ಶನಿವಾರ, ನವೆಂಬರ್ 23, 2019
18 °C

ಆರು ಟಾಟಾ ಟ್ರಸ್ಟ್‌ಗಳ ನೋಂದಣಿ ರದ್ದು

Published:
Updated:

ನವದೆಹಲಿ : ಆದಾಯ ತೆರಿಗೆ ಇಲಾಖೆಯು ಆರು ಟಾಟಾ ಟ್ರಸ್ಟ್‌ಗಳ ನೋಂದಣಿ ರದ್ದುಪಡಿಸಿದೆ.

ನೋಂದಣಿ ರದ್ದಾದ ಟ್ರಸ್ಟ್‌ಗಳಲ್ಲಿ ಜಮಸೇಟ್ಜಿ ಟಾಟಾ ಟ್ರಸ್ಟ್, ಆರ್‌. ಡಿ . ಟಾಟಾ ಟ್ರಸ್ಟ್‌, ಟಾಟಾ ಶಿಕ್ಷಣ ಟ್ರಸ್ಟ್, ಟಾಟಾ ಸಾಮಾಜಿಕ ಕಲ್ಯಾಣ ಟ್ರಸ್ಟ್‌ ಮತ್ತು ಸಾರ್ವಜನಿಕ ಸೇವಾ ಟ್ರಸ್ಟ್‌ ಸೇರಿವೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂಬೈನ ಆದಾಯ ತೆರಿಗೆ ಪ್ರಧಾನ ಆಯುಕ್ತರು ನೋಂದಣಿ ರದ್ದುಪಡಿಸಿದ್ದಾರೆ.

ಆದಾಯ ತೆರಿಗೆ ಕಾಯ್ದೆಯಲ್ಲಿ ಇರುವ ಅವಕಾಶ ಬಳಸಿಕೊಂಡು 2015ರಲ್ಲಿಯೇ ಟ್ರಸ್ಟ್‌ಗಳ ಹಿತಾಸಕ್ತಿ ರಕ್ಷಿಸುವ ಉದ್ದೇಶಕ್ಕೆ ನೋಂದಣಿ ಮರಳಿಸಲು ಮತ್ತು ಆದಾಯ ತೆರಿಗೆ ವಿನಾಯ್ತಿ ಪಡೆಯದಿರಲು ನಿರ್ಧರಿಸಲಾಗಿತ್ತು ಎಂದು ಟಾಟಾ ಟ್ರಸ್ಟ್‌ ಹೇಳಿಕೆಯಲ್ಲಿ ತಿಳಿಸಿದೆ.

ನೋಂದಣಿಗಳನ್ನು 2015ರಲ್ಲಿಯೇ ಮರಳಿಸಲಾಗಿರುವುದರಿಂದ ಮತ್ತು ಈ ಸಂಬಂಧ ಟ್ರಸ್ಟ್‌ಗಳೇ ಸಮ್ಮತಿ ನೀಡಿರುವುದರಿಂದ ನೋಂದಣಿ ರದ್ದತಿಯು 2015ರಿಂದಲೇ ಜಾರಿಗೆ ಬರಬೇಕಾಗಿದೆ ಎಂದು ಟ್ರಸ್ಟ್‌ ತಿಳಿಸಿದೆ.

ಕೆಲ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ನೋಂದಣಿ ರದ್ದಿಗೆ ಸಂಬಂಧಿಸಿದಂತೆ ಟ್ರಸ್ಟ್‌ಗಳು ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ನೋಟಿಸ್‌ ಪಡೆದಿಲ್ಲ. ಟ್ರಸ್ಟ್‌ಗಳ ಆಸ್ತಿ ಜಪ್ತಿ ಮಾಡಿಕೊಳ್ಳುವ ಸಂದರ್ಭವೇ ಉದ್ಭವಿಸುವುದಿಲ್ಲ ಎಂದು ಟಾಟಾ ಟ್ರಸ್ಟ್‌ ಸ್ಪಷ್ಟನೆ ನೀಡಿದೆ.

1892ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಟಾಟಾ ಟ್ರಸ್ಟ್‌, ದಾನ ಧರ್ಮಕ್ಕೆ ಮೀಸಲಾದ ದೇಶದ ಅತ್ಯಂತ ಹಳೆಯ ಸಂಘಟನೆಯಾಗಿದೆ.

ಪ್ರತಿಕ್ರಿಯಿಸಿ (+)