ಮಂಗಳವಾರ, ಆಗಸ್ಟ್ 16, 2022
29 °C

ಟೆಲಿಕಾಂ ವಹಿವಾಟು ಸುಲಲಿತ ಆಗಲಿ : ಬಿಐಎಫ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್‌) ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ದೂರಸಂಪರ್ಕ ಕಂಪನಿಗಳಿಗೆ ಮುಂದಿನ ಹೆಜ್ಜೆಗಳ ಕುರಿತು ಸ್ಪಷ್ಟತೆ ತಂದುಕೊಟ್ಟಿರುವ ಕಾರಣ, ಈ ವಲಯವನ್ನು ಲಾಭದಾಯಕ ಆಗಿಸಲು ಕೇಂದ್ರ ದೂರಪಸಂಪರ್ಕ ಇಲಾಖೆ ಗಮನ ನೀಡಬೇಕು ಎಂದು ‘ಬ್ರಾಡ್‌ಬ್ಯಾಂಡ್‌ ಇಂಡಿಯಾ ಫೋರಂ’ (ಬಿಐಎಫ್‌) ಹೇಳಿದೆ.

ದೂರಸಂಪರ್ಕ ವಲಯವು ಹೂಡಿಕೆದಾರರಿಗೆ ಆಕರ್ಷಕ ಅನಿಸುವಂತೆ ಮಾಡಬೇಕು, ಈ ವಲಯದಲ್ಲಿನ ವಾಣಿಜ್ಯ ವಹಿವಾಟುಗಳು ಸುಲಲಿತ ಆಗಬೇಕು, ಹೊರೆ ಅನಿಸುವಂತಹ ತೆರಿಗೆ ಪ್ರಮಾಣ ಕಡಿಮೆ ಆಗಬೇಕು ಎಂದು ಕೂಡ ಅದು ಹೇಳಿದೆ.

ಬ್ರಾಡ್‌ಬ್ಯಾಂಡ್‌ ಸೇವೆಗಳನ್ನು ಹೆಚ್ಚು ವ್ಯಾಪಕಗೊಳಿಸಲು ನೆರವಾಗುವ ‘ಸಾರ್ವಜನಿಕ ವೈ–ಫೈ’ ಕುರಿತ ಶಿಫಾರಸು ಸೇರಿದಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮಾಡಿರುವ ಇತರ ಹಲವು ಶಿಫಾರಸುಗಳ ವಿಚಾರವಾಗಿ ಇಲಾಖೆ ತಕ್ಷಣ ತೀರ್ಮಾನ ಕೈಗೊಳ್ಳಬೇಕು ಎಂದು ಬಿಐಎಫ್ ಒತ್ತಾಯಿಸಿದೆ. 

‘ದೂರಸಂಪರ್ಕ ಉದ್ಯಮವನ್ನು ಲಾಭದಾಯಕ ಆಗಿ ಮಾಡುವುದು ಹೇಗೆ, ಈ ಉದ್ಯಮವನ್ನು ಹೂಡಿಕೆದಾರರಿಗೆ ಆಕರ್ಷಕವಾಗಿ ಮಾಡುವುದು ಹೇಗೆ ಎಂಬ ಬಗ್ಗೆ ಸರ್ಕಾರ ಗಮನ ನೀಡಬೇಕು. ದೇಶಕ್ಕೆ ಬಂಡವಾಳ ಹರಿದುಬರಬೇಕು ಎಂದಾದರೆ, ವಾಣಿಜ್ಯೋದ್ಯಮ ವಹಿವಾಟುಗಳು ಸುಲಲಿತ ಆಗಬೇಕು’ ಎಂದು ಬಿಐಎಫ್ ಅಧ್ಯಕ್ಷ ಟಿ.ವಿ. ರಾಮಚಂದ್ರನ್ ಹೇಳಿದರು.

ಟ್ರಾಯ್‌ ಮಾಡಿರುವ ಹಲವು ಶಿಫಾರಸುಗಳನ್ನು ಇಲಾಖೆಗೆ ಈಗಾಗಲೇ ರವಾನಿಸಲಾಗಿದೆ. ಆದರೆ, ಅವು ಅನುಷ್ಠಾನಕ್ಕೆ ಬಂದಿಲ್ಲ. ಈಗ ಅವುಗಳನ್ನು ಅನುಷ್ಠಾನಕ್ಕೆ ತರಬೇಕು. ಹಾಗೆಯೇ, ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿಯ ಅಂಶಗಳನ್ನು ಕೂಡ ಆದಷ್ಟು ಬೇಗ ಕಾರ್ಯರೂಪಕ್ಕೆ ತರಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು