ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ತೆರಿಗೆನಿಮಗೆ ಲಾಭ ಆಗಿದೆಯಾ?

Last Updated 9 ಜುಲೈ 2019, 19:30 IST
ಅಕ್ಷರ ಗಾತ್ರ

ಯಾ ವುದೇ ಬಜೆಟ್ ಆರ್ಥಿಕತೆಯ ಮೇಲೆ ಪರಿಣಾಮಕಾರಿಯಾದ ಪ್ರಭಾವ ಬೀರಬೇಕಾದರೆ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವ ಎಲ್ಲ ವರ್ಗದವರ ಮೇಲೆ ಸಕಾರಾತ್ಮಕ ಪ್ರಭಾವ ಬೀರುವಂತಿರಬೇಕು. ಕಾರ್ಪೊರೇಟ್ ವಲಯ ಮತ್ತು ವೈಯಕ್ತಿಕ ತೆರಿಗೆ ಪಾವತಿಸುವವರು ಇತ್ತೀಚಿನ ವರ್ಷಗಳಲ್ಲಿ ಕೇಂದ್ರದ ಬೊಕ್ಕಸಕ್ಕೆ ಹೇರಳವಾಗಿ ನೇರ ತೆರಿಗೆ ಪಾವತಿಸುತ್ತಿದ್ದಾರೆ. ಈ ಬಾರಿಯ ಬಜೆಟ್ ದೇಶದ ಸಮಗ್ರ ಆರ್ಥಿಕತೆಗೆ ಅನುಕೂಲಕರವಾಗುವ ಆಶಾದಾಯಕ ವಾತಾವರಣವನ್ನು ಸೃಷ್ಟಿಸಿದ್ದರೂ ಪ್ರತಿ ತಿಂಗಳೂ ಸಂಬಳ ಎಣಿಸುವ ವೇತನ ವರ್ಗಕ್ಕೆ ಅನುಕೂಲಕರವಾಗುವ ಯಾವುದೇ ದೊಡ್ಡ ಮಟ್ಟದ ತೆರಿಗೆ ಪ್ರಸ್ತಾಪಗಳನ್ನು ಬಜೆಟ್‍ನಲ್ಲಿ ಘೋಷಿಸಿಲ್ಲ. ವಾರ್ಷಿಕ ₹ 5 ಲಕ್ಷಕ್ಕಿಂತ ಅಧಿಕ ನಿವ್ವಳ ಆದಾಯಗಳಿಸುವ ಮಧ್ಯಮ ವರ್ಗದ ಜನರ ಪಾಲಿಗೆ ಈ ಬಜೆಟ್‌ ಅಷ್ಟೇನೂ ಪ್ರಯೋಜನಕಾರಿ ಆಗಿಲ್ಲವೆಂದೇ ಹೇಳಬೇಕು.

ಫೆಬ್ರವರಿಯಲ್ಲಿ ಮಂಡಿಸಿದ್ದ ಮಧ್ಯಂತರ ಬಜೆಟ್‍ನಲ್ಲೂ ಗಮನಾರ್ಹ ಬದಲಾವಣೆ ಮಾಡುವ ಅವಕಾಶಗಳು ತೀರಾ ಕಡಿಮೆ ಇದ್ದರೂ, ವೈಯಕ್ತಿಕ ತೆರಿಗೆದಾರರ ಆಕಾಂಕ್ಷೆಗಳನ್ನು ಸರ್ಕಾರವು ಸಾರ್ವತ್ರಿಕ ಚುನಾವಣಾ ದೃಷ್ಟಿಯಿಂದಷ್ಟೇ ಪರಿಗಣಿಸಿತ್ತು. ಇದರ ಪರಿಣಾ
ಮವಾಗಿ ₹ 2.5 ಲಕ್ಷದ ಮೂಲ ತೆರಿಗೆ ಸ್ತರದಲ್ಲಿ ಬದಲಾವಣೆ ಮಾಡದೆ, ₹ 5 ಲಕ್ಷ ‘ನಿವ್ವಳ ಆದಾಯ’ ಮಿತಿಯೊಳಗೆ ಬರುವ ಜನರನ್ನಷ್ಟೇ ಉದ್ದೇಶವಾಗಿಟ್ಟು ’ತೆರಿಗೆ ರಿಯಾಯ್ತಿ’ (ಟ್ಯಾಕ್ಸ್ ರಿಬೇಟ್) ನೀಡಿತ್ತು. ಈ ಮೂಲಕ ಸರ್ಕಾರ ವೇತನ ವರ್ಗದ ಪರವಾಗಿದೆ ಎಂಬ ಚಿಂತನೆಗೆ ಮುನ್ನುಡಿ ಬರೆಯಲಾಗಿತ್ತು. ಇದರ ಪರಿಣಾಮವಾಗಿ, ₹ 5 ಲಕ್ಷಕ್ಕಿಂತ ಕಡಿಮೆ ಮೊತ್ತದ ನಿವ್ವಳ ಆದಾಯ ಹೊಂದಿದ ಹಂತದವರಿಗೆ (first slab) ಶೇ 5ರ ಮೂಲ ತೆರಿಗೆ ಹಾಗೂ ಅದರ ಮೇಲೆ ಹೇರಲಾಗುವ ಶೇ 4ರ ಸೆಸ್ ಸೇರಿದಂತೆ ಒಟ್ಟಾರೆ ಶೇ 5.2 ರಷ್ಟು ತೆರಿಗೆ ಉಳಿತಾಯದ ಪ್ರಸ್ತಾಪ ಮಾಡಿದ್ದು ಒಳ್ಳೆಯ ಬೆಳವಣಿಗೆಯಾಗಿತ್ತು. ಈ ಬದಲಾವಣೆಯಿಂದ ಕಡಿಮೆ ಆದಾಯದ ತೆರಿಗೆದಾರರಿಗೆ ವಾರ್ಷಿಕವಾಗಿ ₹ 13,000ದವರೆಗೆ ಉಳಿತಾಯ ಸಾಧ್ಯವಾಗಿತ್ತು.

ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ಎಲ್ಲ ವರ್ಗದ ಜನರೂ ಒಂದಿಷ್ಟು ತೆರಿಗೆ ಕಡಿತವನ್ನು ಸಹಜವಾಗಿ ನಿರೀಕ್ಷಿಸಿದ್ದರು. ಅದಕ್ಕೂ ಬಲವಾದ ಕಾರಣವಿದೆ. ಮೋದಿ ಸರ್ಕಾರ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಜಾರಿಗೆ ತಂದಿದ್ದ ₹ 2.50 ಲಕ್ಷಗಳ ಮೂಲ ಆದಾಯದ ವಿನಾಯ್ತಿ ಮಿತಿ ಇಂದಿಗೂ ಹಾಗೆಯೇ ಮುಂದುವರಿಯುತ್ತಿದೆ. ಸಾಮಾನ್ಯವಾಗಿ ಐದು ವರ್ಷಗಳಿಗೊಮ್ಮೆಯಾದರೂ ಹಣದುಬ್ಬರ, ವೃದ್ಧಿಯಾಗುತ್ತಿರುವ ದೈನಂದಿನ ವೆಚ್ಚ, ನಿರುದ್ಯೋಗ ಇತ್ಯಾದಿ ಪರಿಗಣಿಸಿ ಆದಾಯ ತೆರಿಗೆಯ ಮೂಲ ಸ್ತರವನ್ನು ಕಾಲಕಾಲಕ್ಕೆ ಹೆಚ್ಚಿಸಬೇಕು. ಈ ಬಾರಿಯೂ ಅಂತಹ ನಿರೀಕ್ಷೆ ಈಡೇರಿಲ್ಲ.

ಸರ್ಕಾರ ಮಧ್ಯಮ ವರ್ಗದವರಿಗೇನೂ ಕೊಟ್ಟಿಲ್ಲ ಎಂದೇನೂ ಅಲ್ಲ. ಅದರ ಪ್ರಯೋಜನ ಎಲ್ಲರಿಗೂ ಪಡೆದುಕೊಳ್ಳಬಹುದೆಂಬ ಖಾತರಿ ಇಲ್ಲದಿರುವುದೇ ಅನೇಕರ ನಿರಾಶೆಗೆ ಕಾರಣವಾಗಿದೆ. ವಿದ್ಯುತ್ ಚಾಲಿತ ಕಾರುಗಳ ಖರೀದಿಯ ಮೇಲೆ ಪಡೆದ ಸಾಲದ ಮೇಲೆ ವಾರ್ಷಿಕವಾಗಿ ₹ 1.5 ಲಕ್ಷ ಬಡ್ಡಿ ವಿನಾಯ್ತಿ ಘೋಷಿಸಲಾಗಿದೆ. ಇದು ಮುಂಬರುವ ದಿನಗಳಲ್ಲಿ ವಾಹನ ಖರೀದಿಸುವವರಿಗಷ್ಟೇ ಪ್ರಯೋಜನಕಾರಿಯಾಗಲಿದೆ ಕೈಗೆಟುಕುವ ಗೃಹ ನಿರ್ಮಾಣ ಯೋಜನೆಯಡಿ (ಅಫೋರ್ಡೆಬಲ್ ಹೌಸಿಂಗ್ ಸ್ಕೀಂ) ₹45 ಲಕ್ಷ ಮೊತ್ತದೊಳಗಿನ ಮನೆ ಖರೀದಿಗೆ ₹1.5 ಲಕ್ಷದಷ್ಟು ಹೆಚ್ಚುವರಿ ಬಡ್ಡಿ ವಿನಾಯಿತಿ ನೀಡಲಾಗಿದೆ. ಈ ತನಕ ಮನೆ ಖರೀದಿಸಿ ಬಡ್ಡಿ ಪಾವತಿಸುತ್ತಿರುವವರಿಗೆ ಇದರಿಂದ ಯಾವುದೇ ಪ್ರಯೋಜನ ದೊರೆಯುವುದಿಲ್ಲ. ಈ ಎರಡೂ ತೆರಿಗೆ ವಿನಾಯಿತಿಗಳು ಹೊಸದಾಗಿ ಸಾಲ ಮಾಡುವವರಿಗಷ್ಟೇ ಪ್ರಯೋಜನಕಾರಿಯಾಗಲಿವೆ.

ಇನ್ನು ಶ್ರೀಮಂತ ವರ್ಗದ ತೆರಿಗೆದಾರರ ವಿಚಾರ ತೆಗೆದುಕೊಂಡರೆ, ಒಂದು ಹಂತಕ್ಕೂ ಮೇಲ್ಪಟ್ಟ ಆದಾಯ ಮಿತಿಯ ಮೇಲೆ ಹೇರಲಾಗುವ ತೆರಿಗೆಯೇ ಸರ್ಚಾರ್ಜ್. ಈ ಬಾರಿ ಅತಿ ಶ್ರೀಮಂತರೆಂಬ ಹೊಸದೊಂದು ವರ್ಗ ಸೃಷ್ಟಿಸುವ ಮೂಲಕ ಸರ್ಕಾರಕ್ಕೆ ಬಡವರ್ಗದ ಜನತೆಗೆ ‘ತೆರಿಗೆ ರಿಯಾಯಿತಿ’ ಕೊಟ್ಟು ನಷ್ಟವಾಗಬಹುದಾದ ಮೊತ್ತವನ್ನು ಪರೋಕ್ಷವಾಗಿ ಭರಿಸುವಂತಹ ಸಾಹಸಕ್ಕೆ ಹೊರಟಿದೆ. ಈ ಬಾರಿ ಶೇ 25 ಹಾಗೂ ಶೇ 37ರ ಹೊಸದಾದ ಎರಡು ಸರ್ಚಾರ್ಜ್ ದರಗಳನ್ನು ಪರಿಚಯಿಸಿದೆ.

ಪ್ರಸ್ತುತ ₹ 50 ಲಕ್ಷಗಳಿಂದ ₹ 1 ಕೋಟಿಯ ತನಕದ ಆದಾಯಕ್ಕೆ ಶೇ 10 ರಷ್ಟು ಸರ್ಚಾರ್ಜ್ ವಿಧಿಸಲಾಗುತ್ತದೆ. ಅದೇ ರೀತಿ ₹ 1 ಕೋಟಿಗೂ ಮೀರಿದ ಆದಾಯವುಳ್ಳವರಿಗೆ ಶೇ 15 ರಷ್ಟು ಸರ್ಚಾರ್ಜ್ ವಿಧಿಸಲಾಗುತ್ತದೆ. ಈ ಬಾರಿಯ ಬಜೆಟ್‍ನಲ್ಲಿ ಶೇ 15ರ ಸರ್ಚಾರ್ಜ್ ಮಿತಿಯನ್ನು , ₹ 1 ಕೋಟಿಯಿಂದ ₹ 2 ಕೋಟಿ ಮಿತಿಯ ಆದಾಯದ ತನಕ ವಿಸ್ತರಿಸಲಾಗಿದೆ. ಅಲ್ಲದೆ, ಇನ್ನೂ ಎರಡು ಸರ್ಚಾರ್ಜ್ ಶ್ರೇಣಿಗಳನ್ನು ಅತಿ ಶ್ರೀಮಂತರೆಂಬ ವರ್ಗದ ಜನರ ಮೇಲೆ ಬಜೆಟ್‍ನಲ್ಲಿ ಹೇರಲಾಗಿದೆ.

ನಮ್ಮಲ್ಲಿ ಈ ಹಿಂದೆ ತೆರಿಗೆ ದರವು ವಿಪರೀತವಾಗಿತ್ತೆಂದೇ ಹೇಳಬೇಕು. 1970-71 ರ ಅವಧಿಯಲ್ಲಿ ಶೇ 93.5 ರಷ್ಟಿದ್ದ ತೆರಿಗೆ ದರ 1980-81 ರ ಅವಧಿಯಲ್ಲಿ ಶೇ 66 ಕ್ಕೂ, 1991-92 ರ ಅವಧಿಯಲ್ಲಿ ಇದನ್ನು ಶೇ 56ಕ್ಕೆ ಇಳಿಸಲಾಯಿತು. 1995-96ರ ಅವಧಿಯಲ್ಲಿ ಶೇ 40ರಷ್ಟಿದ್ದ ಅಗ್ರ ತೆರಿಗೆ ದರ ತದನಂತರ, ಇತ್ತೀಚಿನ ಬಹುತೇಕ ವರ್ಷಗಳಲ್ಲಿ ಇದನ್ನು ಶೇ 34ರೊಳಗೆ ಇರುವಂತೆ ನೋಡಿಕೊಳ್ಳುವುದರಲ್ಲಿ ಯುಪಿಎ ಹಾಗೂ ಎನ್‍ಡಿಎ ಸರ್ಕಾರಗಳು ಸಫಲವಾಗಿದ್ದವು. ಆದರೆ, ಈ ಬಾರಿ ₹ 2 ಕೋಟಿಯಿಂದ ₹ 5 ಕೋಟಿ ವಾರ್ಷಿಕ ಆದಾಯವುಳ್ಳವರು ತಮ್ಮ ಬಹುಪಾಲು ಆದಾಯಕ್ಕೆ ಶೇ 39ರ ದರದಲ್ಲೂ ₹ 5 ಕೋಟಿಗೂ ಅಧಿಕ ಆದಾಯ ಉಳ್ಳವರು ಶೇ 42.74ರ ಅಗ್ರ ತೆರಿಗೆ ಹೊರೆಯನ್ನು ಭರಿಸಬೇಕಾಗುತ್ತದೆ.

ದೇಶದಲ್ಲಿರುವ ಹೆಚ್ಚು ಕಡಿಮೆ 5 ಕೋಟಿ ಆದಾಯ ತೆರಿಗೆ ಪಾವತಿದಾರರಲ್ಲಿ ವಾರ್ಷಿಕವಾಗಿ ₹ 1 ಕೋಟಿಯಿಂದ ₹ 5 ಕೋಟಿಯೊಳಗೆ ಆದಾಯಗಳಿಸುವವರ ಸಂಖ್ಯೆ ಒಂದು ಲಕ್ಷಕ್ಕಿಂತಲೂ ಕಡಿಮೆ. ಅದರಲ್ಲೂ ₹ 5 ಕೋಟಿಗಳಿಗಿಂತ ಅಧಿಕ ಆದಾಯ ಪಾವತಿಸುವವರ ಸಂಖ್ಯೆಯು ಇಷ್ಟೊಂದು ದೊಡ್ಡ ದೇಶದಲ್ಲಿ ಕೇವಲ ಹತ್ತು ಸಾವಿರದ ಆಸುಪಾಸು ಇದೆ. ಹೀಗಾಗಿ ಈ ಅತಿ ಶ್ರೀಮಂತ ವರ್ಗಕ್ಕಷ್ಟೇ ಇದು ಬಾಧಿಸುತ್ತದೆ.

₹ 5 ಲಕ್ಷದೊಳಗಿನ ಆದಾಯವುಳ್ಳವರಿಗೆ ತೆರಿಗೆ ರಿಯಾಯಿತಿ ಕೊಟ್ಟ ಕಾರಣ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ 18,500 ಕೋಟಿ ಕೊರತೆ ಕಾಡಲಿದೆ. ಅದೇ ರೀತಿ ಆಂತರಿಕ ಬಜೆಟ್‍ನಲ್ಲಿ ಘೋಷಿಸಿದ್ದ ಸ್ಟ್ಯಾಂಡರ್ಡ್ ಡಿಡಕ್ಷನ್ ವಾರ್ಷಿಕವಾಗಿ ₹ 4,700 ಕೋಟಿಗಳ ಹೊರೆಯಾಗಲಿದೆ. ಈ ನಷ್ಟವನ್ನು ಸರಿದೂಗಿಸಲು ಶ್ರೀಮಂತ ವರ್ಗದವರಿಂದ ಒಂದಿಷ್ಟು ಹೆಚ್ಚುವರಿ ತೆರಿಗೆ ವಸೂಲಿ ಮಾಡುವ ಪ್ರಯತ್ನವು ₹ 27.86 ಲಕ್ಷ ಕೋಟಿಗಳ ಒಟ್ಟು ಬಜೆಟ್ ಗಾತ್ರದಲ್ಲಿ ಸುಮಾರು ₹ 12,000 ಕೋಟಿ ₹ ಮೊತ್ತವನ್ನಷ್ಟೇ ಸರ್ಕಾರದ ಬೊಕ್ಕಸ ಭರ್ತಿ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT