ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲಾನ್ ಮಸ್ಕ್‌ರಿಂದ ಟ್ವಿಟರ್ ಖರೀದಿ ಪ್ರಸ್ತಾವ: ತಂತ್ರಜ್ಞಾನ ಪರಿಣತರು ಆತಂಕ

Last Updated 15 ಏಪ್ರಿಲ್ 2022, 14:14 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಎಎಫ್‌ಪಿ): ಟ್ವಿಟರ್ ಕಂಪನಿಯನ್ನು ಖರೀದಿಸಿ, ಅದನ್ನು ಖಾಸಗಿ ಕಂಪನಿಯನ್ನಾಗಿ ಪರಿವರ್ತಿಸುವ ಎಲಾನ್ ಮಸ್ಕ್ ಪ್ರಸ್ತಾವದ ಬಗ್ಗೆ ತಂತ್ರಜ್ಞಾನ ಜಗತ್ತಿನ ಪರಿಣತರು ಆತಂಕ ವ್ಯಕ್ತಪಡಿಸಿದ್ದಾರೆ.

‘ಟ್ವಿಟರ್ ಕಂಪನಿಯನ್ನು ಒಬ್ಬ ವ್ಯಕ್ತಿ ನಿಯಂತ್ರಿಸುವಂತೆ ಆಗಬಾರದು. ಅದರ ಬದಲಿಗೆ, ಅದರ ನಿಯಂತ್ರಣವು ವಿಕೇಂದ್ರಿತ ಆಗಬೇಕು’ ಎಂದು ವೆಂಚರ್ ಕ್ಯಾಪಿಟಲಿಸ್ಟ್ ಆಗಿರುವ ಫ್ರೆಡ್ ವಿಲ್ಸನ್ ಹೇಳಿದ್ದಾರೆ.

ಟ್ವಿಟರ್ ಖರೀದಿಗೆ ಮಸ್ಕ್ ಮುಂದಿರಿಸಿರುವ ಪ್ರಸ್ತಾವಕ್ಕೆ ಕಂಪನಿಯ ಅತಿದೊಡ್ಡ ಷೇರುದಾರರಲ್ಲಿ ಒಬ್ಬರಾಗಿರುವ ಸೌದಿಯ ರಾಜಕುಮಾರ ಅಲ್ವಲೀದ್ ಬಿನ್ ತಲಾಲ್ ವಿರೋಧ ವ್ಯಕ್ತಪಡಿಸಿದ್ದಾರೆ. ಮಸ್ಕ್ ಇರಿಸಿರುವ ₹ 3.12 ಲಕ್ಷ ಕೋಟಿಯ ಪ್ರಸ್ತಾವವು ತೀರಾ ಕಡಿಮೆ ಎಂದು ಅವರು ಹೇಳಿದ್ದಾರೆ.

ಟ್ವಿಟರ್ ಅನುಸರಿಸುವ ನಿಯಮಗಳು (ಆಲ್ಗಾರಿದಂ) ಯಾವುವು ಎಂಬುದನ್ನು ಸಾರ್ವಜನಿಕರಿಗೆ ಪರಿಶೀಲನೆಗೆ ಮುಕ್ತವಾಗಿಸಲಾಗುತ್ತದೆ ಎಂದು ಮಸ್ಕ್ ಹೇಳಿದ್ದಾರೆ. ಆ ನಿಯಮಗಳಲ್ಲಿ ಬದಲಾವಣೆಗಳನ್ನು ಸೂಚಿಸಲು ಕೂಡ ಸಾರ್ವಜನಿಕರಿಗೆ ಅವಕಾಶ ಇರುತ್ತದೆ ಎಂದು ಅವರು ಹೇಳಿದ್ದಾರೆ.

ಟ್ವಿಟರ್‌ ವೇದಿಕೆಯಲ್ಲಿನ ವಸ್ತು–ವಿಷಯಗಳನ್ನು ಹೆಚ್ಚು ನಿಯಂತ್ರಣ ಮುಕ್ತವಾಗಿಸುವುದು ತಮ್ಮ ನಿಲುವು ಎಂಬುದನ್ನು ಮಸ್ಕ್ ಮತ್ತೊಮ್ಮೆ ಹೇಳಿದ್ದಾರೆ. ಮಸ್ಕ್‌ ಅವರು ತಮ್ಮನ್ನು ತಾವು ‘ಪರಿಪೂರ್ಣ ಹಾಗೂ ಮುಕ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯ’ದ ಪರ ಇರುವವರು ಎಂದು ಗುರುತಿಸಿಕೊಂಡಿದ್ದಾರೆ.

ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಿತಿಗಳೇ ಇಲ್ಲದಂತೆ ಮಾಡುವುದು ವಾಸ್ತವದಲ್ಲಿ ತೀರಾ ಸಂಕೀರ್ಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ‘ಟ್ವಿಟರ್ ಕಂಪನಿಯನ್ನು ಮಸ್ಕ್ ಅವರು ಸ್ವಾಧೀನಕ್ಕೆ ತೆಗೆದುಕೊಂಡರೆ ಸಮಾಜ ಮತ್ತು ರಾಜಕೀಯದ ಮೇಲೆ ಆಗಬಹುದಾದ ಪರಿಣಾಮಗಳು ಭಯ ಹುಟ್ಟಿಸುತ್ತಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಏನನ್ನೂ ಬೇಕಿದ್ದರೂ ಹೇಳಬಹುದು ಎಂದು ಅವರು ನಂಬಿರುವಂತಿದೆ. ಆದರೆ, ಪ್ರಜಾತಂತ್ರ ಉಳಿಯಬೇಕು ಎಂದಾದರೆ ವಸ್ತು–ವಿಷಯಗಳ ಮೇಲೆ ಹೆಚ್ಚು ನಿಗಾ ಇರಿಸಬೇಕು’ ಎಂದು ವಾಷಿಂಗ್ಟನ್‌ ಪೋಸ್ಟ್‌ನ ಅಂಕಣಕಾರ ಮ್ಯಾಕ್ಸ್ ಬೂಟ್ ಹೇಳಿದ್ದಾರೆ.

ರಾಯಿಟರ್ಸ್ ವರದಿ: ಟ್ವಿಟರ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪರಾಗ್ ಅಗರ್ವಾಲ್ ಅವರು ನೌಕರರಿಗೆ, ‘ಕಂಪನಿಯನ್ನು ಯಾರೂ ಒತ್ತೆಯಾಳು ಮಾಡಿಕೊಂಡಿಲ್ಲ’ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

‘ಕಂಪನಿಯ ನೌಕರರಾಗಿ ಇಲ್ಲಿ ಏನಾಗುತ್ತದೆ ಎಂಬುದು ನಮ್ಮ ನಿಯಂತ್ರಣದಲ್ಲಿರುತ್ತದೆ’ ಎಂದೂ ಅಗರ್ವಾಲ್ ಹೇಳಿದ್ದಾರೆ. ಕಂಪನಿಯನ್ನು ಖರೀದಿಸುವುದಾಗಿ ಮಸ್ಕ್ ಹೇಳಿದ ನಂತರದಲ್ಲಿ ಈ ಬೆಳವಣಿಗೆ ನಡೆದಿದೆ.

ಮಸ್ಕ್ ಅವರಿಗೆ ಕಂಪನಿಯ ಆಡಳಿತ ಮಂಡಳಿಯಲ್ಲಿ ಸ್ಥಾನ ನೀಡುವ ತೀರ್ಮಾನವನ್ನು ಕಂಪನಿ ತೆಗೆದುಕೊಂಡಿದ್ದು ಹೇಗೆ, ಶತಕೋಟ್ಯಧೀಶರನ್ನೆಲ್ಲ ಆಡಳಿತ ಮಂಡಳಿಗೆ ಆಹ್ವಾನಿಸಲಾಗುತ್ತದೆಯೇ ಎಂಬ ಪ್ರಶ್ನೆಗಳು ಕೂಡ ಅಗರ್ವಾಲ್ ಅವರಿಗೆ ನೌಕರರ ಕಡೆಯಿಂದ ಎದುರಾದವು ಎಂದು ಗೊತ್ತಾಗಿದೆ.

ಈ ‍ಪ್ರಶ್ನೆಗಳಿಗೆ ಅಗರ್ವಾಲ್ ಅವರು, ಷೇರುದಾರರ ಹಿತ ಕಾಯುವ ಇರಾದೆಯೊಂದಿಗೆ ಆಡಳಿತ ಮಂಡಳಿ ಕಾರ್ಯ ನಿರ್ವಹಿಸುತ್ತಿದೆ ಎಂದು ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT