ಮಾರಾಟಕ್ಕೆ ಬೆಳೆಗಾರರ ನಿರಾಸಕ್ತಿ
ಮಂಗಳೂರು: ಬೆಂಬಲ ಬೆಲೆಯಡಿ ಕೊಬ್ಬರಿ ಮಾರಾಟ ಮಾಡಲು ದಕ್ಷಿಣ ಕನ್ನಡ ಜಿಲ್ಲೆಯ ತೆಂಗು ಬೆಳೆಗಾರರು ಆಸಕ್ತಿ ತೋರಿಸಿಲ್ಲ. ‘ಜಿಲ್ಲೆಯಲ್ಲಿ ಸುಳ್ಯ ಪುತ್ತೂರು ಬೆಳ್ತಂಗಡಿ ಬಂಟ್ವಾಳ ಮೂಡುಬಿದಿರೆ ಹಾಗೂ ಮಂಗಳೂರಿನಲ್ಲಿ ಎರಡು ಕಡೆ ಸೇರಿ ಒಟ್ಟು ಏಳು ಕೇಂದ್ರಗಳನ್ನು ತೆರೆಯಲಾಗಿದೆ. ಇದುವರೆಗೆ ಯಾವ ತೆಂಗು ಬೆಳೆಗಾರರೂ ಕೊಬ್ಬರಿ ಮಾರಾಟಕ್ಕೆ ಹೆಸರು ನೋಂದಾಯಿಸಿಲ್ಲ’ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ‘ಹೆಸರು ನೋಂದಣಿಗೆ ಇಲ್ಲಿ ಸರ್ವರ್ ಸಮಸ್ಯೆ ಇಲ್ಲ. ಕರಾವಳಿ ಪ್ರದೇಶದಲ್ಲಿ ತೇವಾಂಶ ಹೆಚ್ಚು ಇರುವುದರಿಂದ ಉಂಡೆ ಕೊಬ್ಬರಿ ಬೇಗ ಹಾಳಾಗುತ್ತದೆ. ಅದರ ಬದಲು ಇಲ್ಲಿನ ತೆಂಗು ಬೆಳೆಗಾರರು ಮಿಲ್ಲಿಂಗ್ ಕೊಬ್ಬರಿಯನ್ನೇ (ಚಿಕ್ಕ ಚಿಕ್ಕ ತುಂಡು) ಹೆಚ್ಚಾಗಿ ತಯಾರಿಸುತ್ತಾರೆ. ಅವರು ಅದನ್ನು ನೇರವಾಗಿ ಗಾಣಗಳಿಗೆ ಒಯ್ದು ತೆಂಗಿನ ಎಣ್ಣೆ ಮಾಡಿಸುತ್ತಾರೆ. ಇಲ್ಲವಾದರೆ ಚಿಪ್ಪುಸಹಿತ ತೆಂಗಿನ ಕಾಯಿ ಮಾರುತ್ತಾರೆ’ ಎಂದು ವಿವರಿಸಿದರು.