ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಬಿಕ್ಕಟ್ಟಿನ ನಡುವೆಯೂ ಸೆನ್ಸೆಕ್ಸ್‌ ಶೇಕಡ 66ರಷ್ಟು ಏರಿಕೆ

Last Updated 29 ಮಾರ್ಚ್ 2021, 14:41 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕ ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ದೇಶದ ಷೇರುಪೇಟೆಗಳು ಹೂಡಿಕೆದಾರರಿಗೆ ಉತ್ತಮ ಗಳಿಕೆ ತಂದುಕೊಟ್ಟಿವೆ. 2020–21ರಲ್ಲಿ ಇದುವರೆಗೆ ಮುಂಬೈ ಷೇರುಪೇಟೆಯು ಶೇಕಡ 66ರಷ್ಟು ಏರಿಕೆ ದಾಖಲಿಸಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

ಕೋವಿಡ್‌–19 ಸಾಂಕ್ರಾಮಿಕ ಒಂದೆಡೆ ವೇಗವಾಗಿ ಹರಡುತ್ತಿದ್ದರೂ, ಚೇತರಿಕೆಯ ಹಾದಿಗೆ ಮರಳಿದ ಸೆನ್ಸೆಕ್ಸ್‌ ಪ್ರಸಕ್ತ ಹಣಕಾಸು ವರ್ಷದಲ್ಲಿ 19,540 ಅಂಶಗಳಷ್ಟು (ಶೇ 66.30ರಷ್ಟು) ಏರಿಕೆ ಕಂಡಿದೆ. ಮಾರುಕಟ್ಟೆಯ ಚಲನೆಯು ಚಂಚಲವಾಗಿದ್ದ ಹೊತ್ತಿನಲ್ಲಿ ಕಂಡುಬಂದ ಈ ಪರಿಯ ಏರಿಕೆಯು ಹೆಚ್ಚು ಮಹತ್ವದ್ದು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2020ರ ಏಪ್ರಿಲ್‌ 3ರಂದು ಬಿಎಸ್‌ಇ ಒಂದು ವರ್ಷದ ಕನಿಷ್ಠ ಮಟ್ಟವಾದ 27,500.79ಕ್ಕೆ ಕುಸಿದಿತ್ತು. ಆದರೆ, 2021ರ ಫೆಬ್ರುವರಿ 16ರ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 52,516.76ಕ್ಕೆ ಏರಿಕೆ ಕಂಡಿತು.

ಲಾಕ್‌ಡೌನ್‌ ನಿರ್ಬಂಧ ತೆರವು ಹಾಗೂ ಆರ್ಥಿಕ ಚೇತರಿಕೆಯು ಷೇರುಪೇಟೆಗೆ ಮತ್ತಷ್ಟು ಬಲ ನೀಡಿದವು. ಕೋವಿಡ್‌ಗೆ ಲಸಿಕೆ ಕಂಡುಕೊಂಡಿದ್ದರಿಂದ ಮೂಡಿದ ಆಶಾವಾದವು ಗೂಳಿ ಓಟಕ್ಕೆ ವೇಗ ನೀಡಿತು. ಜಾಗತಿಕ ಷೇರುಪೇಟೆಗಳು ನವೆಂಬರ್‌ನಲ್ಲಿ ಉತ್ತಮ ಏರಿಕೆ ಕಂಡವು. ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳಿಗೆ ವಿದೇಶಿ ಬಂಡವಾಳ ಒಳಹರಿವು (ಎಫ್‌ಪಿಐ) ಮುಂದುವರಿಯಿತು ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಹೂಡಿಕೆ ಯೋಜನೆಗಳ ಮುಖ್ಯಸ್ಥ ವಿ.ಕೆ. ವಿಜಯಕುಮಾರ್‌ ತಿಳಿಸಿದ್ದಾರೆ.

ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ಖಾಸಗೀಕರಣದಂತಹ ನಿರ್ಧಾರಗಳು ಷೇರುಪೇಟೆಯಲ್ಲಿ ಹೆಚ್ಚಿನ ಉತ್ಸಾಹ ಮೂಡಿಸಿದವು ಎಂದೂ ಅವರು ಹೇಳಿದ್ದಾರೆ.

ಕೋವಿಡ್‌ನ ಎರಡನೆಯ ಮತ್ತು ಮೂರನೆಯ ಅಲೆಯ ಬಗ್ಗೆ ಹೆಚ್ಚು ಆತಂಕ ಇದೆ. ಹೀಗಿದ್ದರೂ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಿರುವುದರಿಂದ ಮಾರುಕಟ್ಟೆಯ ಮೇಲೆ ಹೆಚ್ಚಿನ ದುಷ್ಪರಿಣಾಮ ಆಗಲಾರದು. ಕೋವಿಡ್‌ನ ಎರಡನೇ ಅಲೆಯು ‌ಲಾಕ್‌ಡೌನ್‌ಗೆ ದಾರಿ ಮಾಡಿಕೊಟ್ಟಿಲ್ಲ. ಆರ್ಥಿಕ ಚಟುವಟಿಕೆಗಳ ಮೇಲೆ ಸೀಮಿತ ನಿರ್ಬಂಧ ಮಾತ್ರ ಇದೆ ಎಂದು ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಸೆನ್ಸೆಕ್ಸ್‌ ಹಲವು ಬಾರಿ ದಾಖಲೆ ಮಟ್ಟವನ್ನು ತಲುಪಿದೆ.

ಸೆನ್ಸೆಕ್ಸ್‌ ಹಾದಿ: ಫೆಬ್ರುವರಿ 3ರಂದು ಸೆನ್ಸೆಕ್ಸ್‌ 50,000ದ ಗಡಿ ದಾಟಿತು. ಫೆಬ್ರುವರಿ 8ರಂದು 51,000 ದಾಟಿ ವಹಿವಾಟು ನಡೆಸಿತು. ಫೆಬ್ರುವರಿ 15ರಂದು ಮೊದಲ ಬಾರಿಗೆ ದಾಖಲೆಯ 52,000ದ ಗಡಿ ದಾಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT