ಮಂಗಳವಾರ, ಅಕ್ಟೋಬರ್ 22, 2019
23 °C

ಭಾರತ – ಅಮೆರಿಕದ ವಾಣಿಜ್ಯ ಸಂಘರ್ಷ: ಸೂಚ್ಯಂಕ 491 ಅಂಶ ಕುಸಿತ

Published:
Updated:

ಮುಂಬೈ: ಭಾರತ ಮತ್ತು ಅಮೆರಿಕ ಮಧ್ಯೆ ನಡೆಯುತ್ತಿರುವ ಗರಿಷ್ಠ ಸುಂಕ ಹೇರಿಕೆ ಸಂಘರ್ಷವು ದೇಶದ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿದೆ.

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ರಾಜಕೀಯ ಬಿಕ್ಕಟ್ಟು ಮತ್ತು ಮುಂಗಾರು ವಿಳಂಬವಾಗಲಿದೆ ಎನ್ನುವ ಸುದ್ದಿಯೂ ಇಳಿಮುಖ ವಹಿವಾಟಿಗೆ ಕಾರಣವಾಗಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 491 ಅಂಶ ಇಳಿಕೆಯಾಗಿ 38,961 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 151 ಅಂಶ ಇಳಿಕೆಯಾಗಿ 11,672 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಅಮೆರಿಕವು ಭಾರತದ ಉಕ್ಕು ಮತ್ತು ಅಲ್ಯುಮಿನಿಯಂಮೇಲೆ ಸುಂಕ ಹೇರಿರುವುದಕ್ಕೆ ಪ್ರತೀಕಾರವಾಗಿ ಭಾರತವು ಅಮೆರಿಕದ 28 ಸರಕುಗಳ ಮೇಲೆ ಗರಿಷ್ಠ ಆಮದು ಸುಂಕ ಹೇರಿದೆ. ಇದು ಉಭಯ ದೇಶಗಳ ಮಧ್ಯೆ ವಾಣಿಜ್ಯ ಸಂಘರ್ಷಕ್ಕೆ ಕಾರಣವಾಗುವ ಆತಂಕ ಮೂಡಿಸಿದೆ.

ಬಿಎಸ್‌ಇನಲ್ಲಿ ಲೋಹ ವಲಯದ ಷೇರುಗಳು ಶೇ 3ರಷ್ಟು ಮತ್ತು ಇಂಧನ ವಲಯದ ಷೇರುಗಳು ಶೇ 2 ರಷ್ಟು ಗರಿಷ್ಠ ನಷ್ಟ ಕಂಡಿವೆ. ಬಿಎಸ್‌ಇನ ಸಣ್ಣ ಮತ್ತು ಮಧ್ಯಮ ಶ್ರೇಣಿ ಸೂಚ್ಯಂಕಗಳು ಸಹ ಇಳಿಕೆ ಕಂಡಿವೆ.

ಜಾಗತಿಕ ಮಾರುಕಟ್ಟೆಯಲ್ಲಿ, ಏಷ್ಯಾದ ಷೇರುಪೇಟೆಗಳಲ್ಲಿ ಮಿಶ್ರ ವಹಿವಾಟು ನಡೆದರೆ, ಯುರೋಪಿನಲ್ಲಿ ಆರಂಭದ ವಹಿವಾಟು ಸಕಾರಾತ್ಮಕವಾಗಿತ್ತು.

ರೂಪಾಯಿ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 11 ಪೈಸೆ ಇಳಿಕೆಯಾಗಿ ಒಂದು ಡಾಲರ್‌ಗೆ ₹ 69.91ರಂತೆ ವಿನಿಮಯಗೊಂಡಿತು. 

ಕಚ್ಚಾ ತೈಲ ದರ ಇಳಿಕೆ ಮತ್ತು ಬೇರೆ ಕರೆನ್ಸಿಗಳ ಎದುರು ಡಾಲರ್‌ ಮೌಲ್ಯ ಇಳಿಕೆಯಿಂದ ರೂಪಾಯಿ ಮೌಲ್ಯ ಹೆಚ್ಚಿನ ನಷ್ಟ ಕಾಣಲಿಲ್ಲ. ಬ್ರೆಂಟ್ ತೈಲ ದರ ಶೇ 10.5ರಷ್ಟು ಇಳಿಕೆಯಾಗಿ ಒಂದು ಬ್ಯಾರೆಲ್‌ಗೆ 61.36 ಡಾಲರ್‌ಗಳಂತೆ ಮಾರಾಟವಾಯಿತು.

ಕರಗಿದ ₹ 2 ಲಕ್ಷ ಕೋಟಿ ಸಂಪತ್ತು
ಷೇರುಪೇಟೆಯಲ್ಲಿ ಸೂಚ್ಯಂಕಗಳ ಇಳಿಕೆಯು ಹೂಡಿಕೆದಾರರ ಸಂಪತ್ತನ್ನು ಕರಗುವಂತೆ ಮಾಡಿದೆ. ದಿನದ ವಹಿವಾಟಿನಲ್ಲಿ ಹೂಡಿಕೆದಾರ ಸಂಪತ್ತು ಮೌಲ್ಯ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ₹ 2 ಲಕ್ಷ ಕೋಟಿಗಳಷ್ಟು ಕರಗಿದೆ. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹ 150 ಲಕ್ಷ ಕೋಟಿಗೆ ಇಳಿಕೆಯಾಗಿದೆ.

*
ಸದ್ಯ ದೇಶಿ ಷೇರುಪೇಟೆಗಳು ದೇಶಿ ಮತ್ತು ವಿದೇಶಿ ವಿದ್ಯಮಾನಗಳ ಪ್ರಭಾವದಲ್ಲಿವೆ.
-ಜಯಂತ್‌ ಮಾಂಗ್ಲಿಕ್‌, ರೆಲಿಗೇರ್‌ ಬ್ರೋಕಿಂಗ್‌ ಸಂಸ್ಥೆಯ ಅಧ್ಯಕ್ಷ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)