ನವದೆಹಲಿ: ಕಳೆದ ಆರು ತಿಂಗಳ ಅವಧಿಯಲ್ಲಿ ದೇಶಿ ಮಾರುಕಟ್ಟೆಯಲ್ಲಿ ಉಕ್ಕಿನ ಬೆಲೆಯು ಶೇಕಡ 40ರಷ್ಟು ಕಡಿಮೆ ಆಗಿದ್ದು, ಪ್ರತಿ ಟನ್‌ಗೆ ₹ 57 ಸಾವಿರಕ್ಕೆ ತಲುಪಿದೆ ಎಂದು ಸ್ಟೀಲ್‌ಮಿಂಟ್ ಸಂಸ್ಥೆ ಹೇಳಿದೆ.
ದೇಶದಿಂದ ಉಕ್ಕು ರಫ್ತು ಮಾಡಲು ಶೇಕಡ 15ರಷ್ಟು ತೆರಿಗೆ ಪಾವತಿಸಬೇಕು ಎಂಬ ನಿಯಮ ಜಾರಿಗೊಳಿಸಿದ ನಂತರದಲ್ಲಿ ಹೊರದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇಲ್ಲವಾಗಿದೆ. ಹೀಗಾಗಿ ಬೆಲೆ ಕಡಿಮೆ ಆಗಿದೆ ಎಂದು ಸಂಸ್ಥೆ ತಿಳಿಸಿದೆ.
ಉಕ್ಕಿನ ಬೆಲೆಯು ಏಪ್ರಿಲ್‌ನಲ್ಲಿ ಪ್ರತಿ ಟನ್‌ಗೆ ₹ 78,800ಕ್ಕೆ ತಲುಪಿತ್ತು. ಇದು ಗರಿಷ್ಠ ಮಟ್ಟವಾಗಿತ್ತು. ಇದಕ್ಕೆ ಶೇ 18ರಷ್ಟು ಜಿಎಸ್‌ಟಿ ಸೇರಿಸಿದಾಗ, ಖರೀದಿದಾರ ಕೊಡಬೇಕಿರುವ ಬೆಲೆಯು ₹ 93 ಸಾವಿರ ಆಗುತ್ತಿತ್ತು.
ಏಪ್ರಿಲ್ ತಿಂಗಳ ಅಂತ್ಯದ ವೇಳೆಗೆ ಉಕ್ಕಿನ ಬೆಲೆಯು ಕಡಿಮೆ ಆಗಲು ಶುರುವಾಯಿತು. ಜೂನ್ ಅಂತ್ಯದ ಹೊತ್ತಿಗೆ ಇದು ಟನ್‌ಗೆ ₹ 60,200ಕ್ಕೆ ತಲುಪಿತು ಎಂದು ಸ್ಟೀಲ್‌ಮಿಂಟ್ ಹೇಳಿದೆ. ಸೆಪ್ಟೆಂಬರ್ ಮಧ್ಯದ ಸುಮಾರಿಗೆ ಬೆಲೆಯು ₹ 57 ಸಾವಿರಕ್ಕೆ ತಲುಪಿದೆ.
ಇಲ್ಲಿ ಉಲ್ಲೇಖಿಸಿರುವ ಬೆಲೆಯು ಜಿಎಸ್‌ಟಿಯನ್ನು ಒಳಗೊಂಡಿಲ್ಲ. ಉಕ್ಕಿನ ಬೆಲೆಯು ಇನ್ನು ಎರಡು ತಿಂಗಳವರೆಗೆ ಹೆಚ್ಚಾಗುವ ಸಾಧ್ಯತೆ ಇಲ್ಲ ಎಂದು ಸಂಸ್ಥೆ ಅಂದಾಜು ಮಾಡಿದೆ.