ಗುರುವಾರ , ಫೆಬ್ರವರಿ 25, 2021
24 °C

ದಾನ ನೀಡಲು ‘ಸುಮಾರಾ’ ನೆರವು

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

Deccan Herald

ಅ ನೇಕರಲ್ಲಿ ತಮ್ಮ ದುಡಿಮೆಯ ಕೆಲ ಭಾಗವನ್ನು ದಾನ ಧರ್ಮಕ್ಕೆ ವಿನಿಯೋಗಿಸುವ ಒಲವು ಇರುತ್ತದೆ. ಕೆಲಸದ ಒತ್ತಡದಲ್ಲಿ ಆ ಕಡೆ ಗಮನ ಹರಿಸಲೂ ಆಗುವುದಿಲ್ಲ. ಧರ್ಮಾರ್ಥ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಧನ ಸಹಾಯ ಮಾಡಬೇಕೆಂದರೂ ಹತ್ತಾರು ಪ್ರಶ್ನೆಗಳು ಕಾಡುತ್ತವೆ. ಅಡೆತಡೆಗಳು ಎದುರಾಗುತ್ತವೆ.

ಯಾವ ಸಂಸ್ಥೆಗಳು ಪ್ರಾಮಾಣಿಕವಾಗಿ ಸಮಾಜಪರ ಚಟುವಟಿಕೆಗಳಲ್ಲಿ ಪಾರದರ್ಶಕ ರೀತಿಯಲ್ಲಿ ತೊಡಗಿವೆ. ಅವುಗಳನ್ನು ಗುರುತಿಸುವುದು ಹೇಗೆ. ತಾವು ನೀಡಿದ ಹಣ ಸದ್ಬಳಕೆ ಆಗುವುದೇ – ಇಂತಹ ಹಲವಾರು ಸಂದೇಹಗಳು ಕಾಡುತ್ತಿರುತ್ತವೆ. ಈ ಎಲ್ಲ ಅನುಮಾನಗಳಿಗೆ ನವೋದ್ಯಮ ‘ಸುಮಾರಾ’ ಸಮಾಧಾನಕರ ಉತ್ತರ ಮತ್ತು ಪರಿಹಾರ ಒದಗಿಸುತ್ತಿದೆ.

ಉದ್ದಿಮೆ ಸಂಬಂಧಿ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸುವ ತಂತ್ರಜ್ಞರಾಗಿರುವ ಪತಿ ನಿಖಿಲ್‌ ಜತೆ ಸೇರಿ ಆಯುಷಿ ಸಿನ್ಹಾ ಅವರು ಈ ಪರಿಕಲ್ಪನೆಗೆ ಮೂರ್ತ ರೂಪ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಐದು ವರ್ಷಗಳಿಂದ ನೆಲೆಸಿರುವ ಉತ್ತರ ಪ್ರದೇಶದ ಈ ದಂಪತಿ   ಈ ಸ್ಟಾರ್ಟ್ಅಪ್‌ ಸ್ಥಾಪಿಸಿ ಸುಲಭವಾಗಿ ದಾನ ಧರ್ಮ ಮಾಡಲು ತಂತ್ರಜ್ಞಾನ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ.

ಈ ಕಾರ್ಯದಲ್ಲಿ ಕೈಜೋಡಿಸಿದ ಸುಮನ್‌ ( SUman), ಮಹೇಶ (MAhesh) ಮತ್ತು ರವಿ (RAvi) ಅವರ ಹೆಸರಿನ ಇಂಗ್ಲಿಷ್‌ ಅಕ್ಷರಮಾಲೆಯ ಮೊದಲ ಎರಡು ಅಕ್ಷರಗಳನ್ನು ಸೇರಿಸಿ ಈ ಸ್ಟಾರ್ಟ್‌ಅಪ್‌ಗೆ ‘ಸುಮಾರಾ’ (Sumara) ಎಂದು ಹೆಸರಿಡಲಾಗಿದೆ.

ಅಲಹಾಬಾದ್‌ ಐಐಐಟಿಯ ಪದವೀಧರರಾಗಿರುವ ನಿಖಿಲ್‌ ದಂಪತಿ ಈ ಮೊದಲು ಮಿಂತ್ರಾ, ಫ್ಲಿಪ್‌ಕಾರ್ಟ್‌ನಲ್ಲಿ ಕೆಲಸ ಮಾಡಿದ್ದರು. ನಿಖಿಲ್‌ ಅವರು ಸರಕು ಸಾಗಣೆ ಕ್ಷೇತ್ರಕ್ಕೆ ಸಂಬಂಧಿಸಿದ ಪಾರ್ಸೆಲ್ಡ್‌ ಡಾಟ್‌ ಇನ್‌ (Parcelled.in) ಸ್ಟಾರ್ಟ್‌ಅಪ್‌ ಆರಂಭಿಸಿದ್ದರು. ಆಯುಷಿ ಅವರು, ವಿಶ್ವವಿದ್ಯಾಲಯಗಳು ಬೋಧಕರು, ವಿದ್ಯಾರ್ಥಿಗಳು, ಅವರ ಪಾಲಕರ ಜತೆ ಸಂವಹನ ಹೊಂದಲು ನೆರವಾಗುವ ‘ಹೆಲ್ಪಿಂಗೊ (Helpingo) ನವೋದ್ಯಮ ಸ್ಥಾಪಿಸಿದ್ದರು.

ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ಆಯೇಷಾ ಅವರಲ್ಲಿನ ತುಡಿತದ ಫಲವಾಗಿ ಈ ನವೋದ್ಯಮ ಸ್ಥಾಪನೆಗೊಂಡಿದೆ. ದಾನ ಧರ್ಮಕ್ಕೂ ಅಂತರ್ಜಾಲದಲ್ಲಿ ಸರಕು ಮತ್ತು ಸೇವೆಗಳ ಖರೀದಿಗೂ ತಳಕು ಹಾಕಿ ಈ ಕೆಲಸವನ್ನು ಹಗುರಗೊಳಿಸಬೇಕು ಎನ್ನುವ ಉದ್ದೇಶ ಇಲ್ಲಿ ಸಾಕಾರಗೊಂಡಿದೆ.

ಇ–ಕಾಮರ್ಸ್‌ ತಾಣಗಳಲ್ಲಿ ಗ್ರಾಹಕರು ತಾವು ಸರಕು ಖರೀದಿಸಲು ಪಾವತಿಸುವ ಮೊತ್ತದಲ್ಲಿಯೇ ಕೆಲ ಭಾಗವನ್ನು ಧರ್ಮಾರ್ಥ ಸಂಸ್ಥೆಗಳಿಗೆ ದಾನ ನೀಡಲು ವೇದಿಕೆ ಕಲ್ಪಿಸುವ ವಿಶಿಷ್ಟ ನವೋದ್ಯಮ ಇದಾಗಿದೆ. ಗೂಗಲ್‌ ಕ್ರೋಮ್‌ ಎಕ್ಸಟೆನ್ಶನ್‌ (Google Chrome extension) ಅನ್ನು ಬಳಕೆದಾರರು ತಮ್ಮ ಲ್ಯಾಪ್‌ಟಾಪ್‌, ಡೆಸ್ಕಟಾಪ್‌ಗಳಲ್ಲಿ ಅಳವಡಿಸಿಕೊಳ್ಳಬೇಕು.

ಇದರ ಮೂಲಕ ನಡೆಸುವ ಆನ್‌ಲೈನ್‌ ಖರೀದಿ ಸಂದರ್ಭದಲ್ಲಿ ಸ್ವಯಂಚಾಲಿತವಾಗಿ ಯಾವುದೇ ಹೆಚ್ಚುವರಿ ವೆಚ್ಚ ಇಲ್ಲದೆ ಸ್ವಯಂ ಸೇವಾ ಸಂಸ್ಥೆಗಳಿಗೆ ದಾನದ ಹಣ ವರ್ಗಾಯಿಸಬಹುದು. ಈ ಸೌಲಭ್ಯವನ್ನು ಈಗ ಮೊಬೈಲ್‌ ಆ್ಯಪ್‌ಗೂ ವಿಸ್ತರಿಸಲಾಗಿದೆ. ‘ಸುಮಾರಾ’ (Sumara) ಆ್ಯಪ್‌ ಮೂಲಕವೂ ಈ ಪ್ರಕ್ರಿಯೆ ನಡೆಸಬಹುದು.

ಸರಕು ಖರೀದಿ ವೇಳೆಯಲ್ಲಿಯೇ ನಿಗದಿಪಡಿಸಿದ ದಾನದ ಹಣವು, ಬಳಕೆದಾರರು ಆಯ್ಕೆ ಮಾಡಿಕೊಂಡ ಸ್ವಯಂ ಸೇವಾ ಸಂಸ್ಥೆಗಳಿಗೆ ನೇರವಾಗಿ ಪಾವತಿಯಾಗುವ ವ್ಯವಸ್ಥೆ ಇಲ್ಲಿದೆ. ‘ಎನ್‌ಜಿಒ’ಗಳಿಗೆ ಅಗತ್ಯವಾದ ಧನ ಸಹಾಯ ಸಂಗ್ರಹಿಸಲು ಆನ್‌ಲೈನ್‌ ಶಾಪಿಂಗ್‌ ನೆರವಾಗುವ ಸೌಲಭ್ಯ ಇದಾಗಿದೆ. ಆನ್‌ಲೈನ್‌ನಲ್ಲಿ ಸರಕುಗಳನ್ನು ಖರೀದಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ.

ಈ ವೇದಿಕೆಯ ನೆರವಿನಿಂದ ಕ್ರೈ, ಶಿಕ್ಷಾ ಒಳಗೊಂಡಂತೆ 100ಕ್ಕೂ ಹೆಚ್ಚು ಎನ್‌ಜಿಒಗಳಿಗೆ ಹಣ ಸಹಾಯ ಮಾಡಲಾಗುತ್ತಿದೆ.
ಶಿಕ್ಷಣ, ಆರೋಗ್ಯ ರಕ್ಷಣೆ, ಮಹಿಳಾ ಸಬಲೀಕರಣ, ಮಕ್ಕಳ ಕಲ್ಯಾಣ, ನೈಸರ್ಗಿಕ ಪ್ರಕೋಪಗಳ ನಿರ್ವಹಣೆ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ನೆರವಾಗುವವರು ಈ ಮಾಧ್ಯಮದ ಮೂಲಕ ಸುಲಭವಾಗಿ ಧನ ಸಹಾಯ ಒದಗಿಸಬಹುದು.

ದಾನಿಗಳು ಆನ್‌ಲೈನ್‌ ಶಾಪಿಂಗ್‌ ತಾಣಗಳ ಮೂಲಕ ತಮಗೆ ಕೊಡ ಮಾಡಿರುವ ದಾನದ ವಿವರಗಳ ಮೇಲೆ ಎನ್‌ಜಿಒಗಳು ನಿಗಾ ಇರಿಸಬಹುದಾದ ತಂತ್ರಜ್ಞಾನವನ್ನೂ ‘ಸುಮಾರಾ’ ಒದಗಿಸುತ್ತದೆ. ಈ ಮೂಲಕ ಎನ್‌ಜಿಒಗಳು ಆಧುನಿಕ ಮತ್ತು ಪಾರದರ್ಶಕವಾದ ರೀತಿಯಲ್ಲಿ ಹಣ ಸಂಗ್ರಹಿಸಲೂ ಈ ನವೋದ್ಯಮ ನೆರವಾಗುತ್ತಿದೆ.

ಮಿಂತ್ರಾ, ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮತ್ತಿತರ 50ಕ್ಕೂ ಹೆಚ್ಚು ಇ–ಕಾಮರ್ಸ್‌ ತಾಣಗಳಲ್ಲಿ ನಡೆಯುವ ಖರೀದಿಯಲ್ಲಿನ ಕೆಲ ಭಾಗವನ್ನು ದಾನ ಧರ್ಮದ ಉದ್ದೇಶಕ್ಕೆ ಬಳಕೆಯಾಗುವುದನ್ನು ಈ ಸೌಲಭ್ಯವು ಸುಲಭಗೊಳಿಸಲಿದೆ. ಸದ್ಯಕ್ಕೆ ಆನ್‌ಲೈನ್‌ ಖರೀದಿಗೆ ಮಾತ್ರ ಅನ್ವಯವಾಗಿರುವ ಈ ಸಮಾಜಮುಖಿ ಕಾರ್ಯವನ್ನು ಮುಂದಿನ ಹಂತದಲ್ಲಿ ಆಫ್‌ಲೈನ್‌ ಜತೆಗೂ ತಳಕು ಹಾಕಲು ಉದ್ದೇಶಿಸಲಾಗಿದೆ.

‘ಎನ್‌ಜಿಒ’ಗಳಿಗೂ ಹಣದ ಅಗತ್ಯ ಇದ್ದೇ ಇರುತ್ತದೆ. ‘ಸುಮಾರಾ’ದ ನೆರವಿನಿಂದ ಅವುಗಳ ಹಣದ ಅಗತ್ಯವು ಕೆಲ ಪ್ರಮಾಣದಲ್ಲಾದರೂ ಈಡೇರಲಿದೆ.

‘ಸರಕು ಖರೀದಿಯ ಒಟ್ಟಾರೆ ಮೊತ್ತದಲ್ಲಿನ ದಾನದ ಹಣವನ್ನು (ಉದಾಹರಣೆಗೆ ₹ 10 ಅಥವಾ ₹ 15) ಇ–ಕಾಮರ್ಸ್‌ ತಾಣಗಳೇ ನಿಗದಿಪಡಿಸುತ್ತವೆ. ₹ 10ರಲ್ಲಿನ ₹ 7 ಎನ್‌ಜಿಒಗಳಿಗೆ ಮತ್ತು ₹ 3 ‘ಸುಮಾರಾ’ದ ಮಧ್ಯೆ ಹಂಚಿಕೆಯಾಗುತ್ತದೆ. ಆನ್‌ಲೈನ್‌ನಲ್ಲಿ, ಖರೀದಿಸುವ ಸರಕುಗಳನ್ನು ಮರಳಿಸುವ ನಿಯಮ ಚಾಲ್ತಿಯಲ್ಲಿ ಇರುವುದರಿಂದ ಅಂತಹ ಗಡುವು ಕೊನೆಗೊಂಡ ನಂತರವೇ ಹಣ ಎನ್‌ಜಿಒ ಖಾತೆಗಳಿಗೆ ವರ್ಗಾವಣೆಗೊಳ್ಳುತ್ತದೆ.

ಈ ಪ್ರಕ್ರಿಯೆ ಪೂರ್ಣಗೊಳ್ಳಲು 2 ತಿಂಗಳು ಬೇಕಾಗಬಹುದು. ಎನ್‌ಜಿಒಗಳಿಗೆ ಅಂತರರಾಷ್ಟ್ರೀಯ ಪ್ರಮಾಣಪತ್ರ ನೀಡುವ ಸಂಸ್ಥೆ ಗೈಡ್‌ಸ್ಟಾರ್‌ನಿಂದ ಮಾನ್ಯತೆ ಪಡೆದ ಸಂಸ್ಥೆಗಳಿಗೆ ಮಾತ್ರ ಈ ದಾನದ ಹಣ ಸೇರ್ಪಡೆಗೊಳ್ಳುತ್ತದೆ’ ಎಂದು ಆಯುಷಿ ಹೇಳುತ್ತಾರೆ.

ಆನ್‌ಲೈನ್‌ನಲ್ಲಿ ತಮಗೆ ಎಷ್ಟು ಮಂದಿ ಗ್ರಾಹಕರು ಹಣ ನೀಡಲು ಮುಂದಾಗಿದ್ದಾರೆ. ತಮ್ಮನ್ನು ಎಷ್ಟು ಜನ ಬೆಂಬಲಿಸುತ್ತಾರೆ. ಎಷ್ಟು ಹಣ ಬರಬೇಕಾಗಿದೆ., ಯಾವಾಗ ಹಣ ಜಮೆ ಆಗಲಿದೆ ಮತ್ತಿತರ ವಿವರಗಳ ಮೇಲೆ ಎನ್‌ಜಿಒಗಳು ನಿರಂತರವಾಗಿ ನಿಗಾ ಇರಿಸುವ (ಡ್ಯಾಷ್‌ಬೋರ್ಡ್‌) ಸೌಲಭ್ಯವೂ ಇಲ್ಲಿದೆ. ಇಲ್ಲಿ ದಾನದ ಹಣವು ಸ್ವಯಂಚಾಲಿತವಾಗಿ ನಿರ್ದಿಷ್ಟ ಎನ್‌ಜಿಒಗಳಿಗೆ ಹಂಚಿಕೆಯಾಗಲಿದೆ. ಮಾಹಿತಿಗೆ http://sumara.org ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು