಯಂಕವು 930 ಅಂಶ (ಶೇ 1.30) ಇಳಿಕೆ ಕಂಡು, 70,506 ಅಂಶಗಳಿಗೆ ಸ್ಥಿರವಾಯಿತು. ಆರಂಭಿಕ ಹಂತದಲ್ಲಿ ಸೂಚ್ಯಂಕ 475 ಅಂಶ ಏರಿಕೆಯಾಗಿ ಗರಿಷ್ಠ ಮಟ್ಟವಾದ 71,913 ಅಂಶಗಳಿಗೆ ತಲುಪಿತ್ತು. 

ನಿಫ್ಟಿಯು 303 ಅಂಶ (ಶೇ 1.41) ಇಳಿಕೆಯಾಗಿ, 21,150ಕ್ಕೆ ತಲುಪಿತು. ದಿನದ ಆರಂಭಿಕ ಹಂತದಲ್ಲಿ 139 ಅಂಶ (ಶೇ 0.65) ಏರಿಕೆಯಾಗಿ 21,593 ಗರಿಷ್ಠಮಟ್ಟಕ್ಕೆ ಮುಟ್ಟಿತ್ತು ತಲುಪಿತ್ತು.

ಬಿಎಸ್‌ಇ ಷೇರುಗಳ ಪೈಕಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಮಾತ್ರ ಲಾಭ ಕಂಡಿದೆ. ಟಾಟಾ ಸ್ಟೀಲ್‌ ಶೇ 4.21ರಷ್ಟು ಕುಸಿದಿದೆ. ಎನ್‌ಟಿಪಿಸಿ, ಟಾಟಾ ಮೋಟರ್ಸ್‌, ಎಚ್‌ಸಿಎಲ್‌ ಟೆಕ್ನಾಲಜೀಸ್‌, ಮಹೀಂದ್ರ ಆ್ಯಂಡ್‌ ಮಹೀಂದ್ರ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಪವರ್‌ ಗ್ರಿಡ್‌, ಟೆಕ್‌ ಮಹೀಂದ್ರ, ಲಾರ್ಸನ್ ಆ್ಯಂಡ್ ಟೂಬ್ರೊ ಮತ್ತು ಜೆಎಸ್‌ಡಬ್ಲ್ಯು ಸ್ಟೀಲ್‌ ಷೇರುಗಳು ಕೂಡ ಇಳಿಕೆ ಕಂಡಿದೆ.

ಯುಟಿಲಿಟಿ (ಶೇ 4.65), ಟೆಲಿ ಕಮ್ಯುನಿಕೇಷನ್‌ (ಶೇ 4.36), ವಿದ್ಯುತ್‌ (ಶೇ 4.33), ಸೇವೆ (ಶೇ 4.20), ಲೋಹ (ಶೇ 3.57), ಸರಕು (ಶೇ 3.51), ಕೈಗಾರಿಕೆ (ಶೇ 2.85), ಬಂಡವಾಳ ಸರಕು (ಶೇ 2.83) ಇಳಿಕೆ ಕಂಡಿದೆ.

ಒಟ್ಟು 3,117 ಷೇರುಗಳು ಇಳಿಕೆ ಆಗಿವೆ. 658 ಷೇರು ಏರಿಕೆಯಾಗಿದ್ದರೆ, 86 ಸ್ಥಿರವಾಗಿವೆ. 

ಏಷ್ಯಾ ಮಾರುಕಟ್ಟೆಯಲ್ಲಿ ಸಿಯೋಲ್‌, ಟೋಕಿಯೊ ಮತ್ತು ಹಾಂಗ್‌ಕಾಂಗ್‌ ಸಕಾರಾತ್ಮಕ ವಹಿವಾಟು ದಾಖಲಿಸಿದವು. ಆದರೆ, ಶಾಂಘೈ ಇಳಿಕೆಯಲ್ಲಿ ಮುಕ್ತಾಯವಾಯಿತು. ಯುರೋಪ್‌ ಮಾರುಕಟ್ಟೆ ವಹಿವಾಟು ತೀವ್ರ ಇಳಿಕೆ ಕಂಡಿತು. ಜಾಗತಿಕ ತೈಲ ಮಾನದಂಡ ಬ್ರೆಂಟ್‌ ಕಚ್ಚಾ ತೈಲವು ಶೇ 0.76ರಷ್ಟು ಏರಿಕೆ ಆಗಿ, ಪ್ರತಿ ಬ್ಯಾರೆಲ್‌ಗೆ 79.83 ಡಾಲರ್‌ಗೆ ತಲುಪಿತು. 

ಚಿನ್ನದ ದರ ₹300 ಬೆಳ್ಳಿ ₹800 ಏರಿಕೆ

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಬುಧವಾರ ಚಿನ್ನ ಮತ್ತು ಬೆಳ್ಳಿ ದರ ಏರಿಕೆ ಆಗಿದೆ. ಚಿನ್ನದ ದರ 10 ಗ್ರಾಂಗೆ ₹300 ಏರಿಕೆಯಾಗಿ ₹63100ರಂತೆ ಮಾರಾಟವಾಯಿತು. ಬೆಳ್ಳಿ ಧಾರಣೆ ಕೆ.ಜಿಗೆ ₹800 ಹೆಚ್ಚಳವಾಗಿ ₹78500 ತಲುಪಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಆಗಿದ್ದು ದೇಶೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿತು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಸೌಮಿಲ್‌ ಗಾಂಧಿ ಹೇಳಿದ್ದಾರೆ.  ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಒಂದು ಔನ್ಸ್‌ಗೆ (28.34 ಗ್ರಾಂ) ಕ್ರಮವಾಗಿ 2040 ಮತ್ತು 24.07ರಂತೆ ಏರಿಕೆಯಾಗಿ ಮಾರಾಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT