ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಗೂಳಿ’ಯ ನಾಗಾಲೋಟ: ಸೆನ್ಸೆಕ್ಸ್‌ 2,507, ನಿಫ್ಟಿ 733 ಅಂಶ ಏರಿಕೆ

Published 3 ಜೂನ್ 2024, 16:02 IST
Last Updated 3 ಜೂನ್ 2024, 16:02 IST
ಅಕ್ಷರ ಗಾತ್ರ

ಮುಂಬೈ/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸತತ ಮೂರನೇ ಅವಧಿಯಲ್ಲೂ ಗೆಲುವು ಸಾಧಿಸಲಿದೆ ಎಂಬ ಮತಗಟ್ಟೆಗಳ ಸಮೀಕ್ಷೆ ಹಿನ್ನೆಲೆಯಲ್ಲಿ ಸೋಮವಾರ ಷೇರು ಸೂಚ್ಯಂಕಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿವೆ.

ಷೇರು ಸೂಚ್ಯಂಕಗಳು ಶೇ 3ಕ್ಕಿಂತ ಹೆಚ್ಚು ಏರಿಕೆಯಾಗಿವೆ. ಇದು ಮೂರು ವರ್ಷಗಳಲ್ಲಿ ಅತಿದೊಡ್ಡ ಏಕದಿನ ಗಳಿಕೆಯಾಗಿದೆ.

ಷೇರಿನ ಮೌಲ್ಯ ಏರಿಕೆಯಿಂದ ಹೂಡಿಕೆದಾರರ ಸಂಪತ್ತು ಒಂದೇ ದಿನ ₹13.78 ಲಕ್ಷ ಕೋಟಿ ವೃದ್ಧಿಯಾಗಿದೆ. ಬಿಎಸ್‌ಇ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ (ಎಂ–ಕ್ಯಾಪ್‌) ₹425 ಲಕ್ಷ ಕೋಟಿಗೆ (5.13 ಟ್ರಿಲಿಯನ್‌ ಡಾಲರ್‌) ಮುಟ್ಟಿದೆ. ಎನ್‌ಎಸ್‌ಇ ಕಂಪನಿಗಳ ಎಂ–ಕ್ಯಾಪ್‌ ₹422 ಲಕ್ಷ ಕೋಟಿ (5.09 ಟ್ರಿಲಿಯನ್‌ ಡಾಲರ್‌) ಆಗಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 2,507 ಅಂಶ (ಶೇ 3.39) ಏರಿಕೆಯಾಗಿ 76,468ಕ್ಕೆ ಅಂತ್ಯಗೊಂಡಿತು. ವಹಿವಾಟಿನ ವೇಳೆ 76,738ಕ್ಕೆ ಏರಿಕೆಯಾಗಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 733 ಅಂಶ (ಶೇ 3.25) ಹೆಚ್ಚಳವಾಗಿ 23,263ಕ್ಕೆ ಕೊನೆಗೊಂಡಿತು. ವಹಿವಾಟಿನ ವೇಳೆ 23,338ಕ್ಕೆ ಮುಟ್ಟಿತ್ತು.

ಸೆನ್ಸೆಕ್ಸ್‌ ಗುಚ್ಛದಲ್ಲಿ ಎನ್‌ಟಿಪಿಸಿ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಪವರ್‌ಗ್ರಿಡ್‌ ಮೌಲ್ಯ ಶೇ 9ಕ್ಕೂ ಹೆಚ್ಚು ಏರಿಕೆ ಕಂಡಿದೆ. ಲಾರ್ಸೆನ್‌ ಆ್ಯಂಡ್‌ ಟೊಬ್ರೊ, ಎಕ್ಸಿಸ್‌ ಬ್ಯಾಂಕ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಅಲ್ಟ್ರಾಟೆಕ್‌ ಸಿಮೆಂಟ್‌, ಮಹೀಂದ್ರ ಆ್ಯಂಡ್‌ ಮಹೀಂದ್ರ, ಇಂಡಸ್‌ಇಂಡ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಮತ್ತು ಟಾಟಾ ಸ್ಟೀಲ್‌ ಗಳಿಕೆ ಕಂಡಿವೆ. ಸನ್‌ಫಾರ್ಮಾ, ಎಚ್‌ಸಿಎಲ್‌ ಟೆಕ್ನಾಲಜೀಸ್‌, ಏಷ್ಯನ್‌ ಪೇಂಟ್ಸ್‌, ನೆಸ್ಲೆ ಮತ್ತು ಇನ್ಫೊಸಿಸ್‌ ಷೇರಿನ ಮೌಲ್ಯ ಇಳಿದಿದೆ. ಸರ್ಕಾರಿ ಸ್ವಾಮ್ಯದ ಕಂಪನಿಗಳು, ಇಂಧನ, ಯುಟಿಲಿಟಿ, ತೈಲ, ವಿದ್ಯುತ್‌, ರಿಯಾಲ್ಟಿ ವಲಯದ ಉದ್ಯಮಗಳ ಷೇರು ಮೌಲ್ಯ ಶೇ 8ರಷ್ಟು ಏರಿಕೆಯಾಗಿದೆ.

ಬಿಎಸ್‌ಇ ಮಿಡ್‌ಕ್ಯಾಪ್ ಶೇ 3.54 ಮತ್ತು ಸ್ಮಾಲ್‌ಕ್ಯಾಪ್‌ ಸೂಚ್ಯಂಕ ಶೇ 2.05ರಷ್ಟು ಏರಿಕೆಯಾಗಿದೆ. ಏಷ್ಯನ್‌ ಮಾರುಕಟ್ಟೆಯಲ್ಲಿ ಸೋಲ್‌, ಟೊಕಿಯೊ ಮತ್ತು ಹಾಂಗ್‌ಕಾಂಗ್‌ ಗಳಿಕೆ ಕಂಡಿದ್ದರೆ, ಶಾಂಘೈ ಇಳಿದಿದೆ. ಜಾಗತಿಕ ಬ್ರೆಂಟ್‌ ಕಚ್ಚಾ ತೈಲ ದರ ಶೇ 0.18ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 81.26 ಡಾಲರ್‌ಗೆ (₹6,755) ಮುಟ್ಟಿದೆ.

2021ರ ಫೆಬ್ರುವರಿ 1ರಂದು ಕೇಂದ್ರದ ಬಜೆಟ್‌ ಮಂಡನೆಯಾಯಿತು. ಅಂದು ಒಂದೇ ದಿನ ಸೆನ್ಸೆಕ್ಸ್‌ ಮತ್ತು ನಿಫ್ಟಿ ಶೇ 5ರಷ್ಟು ಏರಿಕೆ ಕಂಡಿದ್ದವು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವು ಸಾಧಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದ ನಂತರ 2019ರ ಮೇ 20ರಂದು ಶೇ 3ರಷ್ಟು ಸೂಚ್ಯಂಕಗಳು ಏರಿಕೆಯಾಗಿದ್ದವು. 

ಹೂಡಿಕೆದಾರರು ನಿರೀಕ್ಷಿಸಿದ್ದಕ್ಕಿಂತ ಮಾರ್ಚ್‌ ತ್ರೈಮಾಸಿಕದಲ್ಲಿ ಜಿಡಿಪಿ ಉತ್ತಮವಾಗಿರುವುದು ಮತ್ತು ಮತಗಟ್ಟೆ ಸಮೀಕ್ಷೆಯ ಅಂದಾಜಿನಿಂದಾಗಿ ಮೂರು ವರ್ಷಗಳಲ್ಲಿ ನಿಫ್ಟಿ ಅತ್ಯುತ್ತಮ ಸೆಷನ್‌ (ವಹಿವಾಟು) ದಾಖಲಿಸಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ದೀಪಕ್ ಜಸಾನಿ ಹೇಳಿದ್ದಾರೆ.

‘ಬಿಜೆಪಿ ನೇತೃತ್ವದ ಎನ್‌ಡಿಎಗೆ ಭರ್ಜರಿ ವಿಜಯದ ಮುನ್ಸೂಚನೆ ನೀಡಿದ ಮತಗಟ್ಟೆ ಸಮೀಕ್ಷೆಗಳಿಂದಾಗಿ ಮಾರುಕಟ್ಟೆ ಸೂಚ್ಯಂಕವು ಗರಿಷ್ಠ ಮಟ್ಟಕ್ಕೆ ಏರಿತು’ ಎಂದು ಸ್ಯಾಮ್‌ಕೊ ಎಂ.ಎಫ್‌ನ ಪಾರಸ್ ಮಟಾಲಿಯಾ ಅಭಿಪ್ರಾಯಪಟ್ಟಿದ್ದಾರೆ.

ಮತಗಟ್ಟೆ ಸಮೀಕ್ಷೆಯ ಅಂದಾಜಿನಿಂದ ಸರ್ಕಾರಕ್ಕೆ ಗೆಲುವಿನ ಆಶಾವಾದ ಹೆಚ್ಚಳವಾಗಿದೆ. ಇದರಿಂದ ಸರ್ಕಾರಿ ಸ್ವಾಮ್ಯದ ಕಂಪನಿಗಳು ಷೇರಿನ ಮೌಲ್ಯ ಏರಿಕೆಯಾಯಿತು ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ. 2023–24ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ 8.2ರಷ್ಟು ಬೆಳವಣಿಗೆ ಸಾಧಿಸಿದೆ. ಇದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯ ದೇಶದ ಸ್ಥಾನವನ್ನು ಭದ್ರಪಡಿಸಿದೆ ಎಂದು ಹೇಳಿದ್ದಾರೆ.

₹19 ಲಕ್ಷ ಕೋಟಿ ದಾಟಿದ ಅದಾನಿ ಸಮೂಹದ ಎಂ–ಕ್ಯಾಪ್‌:

ಅದಾನಿ ಸಮೂಹದ ಎಲ್ಲ ಕಂಪನಿಗಳ ಷೇರಿನ ಮೌಲ್ಯವು ಭಾರಿ ಏರಿಕೆಯಾಗಿದೆ. ಇದರಿಂದ ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯವು ₹19.42 ಲಕ್ಷ ಕೋಟಿಗೆ ಮುಟ್ಟಿದೆ.

ಅದಾನಿ ಪವರ್‌ ಶೇ 15.64 ಅದಾನಿ ಪೋರ್ಟ್ಸ್‌ ಶೇ 10.25 ಅದಾನಿ ಎನರ್ಜಿ ಸಲ್ಯೂಷನ್ಸ್‌ ಶೇ 8.84 ಅದಾನಿ ಟೋಟಲ್‌ ಗ್ಯಾಸ್‌ ಶೇ 7.77 ಅದಾನಿ ಎಂಟರ್‌ಪ್ರೈಸಸ್‌ ಶೇ 6.86 ಅದಾನಿ ಗ್ರೀನ್‌ ಎನರ್ಜಿ ಶೇ 6.39 ಎನ್‌ಡಿಟಿವಿ ಶೇ 6.15 ಅಂಬುಜಾ ಸಿಮೆಂಟ್ಸ್‌ ಶೇ 5.72 ಎಸಿಸಿ ಶೇ 5.16 ಮತ್ತು ಅದಾನಿ ವಿಲ್ಮರ್‌ ಶೇ 3.51ರಷ್ಟು ಏರಿಕೆಯಾಗಿದೆ.

ಎಸ್‌ಬಿಐ ಮಾರುಕಟ್ಟೆ ಮೌಲ್ಯ ₹8 ಲಕ್ಷ ಕೋಟಿ:  ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಷೇರಿನ ಮೌಲ್ಯ ಶೇ 9ರಷ್ಟು ಏರಿಕೆಯಾಗಿದೆ. ಇದರಿಂದ ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯಕ್ಕೆ ಒಂದೇ ದಿನ ₹69388 ಕೋಟಿ ಸೇರ್ಪಡೆಯಾಗಿದ್ದು ಬ್ಯಾಂಕ್‌ನ ಒಟ್ಟು ಎಂ–ಕ್ಯಾಪ್‌ ₹8 ಲಕ್ಷ ಕೋಟಿಗೆ ಮುಟ್ಟಿದೆ. ಈ ಮೈಲುಗಲ್ಲು ತಲುಪಿದ ಮೊದಲ ಸಾರ್ವಜನಿಕ ವಲಯದ ಬ್ಯಾಂಕ್ ಆಗಿ ಎಸ್‌ಬಿಐ ಹೊರಹೊಮ್ಮಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT